ಚೆನ್ನೈ: ಐಪಿಎಲ್ನ ಅತ್ಯಂತ ಯಶಸ್ವಿ ತಂಡ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನಾಯಕ ಎಂಎಸ್ ಧೋನಿ (MS Dhoni) ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಗೆ ಪ್ರತಿಕ್ರಿಯೆಯಾಗಿ ಮದ್ರಾಸ್ ಹೈಕೋರ್ಟ್ ಐಪಿಎಸ್ ಅಧಿಕಾರಿ ಸಂಪತ್ ಕುಮಾರ್ ಅವರಿಗೆ 15 ದಿನಗಳ ಜೈಲು ಶಿಕ್ಷೆ ವಿಧಿಸಿದೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಿಗೆ ಐಪಿಎಲ್ ಆರಂಭವಾಗುವ ಮೊದಲೇ ಕಾನೂನು ಸಮರದಲ್ಲಿ ಜಯ ಸಿಕ್ಕಿದೆ.
ನ್ಯಾಯಮೂರ್ತಿಗಳಾದ ಎಸ್.ಎಸ್.ಸುಂದರ್ ಮತ್ತು ಸುಂದರ್ ಮೋಹನ್ ಅವರನ್ನೊಳಗೊಂಡ ನ್ಯಾಯಪೀಠವು ತೀರ್ಪು ನೀಡಿದೆ. ಬಾರ್ ಆ್ಯಂಡ್ ಬೆಂಚ್ ವರದಿ ಪ್ರಕಾರ ಶಿಕ್ಷೆಯ ಕುರಿತು ಮೇಲ್ಮನವಿ ಸಲ್ಲಿಸಲು ಕುಮಾರ್ ಅವರಿಗೆ ಕೋರ್ಟ್ ಅವಕಾಶ ನೀಡಿದೆ.
ಝೀ ಮೀಡಿಯಾ, ಕುಮಾರ್ ಮತ್ತು ಇತರರನ್ನು ಗುರಿಯಾಗಿಸಿಕೊಂಡು ಎಂಎಸ್ ಧೋನಿ ಹೈಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. 2013ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ವೇಳೆ ಧೋನಿ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ಸ್ನಲಲಿ ಭಾಗಿಯಾಗಿದ್ದಾರೆ ಎಂದು ಸೂಚಿಸುವ ಕುಮಾರ್ ಅವರ ಹೇಳಿಕೆಗಳನ್ನು ಆಧರಿಸಿ ವರದಿ ಮಾಡಲಾಗಿತ್ತು.
ಐಪಿಎಲ್ ಬೆಟ್ಟಿಂಗ್ ಹಗರಣದ ಆರಂಭದ ಕುರಿತು ತನಿಖೆ ನಡೆಸಿದ ಕುಮಾರ್ ಸೇರಿದಂತೆ ಎಲ್ಲರೂ ಈ ವಿಷಯಕ್ಕೆ ಸಂಬಂಧಿಸಿ ಮಾನಹಾನಿಕರ ಹೇಳಿಕೆಗಳನ್ನು ಪ್ರಸಾರ ಮಾಡದಂತೆ ತಡೆಯಲು ಧೋನಿ ಮನವಿ ಸಲ್ಲಿಸಿದ್ದರು. ಧೋನಿ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ಝೀ, ಕುಮಾರ್ ಮತ್ತು ಇತರರನ್ನು ನಿಷೇಧಿಸಿ ಹೈಕೋರ್ಟ್ ಈ ಹಿಂದೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ಮಾನನಷ್ಟ ಮೊಕದ್ದಮೆಗೆ ಪ್ರತಿಕ್ರಿಯೆಯಾಗಿ ಝೀ ಮತ್ತು ಇತರ ಪ್ರತಿವಾದಿಗಳು ತಮ್ಮ ಲಿಖಿತ ಹೇಳಿಕೆಗಳನ್ನು ಸಲ್ಲಿಸಿದ ನಂತರ, ಎಂಎಸ್ ಧೋನಿ ಅರ್ಜಿ ಸಲ್ಲಿಸಿದರು. ಆದರೂ ಕುಮಾರ್ ಅವರು ಮಾನಹಾನಿಕರ ಹೇಳಿಕೆಗಳನ್ನು ನೀಡುವುದನ್ನು ಮುಂದುವರಿಸಿದ್ದರು ಎಂದು ಈ ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಹೀಗಾಗಿ ಕುಮಾರ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ಧೋನಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಪ್ರಕರಣದುದ್ದಕ್ಕೂ ಎಂಎಸ್ ಧೋನಿಗೆ ಕಾನೂನು ನೆರವನ್ನು ವಕೀಲ ಪಿಆರ್ ರಾಮನ್ ಒದಗಿಸಿದ್ದರು.
ಧೋನಿ 7ನೇ ಸಂಖ್ಯೆ ಜೆರ್ಸಿಗೆ ವಿದಾಯ!
ಎರಡು ವಿಶ್ವಕಪ್ ವಿಜೇತ, ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್ ಧೋನಿ(MS Dhoni) ಅವರ 7ನೇ ಸಂಖ್ಯೆ ಜೆರ್ಸಿಯನ್ನು ಬಿಸಿಸಿಐ ನಿವೃತ್ತಿಗೊಳಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಇನ್ನು ಮುಂದೆ ಭಾರತೀಯ ಆಟಗಾರರು ಈ ಸಂಖ್ಯೆಯ ಜೆರ್ಸಿಯನ್ನು ತೊಡದಿರಲು ಸೂಚಿಸಲಾಗಿದೆ ಎಂದು ವರದಿಯಾಗಿದೆ.
ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಅವರ ನಂ. 10 ಶರ್ಟ್ಗೆ ಈಗಾಗಲೇ ಭಾರತೀಯ ಮಂಡಳಿ ನಿವೃತ್ತಿ ಮಾಡಿದೆ. ಇದೀಗ ಭಾರತ ತಂಡಕ್ಕೆ ಧೋನಿ ಸಲ್ಲಿಸಿದ ಕೊಡುಗೆಗೆ ಗೌರವ ಸೂಚಿಸುವ ಸಲುವಾಗಿ ಅವರ 7 ನಂಬರ್ನ ಜೆರ್ಸಿಗೂ ನಿವೃತ್ತಿ ಹೇಳಿ ಸಚಿನ್ ಅವರ ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ನಿಯಮಗಳ ಪ್ರಕಾರ ಯಾವುದೇ ಸಂಖ್ಯೆಯ ಜೆರ್ಸಿಗೆ ಅಧಿಕೃತವಾಗಿ ವಿದಾಯ ಹೇಳುವುದು ಅಸಾಧ್ಯ. ಆದರೆ ಭಾರತೀಯ ಆಟಗಾರರು ಅದನ್ನು ಬಳಸಲು ಮುಂದಾಗದಿರುವುದು ಅನಧಿಕೃತ ನಿವೃತ್ತಿಯ ವಾತಾವರಣ ಸೃಷ್ಟಿಸಿದೆ. ಅದೂ ಅಲ್ಲದೇ ಧೋನಿ ಅವರ 7ನೇ ಸಂಖ್ಯೆಯ ಜೆರ್ಸಿಯನ್ನು ಬೇರಾವುದೇ ಆಟಗಾರ ಧರಿಸುವುದನ್ನು ಅಭಿಮಾನಿಗಳು ಕೂಡ ಸಹಿಸುವುದಿಲ್ಲ.