ನವದೆಹಲಿ: ಎಂ.ಎಸ್.ಧೋನಿ, ಕ್ಯಾಪ್ಟನ್ ಕೂಲ್, ಮಾಹಿ, ತಾಲಾ… ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್ ಧೋನಿ ಇಂದು (July 7) 42ನೇ ವಸಂತಕ್ಕೆ (MS Dhoni Birthday) ಕಾಲಿಟ್ಟಿದ್ದಾರೆ. ಭಾರತಕ್ಕೆ ಮೂರು ಐಸಿಸಿ ಟ್ರೋಫಿಗಳನ್ನು ತಂದುಕೊಟ್ಟ, ಕೂಲ್ ಆಗಿದ್ದೇ ‘ಹಾಟ್’ ಫೇವರಿಟ್ ತಂಡವನ್ನು ಕಟ್ಟಿದ, ಕ್ರಿಕೆಟ್‌ನ ಆಚೆಗೂ ವ್ಯಕ್ತಿತ್ವದಿಂದ, ತನ್ನ ವಿಶೇಷ ಹವ್ಯಾಸಗಳಿಂದ, ಕೈಂಡ್‌ನೆಸ್ ವರ್ತನೆಯಿಂದ ಮನ ಸೆಳೆದ ಧೋನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಆಂಧ್ರಪ್ರದೇಶದ ಹೈದರಾಬಾದ್‌ನಲ್ಲಿ 52 ಅಡಿ ಎತ್ತರದ ಕಟೌಟ್ ರಾರಾಜಿಸುತ್ತಿದೆ. ಇದೇ ರಾಜ್ಯದ ನಂದಿಗಾಮದಲ್ಲಿ 77 ಅಡಿಯ ಕಟೌಟ್ ನಿಲ್ಲಿಸಿ ಅಭಿಮಾನಿಗಳು ಧೋನಿಯ ಜನ್ಮದಿನವನ್ನು ಹಬ್ಬದಂತೆ ಆಚರಿಸುತ್ತಿದ್ದಾರೆ. ದೇಶದ ಮೂಲೆ ಮೂಲೆಯಲ್ಲಿರುವ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ನೆಚ್ಚಿನ ಆಟಗಾರನಿಗೆ ಶುಭಾಶಯ ಕೋರುತ್ತಿದ್ದಾರೆ. ಧೋನಿ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕ್ರಿಕೆಟ್, ವಿಶ್ವಕಪ್ ಗೆಲುವು, ನಾಯಕತ್ವದ ಜತೆಗೆ ಕ್ಯಾಪ್ಟನ್ ಕೂಲ್ ಕುರಿತ ಕೆಲವು ಇಂಟರೆಸ್ಟಿಂಗ್ ಅಂಶಗಳು ಇಲ್ಲಿವೆ.
- ಧೋನಿ ಹೆಚ್ಚಾಗಿ ಮೊಬೈಲ್ ಬಳಸುವುದಿಲ್ಲ. ಇನ್ನು ಸಾಮಾಜಿಕ ಜಾಲತಾಣಗಳಿಂದ ಅವರು ಅಂತರ ಕಾಯ್ದುಕೊಳ್ಳುತ್ತಾರೆ. ಟ್ವಿಟರ್‌ನಲ್ಲಿ 80 ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿರುವ ಅವರು ಕೊನೆಯ ಬಾರಿ ಟ್ವೀಟ್ ಮಾಡಿದ್ದು 2021ರಲ್ಲಿ. ಇನ್‌ಸ್ಟಾಗ್ರಾಂನಲ್ಲಿ 4.38 ಕೋಟಿ ಫಾಲೋವರ್‌ಗಳನ್ನು ಹೊಂದಿರುವ ತಾಲಾ, ಫೆಬ್ರವರಿಯಿಂದ ಯಾವುದೇ ವಿಡಿಯೊ ಪೋಸ್ಟ್ ಮಾಡಿಲ್ಲ.
- ಧೋನಿಗೆ ಪೆಟ್ಸ್ ಎಂದರೆ ತುಂಬ ಇಷ್ಟ. ಸ್ಯಾಮ್, ಲಿಲ್ಲಿ, ಗಬ್ಬರ್ ಹಾಗೂ ಜೋಯಾ ಎಂಬ ನಾಲ್ಕು ಶ್ವಾನಗಳನ್ನು ಸಾಕಿದ್ದಾರೆ. ಅಷ್ಟೇ ಅಲ್ಲ, ರಾಂಚಿಯಲ್ಲಿರುವ ಫಾರ್ಮ್‌ಹೌಸ್‌ನಲ್ಲಿ Honey ಎಂಬ ಗಿಳಿ, ಚೇತಕ್ ಎಂಬ ಕುದುರೆ ಸಾಕಿದ್ದಾರೆ.
- ಧೋನಿ ಕ್ರಿಕೆಟ್‌ಗೆ ಕಾಲಿಡುವ ಮೊದಲು ಫುಟ್ಬಾಲ್ ಆಡುತ್ತಿದ್ದರು. ಬ್ಯಾಡ್ಮಿಂಟನ್ ಕೂಡ ಅವರ ನೆಚ್ಚಿನ ಆಟವಾಗಿತ್ತು. ಆದರೆ, ಅವರು ಕ್ರಿಕೆಟ್‌ನಲ್ಲಿ ವೃತ್ತಿಜೀವನ ಆರಂಭಿಸಿದರು. ಮುಂದೆ ಆಗಿದ್ದೆಲ್ಲ ಈಗ ಇತಿಹಾಸ.
- ಮಹೇಂದ್ರ ಸಿಂಗ್ ಧೋನಿ ಅವರಿಗೆ ಬೈಕ್‌ಗಳೆಂದರೆ ಪಂಚಪ್ರಾಣ. ಅವರ ಬಳಿ ಒಂದು ಶೋರೂಮ್‌ನಲ್ಲಿರುವಷ್ಟು ಅಂದರೆ, 70 ದುಬಾರಿ ಬೈಕ್‌ಗಳಿವೆ. ಹಾರ್ಲೆ ಡೇವಿಡ್‌ಸನ್‌ನಿಂದ ಹಿಡಿದು ಸುಜುಕಿ ಹಯಬುಸವರೆಗೆ ದುಬಾರಿ ಬೈಕ್‌ಗಳು ಅವರ ಬಳಿ ಇವೆ. ಹಲವು ಐಷಾರಾಮಿ ಕಾರುಗಳನ್ನೂ ಧೋನಿ ಹೊಂದಿದ್ದಾರೆ.
- ವಿಕೆಟ್ ಕೀಪಿಂಗ್‌ನಲ್ಲಿ ಧೋನಿ ವಿಶ್ವದಾಖಲೆ ಹೊಂದಿದ್ದಾರೆ. 2018ರಲ್ಲಿ ಕೇವಲ 0.08 ಸೆಕೆಂಡ್‌ನಲ್ಲಿ ಸ್ಟಂಪ್‌ಔಟ್ ಮಾಡುವ ಮೂಲಕ ವೆಸ್ಟ್ ಇಂಡೀಸ್‌ನ ಕೀಮೊ ಪೌಲ್‌ರನ್ನು ಪೆವಿಲಿಯನ್‌ಗೆ ಕಳುಹಿಸಿದ್ದರು. ಕುಲದೀಪ್ ಯಾದವ್ ಆಗ ಬೌಲಿಂಗ್ ಮಾಡಿದ್ದರು. ಇದು ವಿಶ್ವದಲ್ಲೇ ವೇಗದ ಸ್ಟಂಪಿಂಗ್ ಎನಿಸಿದೆ.
ಇದನ್ನೂ ಓದಿ: MS Dhoni: ಸೆಕ್ಯೂರಿಟಿ ಗಾರ್ಡ್‌ಗೆ ಬೈಕ್ನಲ್ಲಿ ಲಿಫ್ಟ್ ನೀಡಿದ ಧೋನಿ; ವಿಡಿಯೊ ವೈರಲ್