ಜಾರ್ಖಂಡ್ : ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ಅವರು ಕ್ರಿಕೆಟ್ನಲ್ಲಿ ಮಾತ್ರವಲ್ಲದೆ ದೇಶಕ್ಕೆ ತೆರಿಗೆ ಕಟ್ಟುವ ವಿಚಾರದಲ್ಲಿಯೂ ದಾಖಲೆ ಬರೆದಿದ್ದಾರೆ ಎಂದು ಜಾರ್ಖಂಡ್ ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಬಳಿಕವೂ ರಾಜ್ಯದಲ್ಲಿ ಅತಿ ಹೆಚ್ಚು ವೈಯಕ್ತಿಕ ತೆರಿಗೆಯನ್ನು ಪಾವತಿಸಿದವರಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ ಎಂದು ಐಟಿ ಇಲಾಖೆ(income tax) ತಿಳಿಸಿದೆ. ಧೋನಿ ತಮ್ಮ ಕ್ರಿಕೆಟ್ ವೃತ್ತಿಜೀವನ ಆರಂಭ ಮಾಡಿದಾಗಿನಿಂದಲೂ ನಿರಂತರವಾಗಿ ರಾಜ್ಯದಲ್ಲಿ ಅತಿ ಹೆಚ್ಚು ವೈಯಕ್ತಿಕ ತೆರಿಗೆ ಪಾವತಿದಾರನೂ ಆಗಿದ್ದಾರೆ.
ಈ ವರ್ಷದ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಧೋನಿ ಐಟಿ ಇಲಾಖೆಗೆ ಒಟ್ಟು 38 ಕೋಟಿ ರೂ. ಮುಂಗಡ ತೆರಿಗೆ ಪಾವತಿಸಿದ್ದಾರೆ. ಕಳೆದ ವರ್ಷವೂ ಅಷ್ಟೇ ಮೊತ್ತವನ್ನು ಮುಂಗಡ ತೆರಿಗೆಯಾಗಿ ಠೇವಣಿ ಇಟ್ಟಿದ್ದರು ಎಂದು ಐಟಿ ಇಲಾಖೆ ಮಂಗಳವಾರ ತಿಳಿಸಿದೆ.
ಇದನ್ನೂ ಓದಿ IPL 2023 : ಐಪಿಎಲ್ನಿಂದ ಶ್ರೇಯಸ್ ಅಯ್ಯರ್ ಔಟ್, ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕೂ ಅಲಭ್ಯ
ಐಟಿ ಇಲಾಖೆ ಪ್ರಕಾರ ಧೋನಿ ಅವರು ಠೇವಣಿ ಮಾಡಿದ 38 ಕೋಟಿ ರೂ. ಮುಂಗಡ ತೆರಿಗೆ ಆಧರಿಸಿ ಅವರ ಆದಾಯ ಸುಮಾರು 130 ಕೋಟಿ ರೂ. ಗಳೆಂದು ಅಂದಾಜಿಸಲಾಗಿದೆ. 2019-20 ರಲ್ಲಿ 28 ಕೋಟಿ ರೂ. ಪಾವತಿಸಿದ್ದರು. 2018-2019 ರಲ್ಲಿಯೂ ಅಷ್ಟೇ ತೆರಿಗೆ ಕಟ್ಟಿದ್ದರು. 2017-18ರಲ್ಲಿ 12.17 ಕೋಟಿ ರೂ ಹಾಗೂ 2016-17ರಲ್ಲಿ 10.93 ಕೋಟಿ ರೂ ಪಾವತಿಸಿದ್ದರು.
ಧೋನಿ ಅವರು ಹಲವಾರು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಸ್ಪೋರ್ಟ್ಸ್ ವೇರ್, ಹೋಮ್ ಇಂಟೀರಿಯರ್ ಕಂಪನಿಯಾದ ಹೋಮ್‌ಲೇನ್ ಸೇರಿದಂತೆ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ತಮ್ಮ ತವರಾದ ರಾಂಚಿಯಲ್ಲಿ ಸುಮಾರು 43 ಎಕರೆ ಜಮೀನಿನಲ್ಲಿ ಸಾವಯವ ಕೃಷಿಯನ್ನು ಹೊಂದಿದೆದ್ದಾರೆ. 2020 ಆಗಸ್ಟ್ 15 ರಂದು ಧೋನಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಸದ್ಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್(csk) ತಂಡದ ನಾಯಕರಾಗಿ ಆಡುತ್ತಿದ್ದಾರೆ.