Site icon Vistara News

MS Dhoni: ಕ್ಯಾಪ್ಟನ್‌ ಕೂಲ್‌ ಧೋನಿಯೂ ಆ್ಯಂಗ್ರಿಮ್ಯಾನ್‌ ಆಗಿ ಬದಲಾಗಿದ್ದರು!

When MS Dhoni lost his cool

ಬೆಂಗಳೂರು: ಮಹೇಂದ್ರ ಸಿಂಗ್‌ ಧೋನಿಗೆ(ms dhoni birthday) 42ನೇ ಜನುಮದಿನದ ಸಂಭ್ರಮ. ಕ್ರಿಕೆಟ್‌ ಮೈದಾನದಲ್ಲಿ ಶಾಂತಿಯಿಂದ ವ‌ರ್ತಿಸುತ್ತಾರೆ. ಬ್ಯಾಟಿಂಗ್‌, ವಿಕೆಟ್‌ ಕೀಪಿಂಗ್‌ ಅಥವಾ ನಾಯಕನಾಗೇ ಇರಲಿ ಶಾಂತಚಿತ್ತ ಅವರ ಮುಖ್ಯ ಗುಣ. ಎಂತಹ ಸನ್ನಿವೇಶವಿದ್ದರೂ ಧೋನಿ(MS Dhoni) ತಾಳ್ಮೆ ಕಳೆದುಕೊಳ್ಳುವುದು ವಿರಳ. ಇದಕ್ಕಾಗಿ ಅವರಿಗೆ ಕ್ಯಾಪ್ಟನ್‌ ಕೂಲ್‌’ ಎಂಬ ಹೆಸರು ಕೂಡ ಇದೆ. ಆದರೆ ಅವರು ಕೂಡ ಕೆಲವೊಮ್ಮೆ ’ ಆ್ಯಂಗ್ರಿಮ್ಯಾನ್‌’ ಆಗಿ ಬದಲಾಗಿದ್ದರು.

2019ರಲ್ಲಿ ನಡೆದ ಐಪಿಎಲ್(IPL)​ ಪಂದ್ಯವೊಂದರಲ್ಲಿ ಧೋನಿ ಅವರು ತಾಳ್ಮೆ ಕಳೆದುಕೊಂಡಿದ್ದನ್ನು ಕಂಡ ಕ್ರಿಕೆಟ್​ ಅಭಿಮಾನಿಗಳು ಬೆಚ್ಚಿಬಿದ್ದಿದ್ದರು. ಅಂದು ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂನಲ್ಲಿ ನಡೆದಿದ್ದ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಕೊನೆಯ ಎಸೆತದಲ್ಲಿ ಜಯ ಸಾಧಿಸಿ ಸಂಭ್ರಮಿಸಿತ್ತು. ಇದೇ ವೇಳೆ ಕ್ಯಾಪ್ಟನ್‌ ಕೂಲ್‌ ಭಾರೀ ಚರ್ಚೆಗೆ ಗುರಿಯಾದ್ದರು.

ಧೋನಿ ಅವರು ಕೋಪಗೊಳ್ಳು ಪ್ರಮುಖ ಕಾರಣ ಕೊನೆಯ ಓವರ್‌ನಲ್ಲಿ ನಡೆದ ಒಂದು ಘಟನೆ. ಬೆನ್‌ ಸ್ಟೋಕ್ಸ್‌ ಎಸೆದ ಅಂತಿಮ ಓವರ್‌ನಲ್ಲಿ ಚೆನ್ನೈಗೆ 18 ರನ್‌ ಬೇಕಿತ್ತು. ಸ್ಟೋಕ್ಸ್‌ ಅವರ 4ನೇ ಎಸೆತ ನೋ ಬಾಲ್‌ ಆಗಿತ್ತು. ಅಂಪೈರ್​ ಉಲ್ಲಾಸ್‌ ಗಾಂದೆ ನೋಬಾಲ್‌ ನೀಡಿದ್ದರು. ಆದರೆ ಲೆಗ್‌ ಅಂಪೈರ್​ ನೋಬಾಲ್‌ ನೀಡಿರಲಿಲ್ಲ. ಈ ಸನ್ನಿವೇಶ ಎಲ್ಲರನ್ನೂ ಗೊಂದಲಕ್ಕೀಡು ಮಾಡಿತ್ತು. ಈ ಎಸೆತದಲ್ಲಿ ಚೆನ್ನೈಆಟಗಾರರು 2 ರನ್‌ ಕಸಿದಿದ್ದರು. ಜಡೇಜ ಈ ಕುರಿತು ಅಂಪೈರ್​ಗಳನ್ನು ಪ್ರಶ್ನಿಸಿದ್ದರೂ ಯಾವುದೇ ಧನಾತ್ಮಕ ಉತ್ತರ ದೊರೆಯಲಿಲ್ಲ. ಆಗ ಬೌಂಡರಿ ಗೆರೆ ಬಳಿ ನಿಂತು ಪಂದ್ಯ ವೀಕ್ಷಿಸುತ್ತಿದ್ದ ಧೋನಿ ಮೈದಾನಕ್ಕೆ ಓಡೋಡಿ ಬಂದು ಅಂಪೈರ್​ಗಳ ಜತೆ ವಾಗ್ವಾದಕ್ಕಿಳಿದರು. ಆದರೆ ಧೋನಿ ಮಾತನ್ನು ಯಾರೂ ಒಪ್ಪಲಿಲ್ಲ. ಥರ್ಡ್‌ ಅಂಪೈರ್​ ಕೂಡ ಮನವಿ ನಿರಾಕರಿಸಿದ್ದರು. ಧೋನಿ ತಾವು ಮಾಡಿರುವ ಎಡವಟ್ಟಿನಿಂದಾಗಿ ಪಂದ್ಯ ಶುಲ್ಕದ ಶೇಕಡಾ 50ರಷ್ಟು ದಂಡವನ್ನು ಕಟ್ಟಿದ್ದರು. ಐಪಿಎಲ್‌ನ ನಿಯಮ ಉಲ್ಲಂಸಿದ್ದ ಕಾರಣದಿಂದ ಪಂದ್ಯ ಶುಲ್ಕದ ಶೇಕಡಾ 50ರಷ್ಟು ದಂಡ ವಿಧಿಸಲಾಗಿತ್ತು.

ಇದನ್ನೂ ಓದಿ MS Dhoni: ವಿಶೇಷ ರೀತಿಯಲ್ಲಿ ಧೋನಿ ಹುಟ್ಟುಹಬ್ಬ ಆಚರಿಸಿದ ರಿಷಭ್​ ಪಂತ್​

ಕ್ಯಾಪ್ಟನ್‌ ಕೂಲ್‌ ಕುರಿತ ಕೆಲವು ಇಂಟರೆಸ್ಟಿಂಗ್‌ ಅಂಶಗಳು

  1. ಧೋನಿ ಹೆಚ್ಚಾಗಿ ಮೊಬೈಲ್‌ ಬಳಸುವುದಿಲ್ಲ. ಇನ್ನು ಸಾಮಾಜಿಕ ಜಾಲತಾಣಗಳಿಂದ ಅವರು ಅಂತರ ಕಾಯ್ದುಕೊಳ್ಳುತ್ತಾರೆ. ಟ್ವಿಟರ್‌ನಲ್ಲಿ 80 ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿರುವ ಅವರು ಕೊನೆಯ ಬಾರಿ ಟ್ವೀಟ್‌ ಮಾಡಿದ್ದು 2021ರಲ್ಲಿ. ಇನ್‌ಸ್ಟಾಗ್ರಾಂನಲ್ಲಿ 4.38 ಕೋಟಿ ಫಾಲೋವರ್‌ಗಳನ್ನು ಹೊಂದಿರುವ ತಾಲಾ, ಫೆಬ್ರವರಿಯಿಂದ ಯಾವುದೇ ವಿಡಿಯೊ ಪೋಸ್ಟ್‌ ಮಾಡಿಲ್ಲ.
  2. ಧೋನಿಗೆ ಪೆಟ್ಸ್‌ ಎಂದರೆ ತುಂಬ ಇಷ್ಟ. ಸ್ಯಾಮ್‌, ಲಿಲ್ಲಿ, ಗಬ್ಬರ್‌ ಹಾಗೂ ಜೋಯಾ ಎಂಬ ನಾಲ್ಕು ಶ್ವಾನಗಳನ್ನು ಸಾಕಿದ್ದಾರೆ. ಅಷ್ಟೇ ಅಲ್ಲ, ರಾಂಚಿಯಲ್ಲಿರುವ ಫಾರ್ಮ್‌ಹೌಸ್‌ನಲ್ಲಿ Honey ಎಂಬ ಗಿಳಿ, ಚೇತಕ್‌ ಎಂಬ ಕುದುರೆ ಸಾಕಿದ್ದಾರೆ.
  3. ಧೋನಿ ಕ್ರಿಕೆಟ್‌ಗೆ ಕಾಲಿಡುವ ಮೊದಲು ಫುಟ್ಬಾಲ್‌ ಆಡುತ್ತಿದ್ದರು. ಬ್ಯಾಡ್ಮಿಂಟನ್‌ ಕೂಡ ಅವರ ನೆಚ್ಚಿನ ಆಟವಾಗಿತ್ತು. ಆದರೆ, ಅವರು ಕ್ರಿಕೆಟ್‌ನಲ್ಲಿ ವೃತ್ತಿಜೀವನ ಆರಂಭಿಸಿದರು. ಮುಂದೆ ಆಗಿದ್ದೆಲ್ಲ ಈಗ ಇತಿಹಾಸ.
  4. ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಬೈಕ್‌ಗಳೆಂದರೆ ಪಂಚಪ್ರಾಣ. ಅವರ ಬಳಿ ಒಂದು ಶೋರೂಮ್‌ನಲ್ಲಿರುವಷ್ಟು ಅಂದರೆ, 70 ದುಬಾರಿ ಬೈಕ್‌ಗಳಿವೆ. ಹಾರ್ಲೆ ಡೇವಿಡ್‌ಸನ್‌ನಿಂದ ಹಿಡಿದು ಸುಜುಕಿ ಹಯಬುಸವರೆಗೆ ದುಬಾರಿ ಬೈಕ್‌ಗಳು ಅವರ ಬಳಿ ಇವೆ. ಹಲವು ಐಷಾರಾಮಿ ಕಾರುಗಳನ್ನೂ ಧೋನಿ ಹೊಂದಿದ್ದಾರೆ.
  5. ವಿಕೆಟ್‌ ಕೀಪಿಂಗ್‌ನಲ್ಲಿ ಧೋನಿ ವಿಶ್ವದಾಖಲೆ ಹೊಂದಿದ್ದಾರೆ. 2018ರಲ್ಲಿ ಕೇವಲ 0.08 ಸೆಕೆಂಡ್‌ನಲ್ಲಿ ಸ್ಟಂಪ್‌ಔಟ್‌ ಮಾಡುವ ಮೂಲಕ ವೆಸ್ಟ್‌ ಇಂಡೀಸ್‌ನ ಕೀಮೊ ಪೌಲ್‌ರನ್ನು ಪೆವಿಲಿಯನ್‌ಗೆ ಕಳುಹಿಸಿದ್ದರು. ಕುಲದೀಪ್‌ ಯಾದವ್‌ ಆಗ ಬೌಲಿಂಗ್‌ ಮಾಡಿದ್ದರು. ಇದು ವಿಶ್ವದಲ್ಲೇ ವೇಗದ ಸ್ಟಂಪಿಂಗ್‌ ಎನಿಸಿದೆ.
Exit mobile version