ರಾಂಚಿ: ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್ ಧೋನಿ(MS Dhoni) ಅವರು ತಮ್ಮ ಮಾಜಿ ಬಿಸಿನೆಸ್ ಪಾರ್ಟ್ನರ್ ವಿರುದ್ಧ ಕ್ರಿಮಿನಲ್ ಪ್ರಕರಣ(criminal case) ದಾಖಲಿಸಿದ್ದಾರೆ. ಬರೋಬ್ಬರಿ 15 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಧೋನಿ ಪ್ರಕರಣ ದಾಖಲಿಸಿದ್ದಾರೆ.
ಸದ್ಯ ವರದಿಯ ಪ್ರಕಾರ ಧೋನಿ ಅವರು ಆರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್‌ಮೆಂಟ್ ಲಿಮಿಟೆಡ್‌ನ ಸೌಮ್ಯ ಬಿಸ್ವಾಸ್ ಮತ್ತು ಮಿಹಿರ್ ದಿವಾಕರ್ ವಿರುದ್ಧ ರಾಂಚಿಯ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
2017ರಲ್ಲಿ ದಿವಾಕರ್ ಅವರು ಧೋನಿಯೊಂದಿಗೆ ಜಾಗತಿಕವಾಗಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ ದಿವಾಕರ್ ಒಪ್ಪಂದದಲ್ಲಿ ವಿವರಿಸಿರುವ ಷರತ್ತುಗಳನ್ನು ಪಾಲಿಸಲು ವಿಫಲರಾಗಿದ್ದು 15 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಧೋನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಲೀಗಲ್ ನೋಟಿಸ್ ಕಳುಹಿಸಿದ್ದ ಧೋನಿ
ಅರ್ಕಾ ಸ್ಪೋರ್ಟ್ಸ್ ಫ್ರಾಂಚೈಸಿ(Aarka Sports and Management Limited) ಧೋನಿ ಜತೆಗೆ ಮಾಡಿದ ಒಪ್ಪಂದದ ಪ್ರಕಾರ ಲಾಭವನ್ನು ಹಂಚಿಕೊಳ್ಳಲು ಬದ್ಧವಾಗಿದೆ ಎಂದು ಹೇಳಿತ್ತು. ಆದರೆ ಒಪ್ಪಂದದಂತೆ ನಡೆದುಕೊಳ್ಳುವಲ್ಲಿ ವಿಫಲವಾಗಿತ್ತು. ಹೀಗಾಗಿ ಧೋನಿ ಆಗಸ್ಟ್ 15, 2021ರಲ್ಲಿ ಆರ್ಕಾ ಸ್ಪೋರ್ಟ್ಸ್‌ಗೆ ನೀಡಿದ್ದ ಅಧಿಕಾರ ಪತ್ರವನ್ನು ಹಿಂತೆಗೆದುಕೊಂಡಿದ್ದರು. ನಂತರ ಧೋನಿ ಲೀಗಲ್ ನೋಟಿಸ್ ಕೂಡ ಕಳುಹಿಸಿದ್ದರು. ಆದರೆ, ಇದರಿಂದ ಯಾವುದೇ ಪ್ರಯೋಜನ ಆಗಿರಲಿಲ್ಲ. ಇದೀಗ ಧೋನಿ 15 ಕೋಟಿ ಲಾಸ್ ಆಗಿದೆ ಎಂದು ಧೋನಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ MS Dhoni: ಆಹಾರ ಸೇವಿಸಲು ಪಾಕ್ಗೆ ತೆರಳಿ ಎಂದ ಧೋನಿ; ದೇಶಾಭಿಮಾನ ತೋರಿದ ಅಭಿಮಾನಿ
ಈ ಬಾರಿ ಐಪಿಎಲ್ಗೆ ನಿವೃತ್ತಿ ಹೇಳಲಿದ್ದಾರೆ ಧೋನಿ
ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಕಳೆದ ವರ್ಷವೇ ಅವರು ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್ಗೂ ಗುಡ್ಬೈ ಹೇಳಲಿದ್ದಾರೆ. ನಿವೃತ್ತಿ ಬಳಿಕ ಏನು ಮಾಡಲಿದ್ದೀರ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಧೋನಿ. ಸದ್ಯಕ್ಕೆ ನಾನು ಕ್ರಿಕೆಟ್ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ. ಆದರೆ ಒಂದಂತು ನಿಜ, ಕ್ರಿಕೆಟ್ನಿಂದ ನಿವೃತ್ತಿಯಾದ ಬಳಿಕ ಕೆಲ ಕಾಲ ಆರ್ಮಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಅದು ನನ್ನ ಜೀವನದ ಪ್ರಮುಖ ಗುರಿ ಮಾಹಿ ಹೇಳಿದ್ದರು.
ಅಭಿಮಾನಿಗಳಿಗೋಸ್ಕರ ಉದ್ದ ಕೂದಲು ಬಿಟ್ಟ ಧೋನಿ…
ಇತ್ತೀಚೆಗಷ್ಟೇ ಧೋನಿ ಸಂದರ್ಶನವೊಂದರಲ್ಲಿ ತಮ್ಮ ಹೊಸ ಕೇಶ ವಿನ್ಯಾಸ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ನನ್ನ ಎಲ್ಲಾ ಅಭಿಮಾನಿಗಳು ಹೇರ್ ಸ್ಟೈಲ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಸ್ವಲ್ಪ ಸಮಯದವರೆಗೆ ಅದನ್ನು ಅವರಿಗಾಗಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದು. ಜತೆಗೆ ಉದ್ದ ಕೂದಲಿನಿಂದ ಅನುಭವಿಸುವ ಕಷ್ಟವನ್ನು ಕೂಡ ತಿಳಿಸಿದ್ದರು. ಮೊದಲು ನಾನು ಜಾಹೀರಾತು ಚಿತ್ರಗಳಿಗೆ ಹೋಗುತ್ತಿದ್ದಾಗ, ಸಾಮಾನ್ಯವಾಗಿ 20 ನಿಮಿಷಗಳಲ್ಲಿ ಕೂದಲು, ಮೇಕಪ್ ಎಲ್ಲದರಲ್ಲೂ ಸಿದ್ಧವಾಗುತ್ತಿದ್ದೆ. ಆದರೆ, ಈಗ 1 ಗಂಟೆ, 5 ನಿಮಿಷಗಳು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು.