ಚೆನ್ನೈ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ಅವರು 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿಗಾಗಿ ಚೆನ್ನೈಗೆ ಬಂದಿಳಿದಿದ್ದಾರೆ. ರೆಟ್ರೊ ಲುಕ್ನಲ್ಲಿ ಕಾಣಿಸಿಕೊಂಡ ಧೋನಿ ಯಾವುದೇ ಸಿನಿಮಾ ನಟರಿಗಿಂತಲೂ ಕಮ್ಮಿ ಇಲ್ಲ ಎನ್ನುವಂತೆ ಕಣ್ಮನ ಸೆಳೆದಿದ್ದಾರೆ.
ಧೋನಿ ಅವರು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದು ತಂಡ ಕ್ಯಾಂಪ್ ಸೇರುವವರೆಗಿನ ಎಲ್ಲ ದೃಶ್ಯಗಳನ್ನು ಸೆರೆಹಿಡಿದ ವಿಶೇಷ ವಿಡಿಯೊವನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಎಕ್ಸ್, ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದೆ. ಜತೆಗೆ ಈ ವಿಡಿಯೊಗೆ ‘ಜನಪ್ರಿಯ ಬೇಡಿಕೆಯಲ್ಲಿ! ಲಿಯೋ ಗ್ಯಾಲರಿಯಿಂದ ಬರುವ ಸಂಪೂರ್ಣ ವೀಡಿಯೊ ಇಲ್ಲಿದೆ’ ಎಂದು ಬರೆದುಕೊಂಡಿದೆ. ಧೋನಿ ಅವರು ಕೆಂಪು ಬಣ್ಣದ ಟಿ ಶರ್ಟ್ನಲ್ಲಿ ಬಹಳ ಸ್ಟೈಲೀಸ್ ಆಗಿ ಕಂಡಿದ್ದಾರೆ. ಧೋನಿಯ ಆಮಗನ ಮತ್ತು ಲುಕ್ ಕಂಡು ಅವರ ಅಭಿಮಾನಿಗಳು ‘ತಲಾ’ ಈಸ್ ಬ್ಯಾಕ್ ಎಂದು ಕಮೆಂಟ್ ಮಾಡಿದ್ದಾರೆ.
ಮಾರ್ಚ್ 22ರಿಂದ ಆರಂಭಗೊಳ್ಳಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಚೆನ್ನೈ ತಂಡ ತನ್ನ ಬದ್ಧ ಎದುರಾಳಿ ಆರ್ಸಿಬಿ ವಿರುದ್ಧ ಪಂದ್ಯವನ್ನಾಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಬಾರಿಯ ಆವೃತ್ತಿಗಾಗಿ ಆಟಗಾರರ ಮಿನಿ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಖರೀದಿಸಿ ತಂಡವನ್ನು ಬಲಿಷ್ಠಗೊಳಿಸಿದೆ. ಕಳೆದ ಬಾರಿಯ ಟೂರ್ನಿಯಲ್ಲಿ ಬೆರಳೆಣಿಕೆಯ ಅನುಭವಿ ಆಟಗಾರರನ್ನು ಹೊಂದಿದ್ದರೂ ಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು.
On Popular Demand! Here’s the full travel video from Leo’s gallery! 📹🦁#DenComing pic.twitter.com/0JjVoRm8UK
— Chennai Super Kings (@ChennaiIPL) March 6, 2024
ಚೆನ್ನೈ ತಂಡ ಈಗಾಗಲೇ 17ನೇ ಆವೃತ್ತಿಗಾಗಿ ಅಭ್ಯಾಸ ಆರಂಭಿಸಿದೆ. ಶನಿವಾರ ತಂಡದ ಹಲವು ಆಟಗಾರರು ಚೆನ್ನೈಯಲ್ಲಿ ಅಭ್ಯಾಸ ಶಿಬಿರದಲ್ಲಿ ಕಾಣಿಸಿಕೊಂಡಿದ್ದರು. ಧೋನಿ ಅವರು ಮುಕೇಶ್ ಅಂಬಾನಿ(Mukesh Ambani) ಪುತ್ರ ಅನಂತ್ ಅಂಬಾನಿ(Anant Ambani) ಹಾಗೂ ರಾಧಿಕಾ ಮರ್ಚೆಂಟ್ (Radhika Merchant) ಅವರ ವಿವಾಹಪೂರ್ವ(Anant Ambani wedding) ಸಮಾರಂಭದಲ್ಲಿ ಪಾಲ್ಗೊಂಡ ಕಾರಣ ತಡವಾಗಿ ತಂಡದ ಕ್ಯಾಂಪ್ಗೆ ಸೇರಿದ್ದಾರೆ. ಇದೇ ಸಮಾರಂಭದಲ್ಲಿ ಧೋನಿ ವಿಂಡೀಸ್ನ ಡ್ವೇನ್ ಬ್ರಾವೊ(Dwayne Bravo) ಜತೆ ದಾಂಡಿಯಾ(Dandiya) ನೃತ್ಯವಾಡಿದ ವಿಡಿಯೊ ವೈರಲ್ ಆಗಿತ್ತು.
ಇದನ್ನೂ ಓದಿ IPL 2024: ಅಭಿಮಾನಿಗಳಿಗೆ ಸಿಹಿ ಸುದ್ದಿ; ಸಂಪೂರ್ಣ ಐಪಿಎಲ್ ಆಡಲಿದ್ದಾರೆ ಈ ಸ್ಟಾರ್ ಆಟಗಾರ
ಕಳೆದ ವರ್ಷವೇ ಧೋನಿ ಅವರು ಐಪಿಎಲ್ಗೆ(IPL 2024) ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್ಗೂ ಗುಡ್ಬೈ ಹೇಳಲಿದ್ದಾರೆ. 2 ದಿನಗಳ ಹಿಂದಷ್ಟೇ ಧೋನಿ ತಮ್ಮ ಫೇಸ್ಬುಕ್ನಲ್ಲಿ ‘ಹೊಸ ಸೀಸನ್‌ಗಾಗಿ ಕಾತುರದಿಂದ ಕಾಯುತ್ತಿದ್ದೇನೆ. ಈ ಆವೃತ್ತಿಯಲ್ಲಿ ನಾನು ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಗಮನಿಸುವಾಗ ಅವರು ಈ ಬಾರಿ ವಿದಾಯ ಹೇಳುವುದು ಬಹುತೇಕ ಖಚಿವಾಗಿದ್ದು 18ನೇ ಆವೃತ್ತಿಯಲ್ಲಿ ಚೆನ್ನೈ ತಂಡದ ಕೋಚ್ ಅಥವಾ ಮೆಂಟರ್ ಆಗಿ ಕಾರ್ಯನಿರ್ವಹಿಸಲು ಧೋನಿ ಯೋಜನೆಯೊಂದನ್ನು ಹಾಕಿಕೊಂಡಂತಿದೆ.