Site icon Vistara News

IPL 2024: ‘ಆರ್​ಸಿಬಿಗೆ ಒಂದು ಕಪ್​ ಗೆಲ್ಲಿಸಿ ಕೊಡಿ’; ಧೋನಿಗೆ ಮನವಿ ಮಾಡಿದ ಅಭಿಮಾನಿ

rcb fan

ಬೆಂಗಳೂರು: ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ(IPL 2024) ನತದೃಷ್ಟ ತಂಡಗಳಲ್ಲಿ ಒಂದಾಗ, ಇದುವರೆಗೂ ಕಪ್​ ಗೆಲ್ಲದ ರಾಯಲ್ ಚಾಲೆಂಜರ್ಸ್​ ಬೆಂಗಳೂರು(Royal Challengers Bangalore) ತಂಡದ ಅಭಿಮಾನಿಯೊಬ್ಬ, ಟೀಮ್​ ಇಂಡಿಯಾದ ಮಾಜಿ ನಾಯಕ ಮತ್ತು ಆಟಗಾರ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರ ಬಳಿ ಆರ್​ಸಿಬಿಗೆ ಕಪ್​​ ಗೆಲ್ಲಿಸಿಕೊಡುವಂತೆ ಮನವಿ ಮಾಡಿದ್ದಾನೆ. ಈ ವಿಡಿಯೊ ವೈರಲ್ ಆಗಿದೆ.

ಧೋನಿ ಜತೆಗಿನ ಸಂದರ್ಶನವೊಂದರಲ್ಲಿ ಆರ್​ಸಿಬಿ ಅಭಿಮಾನಿಯೊಬ್ಬ ಕಳೆದ 16 ವರ್ಷಗಳಿಂದ ತಾನು ಆರ್​ಸಿಬಿ ತಂಡದ ಅಪ್ಪಟ ಅಭಿಮಾನಿ, ಆದರೆ ನಾವು ಇದುವರೆಗೂ ಒಂದೂ ಬಾರಿಯೂ ಚಾಂಪಿಯನ್​ ಆಗಿಲ್ಲ. ನೀವು 5 ಐಪಿಎಲ್​ ಕಪ್​ ಗೆದ್ದ ನಾಯಕನಾಗಿದ್ದೀರ. ನನ್ನ ಕೋರಿಕೆ ಎಂದರೆ ನೀವು ಒಂದು ಬಾರಿ ಆರ್​ಸಿಬಿಗೆ ಬಂದು ಕಪ್​ ಗೆಲ್ಲಿಸಿ ನಮ್ಮ ಕೊರಗನ್ನು ನೀಗಿಸಬೇಕು ಎಂದು ಈ ಅಭಿಮಾನಿ ಧೋನಿಯ ಬಳಿ ಮನವಿ ಮಾಡಿದ್ದಾನೆ.

ಇದನ್ನೂ ಓದಿ IPL 2024: ಹರಾಜಿನಲ್ಲಿ ಮಾರಾಟವಾಗದ ಟಿ20 ಕ್ರಿಕೆಟ್​ನ ನಂಬರ್ 1 ಬೌಲರ್

ಅಭಿಮಾನಿಯ ಪ್ರಶ್ನೆಗೆ ನಗುತ್ತಲೇ ಉತ್ತರ ನೀಡಿದ ಧೋನಿ, ಆರ್​ಸಿಬಿ ಉತ್ತಮ ತಂಡ. ಆದರೆ ಕೆಲವೊಮ್ಮೆ ಕ್ರಿಕೆಟ್​ನಲ್ಲಿ ನಾವು ನಿರೀಕ್ಷೆ ಮಾಡಿದ ಫಲಿತಾಂಶ ಕಂಡು ಬರುದಿಲ್ಲ. ಕೆಲವು ಸಂದರ್ಭದಲ್ಲಿ ಆಟಗಾರರ ಗಾಯದ ಸಮಸ್ಯೆ, ಆಯ್ಕೆ ವಿಚಾರ ಹೀಗೆ ಹಲವು ಕಾರಣಗಳಿರುತ್ತವೆ. ಎಲ್ಲ 10 ತಂಡಗಳಿಗೂ ಕಪ್ ಗೆಲ್ಲುವ ಸಾಮರ್ಥ್ಯವಿದೆ. ನನ್ನ ಕಡೆಯಿಂದ ಎಲ್ಲ ತಂಡಕ್ಕೂ ಶುಭ ಹಾರೈಸುತ್ತೇನೆ ಎಂದು ಹೇಳಿದರು.

ಇದೇ ವೇಳೆ ಧೋನಿ, ನಾನು ಯಾವುದೇ ತಂಡಕ್ಕೂ ಸಲಹೆ ನೀಡಲು ಬಯಸುವುದಿಲ್ಲ. ಏಕೆಂದರೆ ನನ್ನ ತಂಡದ ಬಗ್ಗೆ ಚಿಂತಿಸಲೇ ನನಗೆ ಸಮಯ ಸಾಲುತ್ತಿಲ್ಲ. ಜತೆಗೆ ನಾನು ನನ್ನ ತಂಡ ಬಿಟ್ಟು ಬೇರೆ ತಂಡಕ್ಕೆ ಸಲಹೆ ನೀಡಿದರೆ ನನ್ನ ಅಭಿಮಾನಿಗಳ ಗತಿ ಏನು. ಅವರಿಗೂ ಇದು ಬೇಸರವಾಗಗುತ್ತದೆ. ಆದ್ದರಿಂದ ನಾನು ಸದ್ಯ ನನ್ನ ತಂಡದ ಬಗ್ಗೆ ಮಾತ್ರ ಯೋಚಿಸುತ್ತೇನೆ ಎಂದು ಹೇಳಿದರು.

ಚೆನ್ನೈ ತಂಡ ಈ ಬಾರಿಯ ಹರಾಜಿನಲ್ಲಿ ಸ್ಟಾರ್​ ಆಟಗಾರರನ್ನು ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ಸಿಯಾಗಿದೆ. ಇತ್ತೀಗೆ ಮುಕ್ತಾಯ ಕಂಡಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಶ್ರೇಷ್ಠ ಬ್ಯಾಟಿಂಗ್​ ಪ್ರದರ್ಶನ ತೋರಿದ್ದ ನ್ಯೂಜಿಲ್ಯಾಂಡ್​ನ ರಚಿನ್​ ರವೀಂದ್ರ ಮತ್ತು ಡೇರಿಯಲ್​ ಮಿಚೆಲ್​ ಹಾಗೂ ಭಾರತದ ಶಾರ್ದೂಲ್​ ಠಾಕೂರ್​ ಅವರನ್ನು ಖರೀದಿ ಮಾಡಿ ಬಲಿಷ್ಠ ತಂಡ ರೂಪಿಸಿಕೊಂಡಿದೆ. ಆರ್​ಸಿಬಿ ವಿಂಡೀಸ್​ನ ಬೌಲರ್​ ಅಲ್ಜಾರಿ ಜೋಸೆಫ್ ಅವರನ್ನು 11 ಕೋಟಿ ರೂ. ನೀಡಿ ಖರೀದಿ ಮಾಡಿದೆ.

ಆರ್​ಸಿಬಿ ಈ ಬಾರಿ ಹರಾಜಿನಲ್ಲಿ ಒಟ್ಟು 6 ಆಟಗಾರರನ್ನು ಖರೀದಿ ಮಾಡಿತ್ತು. ಖರೀದಿಸಿದ ಎಲ್ಲ ಆರು ಆಟಗಾರರು ಕೂಡ ಕಳೆದ ಆವೃತ್ತಿಯ ಐಪಿಎಲ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದವರಾಗಿದ್ದಾರೆ. ಇದೇ ವಿಚಾರದಲ್ಲಿ ಆರ್​ಸಿಬಿ ಅಭಿಮಾನಿಗಳು ಫ್ರಾಂಚೈಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮ್ಯಾನೆಜ್​ಮೆಂಟ್​ನ ಅಧಿಕಾರಿಗಳು ಬದಲಾದರು. ಹಳೆ ಚಾಳಿ ಮಾತ್ರ ಬದಲಾಗಿಲ್ಲ. ಎಷ್ಟೇ ಹೇಳಿದರೂ ಇನ್ನೂ ಕೂಡ ಬುದ್ಧಿ ಬಂದಿಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

Exit mobile version