Site icon Vistara News

MS Dhoni: ಧೋನಿ ಮನೆಯಲ್ಲಿರುವ ಗ್ಯಾರೇಜ್‌​ ಕಂಡು ಬೆರಗಾದ ವೆಂಕಟೇಶ್​ ಪ್ರಸಾದ್‌

MS Dhoni exclusive bike collection

ಬೆಂಗಳೂರು: ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರಿಗೆ ಬೈಕ್​ ಮತ್ತು ಕಾರುಗಳೆಂದರೆ ಅಚ್ಚುಮೆಚ್ಚು ಅದರಲ್ಲೂ ಬೈಕ್​ ಮೇಲೆ ಹೆಚ್ಚಿನ ಮೋಹ, ರಾಂಚಿಯ ಗ್ಯಾರೇಜ್‌ನಲ್ಲಿ(ms dhoni garage) ಅನೇಕ ವಿಂಟೇಜ್ ಮತ್ತು ಐಷಾರಾಮಿ ಕಾರುಗಳು ಮತ್ತು ಬೈಕ್‌ಗಳನ್ನು ಅವರು ಸಂಗ್ರಹಿಸಿದ್ದಾರೆ.(MS Dhoni car and bike collection) ಆದರೆ ಧೋನಿಯ ಗ್ಯಾರೇಜ್‌ನಲ್ಲಿರುವ ವಾಹನಗಳ ಫೋಟೊ ಮತ್ತು ವಿಡಿಯೊ ಎಲ್ಲಿಯೂ ಇದುವರೆಗೆ ಕಂಡುಬಂದಿರಲಿಲ್ಲ. ಇದೀಗ ಧೋನಿ ಅವರ ಗ್ಯಾರೇಜ್‌ನಲ್ಲಿರುವ ಬೈಕ್ ಮತ್ತು ಕಾರುಗಳ ವಿಡಿಯೊವನ್ನು ಮಾಜಿ ಆಟಗಾರ ವೆಂಕಟೇಶ್​ ಪ್ರಸಾದ್​(Venkatesh Prasad) ಹಂಚಿಕೊಂಡಿದ್ದಾರೆ. ಜತೆಗೆ ಈ ಗ್ಯಾರೇಜ್‌ ಕಂಡು ಬೆರಗಾದೆ ಎಂದಿದ್ದಾರೆ.

ಧೋನಿಗೆ ಕಾರು, ಬೈಕ್ ಮೇಲಿನ ಪ್ರೀತಿ ಬಗ್ಗೆ ಅವರ ಅಭಿಮಾನಿಗಳಿಗೆ ಈಗಾಗಲೇ ತಿಳಿದಿದೆ. ಕ್ರಿಕೆಟ್ ಮ್ಯಾಚ್​ನಲ್ಲಿ ದುಡಿದ ಹಣದಲ್ಲಿ ಮೊದಲ ಬಾರಿಗೆ ಧೋನಿ ಅವರು ಸೆಕೆಂಡ್ ಹ್ಯಾಂಡ್ ಯಮಹಾ ಆರ್ ಎಕ್ಸ್ 100 ಬೈಕ್ ಒಂದನ್ನು ಖರೀದಿಸಿದ್ದರು. ಇದು ಧೋನಿಯ ಮೊದಲ ಬೈಕ್.​ ಇಲ್ಲಿಂದ ಆರಂಭವಾದ ಅವರ ಬೈಕ್​ ಕಲೆಕ್ಷನ್ ಇದೀಗ ದೊಡ್ಡ ​ವಸ್ತು ಸಂಗ್ರಹಾಲಯದ ರೀತಿಯಲ್ಲಿ ಮಾರ್ಪಟ್ಟಿದೆ.

ವೆಂಕಟೇಶ್​ ಪ್ರಸಾದ್ ಮತ್ತು ಅವರ ಗೆಳೆಯರು ಧೋನಿ ಅವರನ್ನು ರಾಂಚಿಯಲ್ಲಿ ಭೇಟಿ ಮಾಡಿದ್ದಾರೆ. ಇದೇ ವೇಳೆ ಅವರು ಧೋನಿಯ ಗ್ಯಾರೇಜ್‌ನಲ್ಲಿರುವ ಬೈಕ್ ಮತ್ತು ಕಾರುಗಳನ್ನು ಕಂಡು ಬೆರಗಾಗಿದ್ದಾರೆ. ಟ್ವಿಟರ್​ನಲ್ಲಿ ಈ ಕುರಿತ ವಿಡಿಯೊವನ್ನು ಹಂಚಿಕೊಂಡಿರುವ ವೆಂಕಿ “ಧೋನಿ ನಿಜಕ್ಕೂ ಕ್ರೇಜಿ. ಇಷ್ಟೊಂದು ಪ್ರಮಾಣದ ಕಾರು ಮತ್ತು ಬೈಕ್​ಗಳನ್ನು ಅವರು ಸಂಗ್ರಹಿಸಿದ್ದಾರೆ ಎಂದರೆ ಮೆಚ್ಚಲೇ ಬೇಕು. ಇದನ್ನೂ ಕಂಡು ನಿಜಕ್ಕೂ ನಾನು ಬೆರಗಾದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ Yoga Day 2023: ಯೋಗ ಮಾಡಿ ಮಿಂಚಿದ ಕ್ರಿಕೆಟ್​ ಆಟಗಾರರು

ಮೂರು ಅಂತಸ್ತಿನಲ್ಲಿರುವ ಧೋನಿ ಅವರ ಈ ಗ್ಯಾರೇಜ್​ ಕಂಡು ಅಭಿಮಾನಿಗಳು ಕೂಡ ಅಚ್ಚರಿಗೊಂಡಿದ್ದಾರೆ. ‘ಅಬ್ಬಾ’ ಶೋ ರೂಮ್‌ನಲ್ಲಿಯೂ ಇಷ್ಟೊಂದು ವಾಹನಗಳನ್ನು ಕಂಡಿಲ್ಲ ಎಂದಿದ್ದಾರೆ. ಇನ್ನೂ ಕೆಲವರು ಧೋನಿ ಅವರು ವಸ್ತು ಸಂಗ್ರಹಾಲಯವನ್ನೂ ಮೀರಿಸಿದ್ದಾರೆ ಎಂದು ಕಮೆಂಟ್​ ಮಾಡಿದ್ದಾರೆ.

ಧೋನಿ ಅವರಿಗೆ ಬೈಕ್​ ಎಂದರೆ ಅಚ್ಚುಮೆಚ್ಚು ಹಲವು ಬಾರಿ ಅವರು ಬೈಕ್​ನಲ್ಲಿ ಏಕಾಂಗಿಯಾಗಿ ಪ್ರಯಾಣಿಸಿದ ವಿಡಿಯೊ ವೈರಲ್​ ಆಗಿತ್ತು. ಅವರು ಬೈಕ್​ ರೈಡಿಂಗ್​ ಮಾಡಲೆಂದೇ ತಮ್ಮ ರಾಂಚಿಯಲ್ಲಿರುವ ನಿವಾಸದಲ್ಲಿ ಬೈಕ್​ ಟ್ರ್ಯಾಕ್​ ಕೂಡ ನಿರ್ಮಾಣ ಮಾಡಿದ್ದಾರೆ. ಲಾಡ್​ ಡೌನ್​ ಸಮಯದಲ್ಲಿ ಮಗಳ ಜತೆ ಇಲ್ಲಿ ಬೈಕ್ ರೈಡಿಂಗ್​ ಮಾಡುತ್ತಿರುವ ಫೋಟೊ ಮತ್ತು ವಿಡಿಯೊವನ್ನು ​ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇತ್ತೀಚೆಗೆ ಮುಕ್ತಾಯ ಕಂಡ 16ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ಧೋನಿ ಸಾರಥ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ 5ನೇ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. 16ನೇ ಆವೃತ್ತಿಯ ಐಪಿಎಲ್​ ಬಳಿಕ ಧೋನಿ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ ಎಂದು ಭಾರಿ ಸುದ್ದಿಯಾಗಿತ್ತು. ಆದರೆ ಧೋನಿ ತಮ್ಮ ನಿವೃತ್ತಿ ನಿರ್ಧಾರವನ್ನು ಮುಂದೂಡಿದ್ದು ಮುಂದಿನ ಆವೃತ್ತಿಯಲ್ಲಿ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಅವರು ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆಯ ಹಾದಿಯಲ್ಲಿದ್ದಾರೆ.

Exit mobile version