ನವದೆಹಲಿ: ವಿಶ್ವದ ಅತ್ಯಂತ ಪ್ರತಿಷ್ಠಿತ ಮೋಟಾರ್‌ಸೈಕಲ್ ರೇಸ್ ಎನಿಸಿಕೊಂಡಿರುವ ಮೋಟೊಜಿಪಿಯು (MotoGp) ೨೦೨೩ಕ್ಕೆ ಭಾರತವನ್ನು ಪ್ರವೇಶಿಸುವುದು ನಿಶ್ಚಿತವಾಗಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಮೋಟಾರ್ ಸೈಕಲ್ ರೇಸ್ ಆಯೋಜನೆಯಾಗುತ್ತಿದೆ. ಹಾಗಾಗಿ, ಇದು ಭಾರತದ ಬೈಕ್ ರೇಸರ್‌ಗಳು ಹಾಗೂ ಅಭಿಮಾನಿಗಳಿಗೆ ಸಿಹಿ ಸುದ್ದಿಯಾಗಿದೆ.
ಭಾರತದಲ್ಲಿ ಮೋಟೊಜಿಪಿ ಆಯೋಜಿಸುವ ದಿಸೆಯಲ್ಲಿ ವರ್ಷದ ಒಡಂಬಡಿಕೆಗೆ (MoS) ರೇಸ್ ಪ್ರಾಯೋಜಕ ಸಂಸ್ಥೆ ಫೇರ್‌ಸ್ಟ್ರೀಟ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಮೋಟೊಜಿಪಿ ಆಯೋಜನೆಯ ವಾಣಿಜ್ಯಿಕ ಹಕ್ಕು ಹೊಂದಿರುವ ಡೊರ್ನಾ ಸ್ಪೋರ್ಟ್ಸ್ ಸಂಸ್ಥೆಯು ಸಹಿ ಹಾಕಿವೆ. ಮುಂದಿನ ವರ್ಷ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯುಟ್‌ನಲ್ಲಿ “ಭಾರತ್ ಗ್ರ್ಯಾಂಡ್ ಪ್ರಿಕ್ಸ್” (Bharat Grand Prix) ಹೆಸರಿನಲ್ಲಿ ಮೋಟೊಜಿಪಿ ಆಯೋಜಿಸಲು ತೀರ್ಮಾನಿಸಲಾಗಿದೆ. ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯುಟ್‌ನಲ್ಲಿ ಫಾರ್ಮುಲಾ-೧ (ಕಾರ್ ರೇಸ್)ಅನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಏಕೆ ಪ್ರಾಮುಖ್ಯತೆ?
ಭಾರತದಲ್ಲಿ ಮೋಟಾರ್‌ಸೈಕ್ಲಿಂಗ್ ಸಂಸ್ಕೃತಿಗೆ ಉತ್ತೇಜನ ನೀಡುವ, ದೇಶೀಯ ರೇಸರ್‌ಗಳಿಗೆ ಹೆಚ್ಚಿನ ಅವಕಾಶ ಒದಗಿಸುವ ದಿಸೆಯಲ್ಲಿ ದೇಶದಲ್ಲಿ ಮೊದಲ ಬಾರಿಗೆ ನಡೆಯಲಿರುವ ಬೈಕ್ ರೇಸ್ ಪ್ರಾಮುಖ್ಯತೆ ಪಡೆದಿದೆ. ವಿಶ್ವದ ೧೯ ರಾಷ್ಟ್ರಗಳ ಬೈಕ್ ರೇಸರ್‌ಗಳು ಭಾಗವಹಿಸಲಿದ್ದಾರೆ. ಆಯೋಜನೆಯಿಂದ ಭಾರತದಲ್ಲಿ ಆಟೋಮೊಬೈಲ್ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ. ಇದರಿಂದ ಮೋಟೊಜಿಪಿಯಂತಹ ಅಂತಾರಾಷ್ಟ್ರೀಯ ರೇಸ್‌ಗಳಲ್ಲಿ ಭಾಗವಹಿಸಲು ಭಾರತದ ರೇಸ್‌ಗಳು ಸಿದ್ಧರಾಗಲು ಸಹಾಯವಾಗುತ್ತದೆ. ದೇಶದ ಅಭಿಮಾನಿಗಳಿಗೂ ಅಂತಾರಾಷ್ಟ್ರೀಯ ಮಟ್ಟದ ಬೈಕ್ ರೇಸ್ ಕಣ್ಮನ ತಣಿಸಲಿದೆ.
ಸಿಎಂ ಯೋಗಿ ಸಂತಸ
ಉತ್ತರ ಪ್ರದೇಶದಲ್ಲಿ ಮೊದಲ ಮೋಟೊಜಿಪಿ ನಡೆಯುತ್ತಿರುವುದಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಸ ವ್ಯಕ್ತಪಡಿಸಿದ್ದಾರೆ. “ಜಾಗತಿಕ ಮನ್ನಣೆ ಗಳಿಸಿರುವ ಮೋಟೊಜಿಪಿಯು ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದರಿಂದ ಪ್ರವಾಸೋದ್ಯಮ, ಆತಿಥ್ಯ ಕ್ಷೇತ್ರದ ಏಳಿಗೆ ಜತೆಗೆ ಜಾಗತಿಕ ವೇದಿಕೆಯೂ ದೊರೆಯಲಿದೆ. ಮೋಟೊಜಿಪಿ ಯಶಸ್ಸಿಗೆ ರಾಜ್ಯ ಸರ್ಕಾರವು ಸಂಪೂರ್ಣ ಸಹಕಾರ ನೀಡುತ್ತದೆ” ಎಂದಿದ್ದಾರೆ.
ಇದನ್ನೂ ಓದಿ | MotoGp | ಬೈಕ್ ರೇಸ್ ಅಭಿಮಾನಿಗಳಿಗೆ ಖುಷಿ ಸುದ್ದಿ; ಮುಂದಿನ ವರ್ಷ ಭಾರತಕ್ಕೆ ಕಾಲಿಡಲಿದೆ ಮೋಟೊಜಿಪಿ