Site icon Vistara News

MS Dhoni: ಧೋನಿಗೆ 15 ಕೋಟಿ ವಂಚಿಸಿದ ಮಾಜಿ ಬಿಸಿನೆಸ್ ಪಾರ್ಟ್ನರ್ ಬಂಧನ

MS Dhoni

ರಾಂಚಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ(MS Dhoni) ಅವರ ಮಾಜಿ ಉದ್ಯಮಿ ಮಿಹಿರ್ ದಿವಾಕರ್(Mihir Diwakar) ಅವರನ್ನು ವಂಚನೆ ಆರೋಪದ ಮೇಲೆ ಬಂಧಿಸಲಾಗಿದೆ. ರಾಂಚಿಯ ಜಿಲ್ಲಾ ನ್ಯಾಯಾಲಯದಲ್ಲಿ ಸೌಮ್ಯಾ ದಾಸ್ ಜತೆಗೆ ದಿವಾಕರ್ ವಿರುದ್ಧ ಧೋನಿ ದೂರು ದಾಖಲಿಸಿದ್ದರು. ಅರ್ಕಾ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿರುವ ದಿವಾಕರ್ ಅವರನ್ನು ಜೈಪುರ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ. ಈ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸಲು ಧೋನಿ ಹೆಸರನ್ನು ಅನಧಿಕೃತವಾಗಿ ಬಳಸಿಕೊಂಡ ಆರೋಪಕ್ಕೆ ಸಂಬಂಧಿಸಿ ಅವರನ್ನು ಬಂಧಿಸಲಾಗಿದೆ.

ಮಿಹಿರ್ ದಿವಾಕರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406, 420, 467, 468, 471 ಮತ್ತು 120 ಬಿ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ಆರ್ಕಾ ಕ್ರಿಕೆಟ್ ಅಕಾಡೆಮಿ(Aarka Sports and Management Limited) 15 ಕೋಟಿ ವಂಚಿಸಿದೆ ಎಂದು ಆರೋಪಿಸಿ ಧೋನಿ ಇದೇ ವರ್ಷದ ಜನವರಿಯಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಲ್ಲದೆ ಕ್ರಿಮಿನಲ್ ಪ್ರಕರಣ(criminal case) ಕೂಡ ದಾಖಲಿಸಿದ್ದರು. 2017ರಲ್ಲಿ ದಿವಾಕರ್ ಅವರು ಧೋನಿಯೊಂದಿಗೆ ಜಾಗತಿಕವಾಗಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ ದಿವಾಕರ್ ಒಪ್ಪಂದದಲ್ಲಿ ವಿವರಿಸಿರುವ ಷರತ್ತುಗಳನ್ನು ಪಾಲಿಸಲು ವಿಫಲರಾಗಿದ್ದು 15 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಧೋನಿ ದೂರಿನಲ್ಲಿ ಉಲ್ಲೇಖಿಸಿದ್ದರು.

ಇದನ್ನೂ ಓದಿ MS Dhoni: ‘ಬೋಲೆ ಜೋ ಕೋಯಲ್’ ಹಾಡು ಹಾಡುತ್ತಾ ಬೈಸಿಕಲ್ ತುಳಿದ ಧೋನಿ; ವಿಡಿಯೊ ವೈರಲ್​

ಧೋನಿ ವಿರುದ್ಧವೇ ಆರೋಪ ಹೊರಿಸಿದ್ದ ದಿವಾಕರ್‌


ಮಿಹಿರ್‌ ದಿವಾಕರ್‌ ನಾನು ಧೋನಿಗೆ 15 ಕೋಟಿ ರೂ. ವಂಚಿಸಿಲ್ಲ, ಬದಲಾಗಿ ಧೋನಿಯೇ ನನಗೆ 5 ಕೋಟಿ ರೂ ವಂಚಿಸಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ ಧೋನಿ ಜತೆ ಮಾಡಿಕೊಂಡಿದ್ದ ಕೆಲ ಒಪ್ಪಂದದ ಪತ್ರಗಳನ್ನು ಕೂಡ ಅವರು ಮಾಧ್ಯಮದ ಮುಂದಿಟ್ಟಿದ್ದರು.

“ಧೋನಿ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ, ನನ್ನ ಹೆಸರು ಕೆಡಿಸಲು ಪ್ರಯತ್ನಿಸಿದ್ದಾರೆ. ಧೋನಿಯ ಆರೋಪ ಕೇಳಿ ಕೆಲ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳು ನನ್ನ ಬಗ್ಗೆ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು. ಸತ್ಯ ಏನೆಂಬಹುದನ್ನು ಮೊದಲು ತಿಳಿದು ಆ ಬಳಿಕ ಸುದ್ದಿಯನ್ನು ಪ್ರಸಾರ ಮಾಡಬೇಕು. ನನ್ನ ಬಗ್ಗೆ ಪ್ರಸಾರವಾದ ಸುದ್ದಿ ಸಂಪೂರ್ಣವಾಗಿ ಆಧಾರರಹಿತವಾಗಿದೆ. ಇದರಿಂದ ಮತ್ತು ನನ್ನ ಸಾಮಾಜಿಕ ಖ್ಯಾತಿ ಹಾಗೂ ವ್ಯಾಪಾರದಲ್ಲಿ ನಷ್ಟವನ್ನುಂಟುಮಾಡಲು ನನ್ನ ಮಾನಹಾನಿಗಾಗಿ ಮಾಡಲಾಗಿದೆ” ಎಂದು ಮಿಹಿರ್‌ ದಿವಾಕರ್‌ ಹೇಳಿದ್ದರು.

“ಸಂಸ್ಥೆಯಲ್ಲಿ ಧೋನಿ ಹಾಗೂ ಅವರ ನಿರ್ದೇಶಕರು ಅವ್ಯವಹಾರ ನಡೆಸಿ, ನನ್ನ ಮೇಲೆ ಆರೋಪ ಹೋರಿಸುತ್ತಿದ್ದಾರೆ. ಆರ್ಕಾ ಅಕಾಡೆಮಿಯ ಲಾಭ, ಶೇರುಗಳಲ್ಲಿ ಒಪ್ಪಂದವಾಗಿತ್ತು ಎಂದು ಧೋನಿ ಹೇಳಿದ್ದಾರೆ. ಆದರೆ ಒಪ್ಪಂದದಲ್ಲಿ ಈ ರೀತಿ ಉಲ್ಲೇಖವೇ ಆಗಿಲ್ಲ. ಇದೆಲ್ಲ ಸುಳ್ಳು. ಧೋನಿಯ ವ್ಯವಹಾರಗಳನ್ನು ನಾನು ನೋಡಿಕೊಳ್ಳುತ್ತಿದ್ದೆ. ಅವರೇ ನನಗೆ 5 ಕೋಟಿ ನೀಡಬೇಕು. ನಾನು ಧೋನಿಗೆ ಯಾವುದೇ ಹಣ ಬಾಕಿ ಇಟ್ಟಿಲ್ಲ. ಎಲ್ಲ ಒಪ್ಪಂದದ ಮತ್ತು ವ್ಯವಹಾರದ ಪತ್ರಗಳು ನನ್ನ ಬಳಿ ಇದೆ” ಎಂದು ದಿವಾಕರ್‌ ದೂರಿದ್ದರು. ಆದರೆ ಇದೀಗ ಅವರ ಬಂಧನವಾಗಿದೆ.

Exit mobile version