Site icon Vistara News

Ram Mandir : ಧೋನಿಗೆ ಸಿಕ್ಕಿತು ರಾಮ ಮಂದಿರ ಉದ್ಘಾಟನೆಯ ಆಹ್ವಾನ

Ram Mandir

ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರದ (Ram Mandir) ಬಹು ನಿರೀಕ್ಷಿತ ‘ಪ್ರಾಣ ಪ್ರತಿಷ್ಠಾ’ ಸಮಾರಂಭದಲ್ಲಿ ಭಾಗವಹಿಸಲು ಭಾರತದ ಮಾಜಿ ನಾಯಕ ಎಂಎಸ್ ಧೋನಿಗೆ ಆಹ್ವಾನ ದೊರಕಿದೆ. ಜನವರಿ 22ರಂದು ನಡೆಯಲಿರುವ ಈ ಉನ್ನತ ಮಟ್ಟದ ಧಾರ್ಮಿಕ ಕಾರ್ಯಕ್ರಮದಲ್ಲಿ ಕ್ರೀಡೆ, ಬಾಲಿವುಡ್ ಮತ್ತು ರಾಜಕೀಯದ ಹಲವಾರು ಪ್ರಮುಖ ಭಾರತೀಯ ವ್ಯಕ್ತಿಗಳು ಭಾಗವಹಿಸುವ ನಿರೀಕ್ಷೆಯಿದೆ. ಅಂತೆಯೇ ಧೋನಿಗೂ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ.

ಭಾರತದ ಕ್ರಿಕೆಟ್ ದಂತಕಥೆಗಳಾದ ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಅವರಿಗೂ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದಿಂದ ಆಹ್ವಾನ ಸಿಕ್ಕಿತ್ತು. ಅಂತೆಯೇ ಧೋನಿ ಜನವರಿ 15ರಂದು ಆಹ್ವಾನ ಸ್ವೀಕರಿಸಿದ್ದಾರೆ. ಎಂಎಸ್ ಧೋನಿ ಅವರೊಂದಿಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರೊಂದಿಗೆ ಕಾಣಿಸಿಕೊಂಡರು.

ಎಂಎಸ್ ಧೋನಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಋತುವಿನ ಮೂಲಕ ಮೈದಾನಕ್ಕೆ ಮರಳಲು ಸಜ್ಜಾಗಿದ್ದಾರೆ. ಭಾರತದ ಮಾಜಿ ವಿಕೆಟ್ ಕೀಪರ್​ ಬ್ಯಾಟರ್​ ಕಳೆದ ವರ್ಷ ಮೇ ತಿಂಗಳಲ್ಲಿ ಅಹಮದಾಬಾದ್​ನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ 2023 ರ ಪಂದ್ಯಾವಳಿಯ ಫೈನಲ್​ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ : Ram Mandir : ಅರುಣ್ ಯೋಗಿರಾಜ್​ ಕೆತ್ತಿದ ರಾಮನ ಮೂರ್ತಿಯೇ ಆಯ್ಕೆಯಾಗಿದ್ದು ಯಾಕೆ? ಇಲ್ಲಿದೆ ವಿವರ

ಐಪಿಎಲ್ 2023 ಧೋನಿ ಅವರ ಸ್ಪರ್ಧಾತ್ಮಕ ಕ್ರಿಕೆಟ್​ನಲ್ಲಿ ಅವರ ಕೊನೆಯ ಪಂದ್ಯವಾಗಲಿದೆ ಎಂದು ಹಲವಾರು ಅಭಿಮಾನಿಗಳು ಮತ್ತು ತಜ್ಞರು ನಿರೀಕ್ಷಿಸಿದ್ದರು. ಆದರೆ, ಸಿಎಸ್ಕೆ ನಾಯಕ ಸ್ವತಃ ತಮ್ಮ ಐಪಿಎಲ್ ಪ್ರೊಫೈಲ್ ಅನ್ನು ಮತ್ತೊಂದು ಋತುವಿಗೆ ವಿಸ್ತರಿಸುವ ಸಾಧ್ಯತೆಯ ಬಗ್ಗೆ ಸುಳಿವು ಕೊಟ್ಟರು. ಸಿಎಸ್ಕೆ ಫ್ರಾಂಚೈಸಿ ಅಂತಿಮವಾಗಿ ಐಪಿಎಲ್ 2024 ರ ಋತುವಿಗೆ ಧೋನಿಯನ್ನು ಉಳಿಸಿಕೊಂಡಿತು. ಇದರಿಂದಾಗಿ ಅವರು ಮೈದಾನಕ್ಕೆ ಮರಳುವುದನ್ನು ಬಹುತೇಕ ಖಚಿತಪಡಿಸಿದರು. ಐಪಿಎಲ್ 2024 ಸೀಸನ್ ಮಾರ್ಚ್ 29 ರಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.

ರಾಮಮಂದಿರ ಕುರಿತು ಆ್ಯಪ್ ಬಿಡುಗಡೆ

ಭವ್ಯ ರಾಮಮಂದಿರ ನಿರ್ಮಾಣವಾಗಿದ್ದು, ಜನವರಿ 22ರಂದು ನರೇಂದ್ರ ಮೋದಿ (Narendra Modi) ಅವರು ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ಇದರಿಂದಾಗಿ ಅಯೋಧ್ಯೆಗೆ ಭೇಟಿ ನೀಡುವವರ, ಮುಂದೆ ನೀಡಲಿರುವ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗಲಿದೆ. ದೇಶ-ವಿದೇಶಗಳ ಕೋಟ್ಯಂತರ ಜನ ರಾಮನ ದರ್ಶನಕ್ಕಾಗಿ (Lord Ram) ಅಯೋಧ್ಯೆಗೆ ಆಗಮಿಸಲಿದ್ದಾರೆ. ಇದನ್ನು ಮನಗಂಡ ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ‘ದಿವ್ಯ ಅಯೋಧ್ಯಾ’ (Divya Ayodhya) ಎಂಬ ಆ್ಯಪ್ ಅಭಿವೃದ್ಧಿಪಡಿಸಿದ್ದು, ಯಾತ್ರಿಕರಿಗೆ ಇದು ಆಲ್‌ ಇನ್‌ ಒನ್‌ ಗೈಡ್‌ ಆಗಲಿದೆ.

ಆ್ಯಪ್‌ನಲ್ಲಿ ಏನೇನಿದೆ?
ಇಡೀ ಅಯೋಧ್ಯೆ ನಗರವನ್ನು ವೀಕ್ಷಿಸಲು ಬೇಕಾದ ಎಲ್ಲ ಮಾಹಿತಿಯನ್ನು ದಿವ್ಯ ಅಯೋಧ್ಯಾ ಆ್ಯಪ್ ಒಳಗೊಂಡಿದೆ. ರಾಮಮಂದಿರ ಸೇರಿ ಅಯೋಧ್ಯೆ ನಗರದಲ್ಲಿರುವ ದೇವಾಲಯಗಳು, ಸರಯೂ ನದಿ, ಅಯೋಧ್ಯೆಯ ಐತಿಹಾಸಿಕ ಹಿನ್ನೆಲೆ, ರಾಮಮಂದಿರದ ಇತಿಹಾಸ, ದೇವಾಲಯಗಳಿಗೆ ತೆರಳಲು ಮಾರ್ಗ, ಸ್ಮಾರಕಗಳು, ಅವುಗಳ ಕಾಲಘಟ್ಟ ಸೇರಿ ನೂರಾರು ಮಾಹಿತಿಯು ಆ್ಯಪ್‌ನಲ್ಲಿದೆ. ಅಯೋಧ್ಯೆಗೆ ಆಗಮಿಸುವ ಯಾತ್ರಿಕರು ಈ ಒಂದು ಆ್ಯಪ್ ಇನ್‌ಸ್ಟಾಲ್‌ ಮಾಡಿಕೊಂಡರೆ ಸಾಕು, ಎಲ್ಲ ಮಾಹಿತಿ ಸಿಗುವ ಹಾಗೆ ಅಭಿವೃದ್ಧಿಪಡಿಸಲಾಗಿದೆ.

Exit mobile version