ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ನೇ ಸಾಲಿನಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಹೇಂದ್ರ ಸಿಂಗ್ ಧೋನಿ(MS Dhoni) ಅವರೇ ಮುನ್ನಡೆಸಲಿದ್ದಾರೆ ಎಂದು ಸಿಎಸ್‌ಕೆ ಫ್ರಾಂಚೈಸಿಯ ಸಿಇಒ ಕೆ.ಎಸ್. ವಿಶ್ವನಾಥನ್ ತಿಳಿಸಿದ್ದಾರೆ.
ಆಟಗಾರರ ರೀಟೈನ್ ಮತ್ತು ರಿಲೀಸಿಂಗ್ ಪ್ರಕ್ರಿಯೆ ಮುಗಿದ ಬಳಿಕ ಮಾತನಾಡಿದ ವಿಶ್ವನಾಥನ್, 16ನೇ ಆವೃತ್ತಿಯ ಐಪಿಎಲ್ನಲ್ಲಿ ಸಿಎಸ್‌ಕೆ ತಂಡ ಧೋನಿಯ ಮುಂದಾಳತ್ವದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ ಎಂದು ತಿಳಿಸುವ ಮೂಲಕ ಧೋನಿಯೇ ತಂಡದ ನಾಯಕನಾಗಿ ಮುಂದುವರಿಯುವ ಸೂಚನೆ ನೀಡಿದ್ದಾರೆ.
ಕಳೆದ ಆವೃತ್ತಿಯಲ್ಲಿ ರವೀಂದ್ರ ಜಡೇಜಾ ಅವರಿಗೆ ತಂಡದ ನಾಯಕತ್ವ ವಹಿಸಲಾಗಿತ್ತು. ಆದರೆ ಜಡೇಜಾ ನೇತೃತ್ವದಲ್ಲಿ ತಂಡ ಆರಂಭದಲ್ಲೇ ವೈಫಲ್ಯ ಅನುಭವಿಸಿತು. ಬಳಿಕ ಟೂರ್ನಿಯ ಮಧ್ಯೆ ಮತ್ತೆ ಧೋನಿ ನಾಯಕತ್ವ ವಹಿಸಿಕೊಂಡಿದ್ದರು. ಇದೀಗ ನೂತನ ನಾಯಕನ ಬದಲು 16ನೇ ಆವೃತ್ತಿಗೂ ಧೋನಿಯನ್ನೇ ನಾಯಕನಾಗಿ ಮುಂದುವರಿಸಲು ಫ್ರಾಂಚೈಸಿ ನಿರ್ಧರಿಸಿದೆ.
ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡವು 2010, 2011, 2018 ಹಾಗೂ 2021ನೇ ಸಾಲಿನಲ್ಲಿ ಐಪಿಎಲ್ ಟ್ರೋಫಿ ಜಯಿಸಿತ್ತು. ಅಲ್ಲದೆ 2010 ಹಾಗೂ 2014ರಲ್ಲಿ ಚಾಂಪಿಯನ್ಸ್ ಲೀಗ್ ಟ್ರೋಫಿ ಕೂಡ ಗೆದ್ದಿತ್ತು. ಇನ್ನು ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಂಡ ಮತ್ತು ತಂಡದಿಂದ ಕೈ ಬಿಟ್ಟಿರುವ ಆಟಗಾರರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ತಂಡದಲ್ಲಿ ಉಳಿಸಿಕೊಂಡಿರುವ ಆಟಗಾರರು: ಎಂಎಸ್ ಧೋನಿ (ನಾಯಕ), ಡೆವೊನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್‌ಗೇಕರ್, ಡ್ವೇನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ಮತೀಶ್ ಪಥಿರಾಣಾ, ಸಿಮರ್‌ಜೀತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ.
ತಂಡದಿಂದ ಬಿಡುಗಡೆಗೊಂಡ ಆಟಗಾರರು: ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ಆಡಮ್ ಮಿಲ್ನೆ, ಹರಿ ನಿಶಾಂತ್, ಕ್ರಿಸ್ ಜೋರ್ಡಾನ್, ಭಗತ್ ವರ್ಮಾ, ಕೆಎಂ ಆಸಿಫ್, ನಾರಾಯಣ್ ಜಗದೀಶನ್.
ಉಳಿಕೆ ಮೊತ್ತ: 20.45 ಕೋಟಿ
ಇದನ್ನೂ ಓದಿ | IPL 2023 | ಫ್ರಾಂಚೈಸಿಗಳಿಂದ ಬಿಡುಗಡೆಗೊಂಡ, ಉಳಿದುಕೊಂಡ ಆಟಗಾರರ ಪಟ್ಟಿ ಇಂತಿದೆ