ರಾಂಚಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಆಟಗಾರ ಎಂಎಸ್ ಧೋನಿ(MS Dhoni) ಫುಟ್ಬಾಲ್(ms dhoni football) ಅಭಿಮಾನಿ. ಭಾರತ ತಂಡದ ಪರ ಆಡುತ್ತಿದ್ದ ವೇಳೆ ಧೋನಿ ಬಿಡುವು ಸಿಕ್ಕಾಗಲೆಲ್ಲಾ ಹೆಚ್ಚಾಗಿ ಸ್ನೇಹಿತರ ಜತೆ ಫುಟ್ಬಾಲ್ ಆಡುತ್ತಿದ್ದರು. ನಿವೃತ್ತಿಯಾದ ಬಳಿಕ ಅವರು ಫುಟ್ಬಾಲ್ ಆಡುವುದನ್ನು ನಿಲ್ಲಿಸಿದ್ದರು. ಇದೀಗ ಧೋನಿಗೆ ಬ್ಯಾಡ್ಮಿಂಟನ್ ಕ್ರೀಡೆಯ ಮೇಲೆ ಒಲವು ಹುಟ್ಟಿಕೊಂಡಂತಿದೆ. ಹೌದು, ಧೋನಿ ಬ್ಯಾಡ್ಮಿಂಟನ್ ಆಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ.
ಧೋನಿ ತಮ್ಮ ಸ್ನೇಹಿತರ ಜತೆ ಬ್ಯಾಡ್ಮಿಂಟನ್ ಆಡುತ್ತಿರುವ ವಿಡಿಯೊವನ್ನು ಜಾನ್ಸ್ ಎನ್ನುವ ನೆಟ್ಟಿಗರೊಬ್ಬರು ತಮ್ಮ ಟ್ವಿಟರ್ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಎಲ್ಲೋ ಟಿ-ಶರ್ಟ್ ಧರಿಸಿ ಧೋನಿ ಬ್ಯಾಡ್ಮಿಂಟನ್ ಆಡುತ್ತಿರುವುದನ್ನು ನೋಡಬಹುದಾಗಿದೆ. ಅದರಲ್ಲೂ ಧೋನಿಯ ರಾಕೆಟ್ ವೇಗದ ಜಂಪಿಂಗ್ ಸ್ಮ್ಯಾಶ್(jump smash) ಕಂಡು ಅಭಿಮಾನಿಗಳು ದಂಗಾಗಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.
43 ವರ್ಷದಲ್ಲಿಯೂ ಧೋನಿಯ ಈ ಫಿಟ್ನೆಸ್ ನೋಡುವಾಗ ಅವರು ಮುಂದಿನ ಆವೃತ್ತಿಯ ಐಪಿಎಲ್ನಲ್ಲಿ ಆಡುವುದು ಖಚಿತ ಎನ್ನುವಂತಿದೆ. ಇದೇ ವರ್ಷ ಐಪಿಎಲ್ ಆರಂಭಕ್ಕೂ ಮುನ್ನ ಧೋನಿ ದುಬೈನಲ್ಲಿ ಟೆನಿಸ್ ಆಡಿದ್ದ ವಿಡಿಯೊ ವೈರಲ್ ಆಗಿತ್ತು. ಧೋನಿ ಜತೆ ಪಂತ್ ಕೂಡ ಕಾಣಿಸಿಕೊಂಡಿದ್ದರು.
ವರದಿಯೊಂದರ ಪ್ರಕಾರ ಬಿಸಿಸಿಐ(BCCI) ಕನಿಷ್ಠ ಐದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಆಟಗಾರರನ್ನು ಅನ್‌ಕ್ಯಾಪ್ಡ್ ವಿಭಾಗದಲ್ಲಿ ಇರಿಸುವ ನಿಯಮವನ್ನು ಮರಳಿ ತರಲು ಮುಂದಾಗಿದೆ ಎನ್ನಲಾಗಿದೆ. ಹೀಗಾಗಿ ಧೋನಿ ಅನ್‌ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ MS Dhoni: ಅಭಿಮಾನಿಯ ಬೈಕ್ ಮೇಲೆ ಆಟೋಗ್ರಾಫ್ ಹಾಕಿದ ಧೋನಿ; ಫೋಟೊ ವೈರಲ್
ಅನ್‌ಕ್ಯಾಪ್ಡ್ ಆಟಗಾರನಿಗೆ ಫ್ರಾಂಚೈಸಿ ಕೇವಲ 4 ಕೋಟಿ ರೂ. ನೀಡಲಿದೆ. ಈ ನಿಯಮ ಜಾರಿಗೆ ಬಂದರೆ ಧೋನಿ ಇದೇ ಮೊತ್ತದಲ್ಲಿ ಚೆನ್ನೈಗಾಗಿ ಆಡುವುದನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಇದೇ ಮೊತ್ತಕ್ಕೆ ಚೆನ್ನೈ ತಂಡ ಧೋನಿಯನ್ನು ಮತ್ತೆ ರೀಟೈನ್ ಮಾಡಿಕೊಳ್ಳಬಹುದು. ಧೋನಿ(MS Dhoni) ಅವರು ಕಳೆದ ವರ್ಷವೇ ಐಪಿಎಲ್ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಒಂದು ವರ್ಷದ ಮಟ್ಟಿಗೆ ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿ ಎಂದೇ ಹೇಳಲಾಗಿತ್ತು. ಆದ್ಯಾಗೂ ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.
ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕೆ
ರಿಷಭ್ ಪಂತ್ ಡೆಲ್ಲಿ ತಂಡದ ಪರ ರಿಟೈನ್ ಆಸಕ್ತಿ ಹೊಂದಿಲ್ಲ ಅವರು ಚೆನ್ನೈ ತಂಡ ಸೇರಲಿದ್ದಾರೆ ಎಂದು ಈಗಾಗಲೇ ವರದಿಯಾಗಿದೆ. ಧೋನಿ ಮೊಣಕಾಲು ನೋವಿನಿಂದ ಬಳಲುತ್ತಿರುವ ಕಾರಣ ಪಂತ್ ಅವರನ್ನು ಚೆನ್ನೈ ತಂಡಕ್ಕೆ ಸೇರಿಸಿಕೊಂಡು ಕೀಪಿಂಗ್ ಹೊಣೆ ಅವರಿಗೆ ನೀಡುವ ಮೂಲಕ ಧೋನಿ ಇಂಪ್ಯಾಕ್ಟ್ ಆಟಗಾರನಾಗಿ ಆಡುವುದು ಸದ್ಯ ಫ್ರಾಂಚೈಸಿ ಮತ್ತು ಧೋನಿಯ ಯೋಜನೆಯಾಗಿದೆ. ಕಳೆದ ಆವೃತ್ತಿಯಲ್ಲಿ ಧೋನಿ ತಂಡದಲ್ಲಿ ಸೂಕ್ತ ವಿಕೆಟ್ ಕೀಪರ್ ಇಲ್ಲದ ಕಾರಣ ತಮ್ಮ ಕಾಲು ನೋವಿನ ಮಧ್ಯೆಯೂ ಸಂಪೂರ್ಣವಾಗಿ ಕೀಪಿಂಗ್ ನಡೆಸಿದ್ದರು.