Site icon Vistara News

ಚಿನ್ನದ ಸರ ಮಾರಿ ಕ್ರಿಕೆಟ್​ ಕಿಟ್​ ಕೊಡಿಸಿದ ತಾಯಿ, ಸಾಲ ಮಾಡಿ ಬ್ಯಾಟ್ ಕೊಡಿಸಿದ ತಂದೆ; ಇದು ಧ್ರುವ್ ಜುರೆಲ್ ಕ್ರಿಕೆಟ್​ ಜರ್ನಿ

ಬೆಂಗಳೂರು: ಕೆಲವು ಕ್ರೀಡಾಪಟುಗಳ ಬಗ್ಗೆ ಬರೆಯುವಾಗ, ಓದುವಾಗ ಯಾವಾಗಲೂ ರೋಮಾಂಚನಗೊಳ್ಳುತ್ತೇವೆ. ಕಡು ಬಡತನದಲ್ಲಿ ಬೆಳೆದು ಕೊನೆಗೆ ಯಶಸ್ಸಿನ ಸಾಧನೆಯ ಗೌರಿಶಿಖರವನ್ನು ಏರಿ ಗೆಲುವಿನ ಬಾವುಟ ಹಾರಿಸಿದ ಅದೆಷ್ಟೋ ಕ್ರೀಡಾಪಟುಗಳಿದ್ದಾರೆ. ಇದೀಗ ಈ ಸಾಲಿಗೆ ಉತ್ತರ ಪ್ರದೇಶದ ಕ್ರಿಕೆಟಿಗ ಧ್ರುವ್ ಜುರೆಲ್​​ಗೆ (Dhruv Jurel) ಸೇರ್ಪಡೆಗೊಂಡಿದ್ದಾರೆ.

ಹೌದು ಉತ್ತರ ಪ್ರದೇಶದಲ್ಲಿ ಜನಿಸಿದ ಧ್ರುವ್ ಜುರೆಲ್​ ಯಾವುದೇ ಶ್ರೀಮಂತ ಕುಟುಂಬದಲ್ಲಿ ಅಥವಾ ಕ್ರಿಕೆಟ್​ ಹಿನ್ನೆಲೆಯಿಂದ ಬಂದ ಪ್ರತಿಭೆಯಲ್ಲ. ಕಠಿಣ ಪರಿಶ್ರಮದ ಮೂಲಕವೇ ಬೆಳೆದು ಬಂದು ಇದೀಗ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯ ಮೊದಲೆರಡು ಪಂದ್ಯಗಳಿಗೆ ಟೀಮ್​ ಇಂಡಿಯಾದಲ್ಲಿ ಅವಕಾಶ ಪಡೆದಿದ್ದಾರೆ. ಈ ಮೂಲಕ ತಮ್ಮ ಬದುಕಿನಲ್ಲಿ ಹೊಸ ಇನಿಂಗ್ಸ್​ ಆರಂಭಿಸುವ ನಿರೀಕ್ಷೆಯಲ್ಲಿದ್ದಾರೆ.

dhruv jurel


ಚಿನ್ನದ ಸರ ಮಾರಿ ಕ್ರಿಕೆಟ್​ ಕಿಟ್​ ಕೊಡಿಸಿದ ತಾಯಿ


ಧ್ರುವ್ ಜುರೆಲ್ ಅವರ ಕ್ರಿಕೆಟ್​ ಕಥೆ ತುಂಬಾ ಸ್ಫೂರ್ತಿದಾಯಕವಾಗಿದೆ. ಬಡತನದ ಹಿನ್ನೆಲೆಯಿಂದ ಬಂದ ಧ್ರುವ್ ಜುರೆಲ್ ತಾವು ಪಟ್ಟ್ ಕಷ್ಟದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ, “ನಾನು ಆರ್ಮಿ ಸ್ಕೂಲ್‌ನಲ್ಲಿ ಓದುತ್ತಿದ್ದೆ. ರಜಾದಿನಗಳಲ್ಲಿ ನಾನು ಆಗ್ರಾದ ಏಕಲವ್ಯ ಸ್ಟೇಡಿಯಂನಲ್ಲಿ ಕ್ರಿಕೆಟ್ ಶಿಬಿರಕ್ಕೆ ಸೇರುಲು ಮುಂದಾದೆ. ತಂದೆ ತಿಳಿಯದಂತೆ ಫಾರ್ಮ್​ ಕೂಡ ಭರ್ತಿ ಮಾಡಿದೆ. ಈ ವಿಚಾರ ತಂದೆಗೆ ತಿಳಿದಾಗ ಅವರು ನನ್ನನ್ನು ಗದರಿಸಿದ್ದರು. ಆದರೆ, 800 ರೂ. ಸಾಲ ಮಾಡಿ ನನಗೆ ಬ್ಯಾಟ್​ ಖರೀದಿಸಿ ಕೊಟ್ಟರು. ಇದೇ ವೇಳೆ ನಾನು ಕ್ರಿಕೆಟ್​ ಕಿಟ್​ಗಾಗಿ ಬೇಡಿಕೆ ಇಟ್ಟೆ. ಇದರ ಬೆಲೆ ಸುಮಾರು 7 ರಿಂದ 8 ಸಾವಿರ ಆಗಿತ್ತು. ಇಷ್ಟು ಹಣ ತನ್ನ ತಂದೆಯ ಬಳಿ ಇಲ್ಲದಾಗ ಅವರು ಅಸಾಧ್ಯ ಎಂದರು. ನಾನು ಬಾತ್​ ರೂಮ್​ನಲ್ಲಿ ಲಾಕ್​ ಮಾಡಿ ಹೊರ ಬರುವುದಿಲ್ಲ ಎಂದು ಹಠಮಾಡಿ ಕುಳಿತಾಗ ತಾಯಿ ತನ್ನ ಚಿನ್ನದ ಸರವನ್ನು ಮಾರಿ ಕ್ರಿಕೆಟ್​ ಕಿಟ್​ ಕೊಡಿಸಿದರು” ಎಂದು ಜುರೆಲ್ ತಮ್ಮ ಬಾಲ್ಯದ ನೆನಪನ್ನು ​ಹಂಚಿಕೊಂಡರು.

dhruv jurel


ಐಪಿಎಲ್​ನಲ್ಲಿ ಮಿಂಚಿದ ಧ್ರುವ್ ಜುರೆಲ್


22 ವರ್ಷದ ಧುರ್ವ್ ಜುರೆಲ್ ಕಳೆದ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ (RR) ತಂಡದ ಪರ ಗಮನಾರ್ಹ ಪ್ರದರ್ಶನ ತೋರುವ ಮೂಲಕ ವಿಶ್ವ ಕ್ರಿಕೆಟ್‌ಗೆ ಪರಿಚಿತರಾದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಹೆಚ್ಚಾಗಿ ಆಡುತ್ತಿದ್ದ ಅವರು​ 13 ಪಂದ್ಯಗಳನ್ನು ಆಡಿ 152 ರನ್​ ಬಾರಿಸಿದ್ದಾರೆ. ಜುರೆಲ್ ಟೀಮ್​ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್​ ಧೋನಿ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಐಪಿಎಲ್​ ಆಡುವ ವೇಳೆ ಧೋನಿ ಅವರೊಂದಿಗೆ ಫೋಟೊ ಕೂಡ ತೆಗಿಸಿಕೊಂಡಿದ್ದ ಜುರೆಲ್ ತಾನು ಕೂಡ ಧೋನಿಯಂತೆ ವಿಕೆಟ್​ ಕೀಪರ್​ ಆಗಲು ಶ್ರಮಿಸುತ್ತೇನೆ ಎಂದಿದ್ದರು.

ಇದನ್ನೂ ಓದಿ Ishan Kishan : ಅಶಿಸ್ತಿನ ಮೂಟೆಯಾದ್ರಾ ಇಶಾನ್​? ದ್ರಾವಿಡ್ ಸಲಹೆಯನ್ನೂ ಧಿಕ್ಕರಿಸಿದ ಯುವ ಆಟಗಾರ

dhruv jurel


ಅಂಡರ್​-19 ಆಡಿದ್ದ ಜುರೆಲ್​


ಜುರೆಲ್ 2020ರಲ್ಲಿ ಭಾರತ ಪರ ಅಂಡರ್​-19 ವಿಶ್ವಕಪ್ ಆಡಿದ್ದರು. ಈ ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಜುರೆಲ್, 89 ರನ್ ಗಳಿಸಿದ್ದರು. ಇದರಲ್ಲಿ ಒಂದು ಅರ್ಧಶತಕ ಒಳಗೊಂಡಿದೆ. 2022ರಲ್ಲಿ ಉತ್ತರ ಪ್ರದೇಶ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಜುರೆಲ್​ ಇದುವರೆಗೆ ಒಟ್ಟು 15 ಪಂದ್ಯಗಳಲ್ಲಿ 46.47ರ ಸರಾಸರಿಯಲ್ಲಿ 790 ರನ್ ಗಳಿಸಿದ್ದಾರೆ. ಒಂದು ಶತಕವನ್ನೂ ಸಿಡಿಸಿದ್ದಾರೆ. ಜುರೆಲ್ ಕಳೆದ ತಿಂಗಳು ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಂಡಿದ್ದ ಭಾರತ-ಎ ತಂಡದ ಭಾಗವಾಗಿದ್ದರು. ಕಷ್ಟದಿಂದ ಬೆಳೆದು ಬಂದ ಈ ಪ್ರತಿಭೆ ಭಾರತ ತಂಡದಲ್ಲಿ ಅಮೋಘ ಸಾಧನೆ ಮಾಡುವಂತಾಗಿ ಎನ್ನುವುದು ಭಾರತೀಯ ಕ್ರಿಕಟ್​ ಅಭಿಮಾನಿಗಳ ಆಶಯ.

Exit mobile version