ಬೆಂಗಳೂರು: ಸ್ಟಾರ್ ಆಟಗಾರನಾಗಿದ್ದು, ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದರೂ ಕೂಡ ಮಹೇಂದ್ರ ಸಿಂಗ್ ಧೋನಿ(MS Dhoni) ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಅಷ್ಟಾಗಿ ಆ್ಯಕ್ಟಿವ್ ಆಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿದ್ದರೂ ಧೋನಿ ಮಾತ್ರ ಇತರ ಆಟಗಾರರಂತೆ ಪೋಸ್ಟ್ಗಳನ್ನು ಮಾಡುವುದು ಬಹಳ ಅಪರೂಪ. ಇದೀಗ ಅವರು 17ನೇ ಆವೃತ್ತಿಯ ಐಪಿಎಲ್(IPL 2024) ಆರಂಭಕ್ಕೆ ಇನ್ನು ಕೇವಲ 2 ವಾರ ಬಾಕಿ ಇರುವಾಗ ಫೇಸ್ಬುಕ್ನಲ್ಲಿ ಮಾಡಿದ ಪೋಸ್ಟ್ ಭಾರೀ ಸಂಚಲನ ಮೂಡಿಸಿದೆ.
ಹಾಲಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡದ ನಾಯಕನಾಗಿರುವ ಧೋನಿ ಅವರು ಈ ಬಾರಿಯ ಐಪಿಎಲ್ ಬಳಿಕ ವಿದಾಯ ಹೇಳಲಿದ್ದಾರೆ ಎಂದು ಹೇಳಲಾಗಿದೆ. ಕಳೆದ ವರ್ಷವೇ ಅವರು ಐಪಿಎಲ್ಗೆ ವಿದಾಯ ಹೇಳಲು ಸಜ್ಜಾಗಿದ್ದರು. ಆದರೆ, ಅಭಿಮಾನಿಗಳ ಒತ್ತಾಸೆಯ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಇದೀಗ ಟೂರ್ನಿ ಆರಂಭಕ್ಕೂ ಮುನ್ನ ಧೋನಿ ತಮ್ಮ ಫೇಸ್ಬುಕ್ನಲ್ಲಿ ‘ಹೊಸ ಸೀಸನ್‌ಗಾಗಿ ಕಾತುರದಿಂದ ಕಾಯುತ್ತಿದ್ದೇನೆ. ಈ ಆವೃತ್ತಿಯಲ್ಲಿ ನಾನು ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಧೋನಿಯ ಈ ಪೋಸ್ಟ್ ಕಂಡು ಅವರ ಅಭಿಮಾನಿಗಳು ಕೊಂಚ ಆತಂಕಗೊಂಡಿದ್ದಾರೆ. ಈ ಬಾರಿ ಧೋನಿ ನಿವೃತ್ತಿಯಾಗುವುದು ಖಚಿತ ಎನ್ನುವುದು ತಿಳಿದುಬಂದಿದೆ. ಕಳೆದ ಬಾರಿ ಧೋನಿ ಸಾರಥ್ಯದಲ್ಲೇ ಚೆನ್ನೈ 5ನೇ ಬಾರಿ ಟ್ರೋಫಿ ಗೆದ್ದಿತ್ತು.
ಧೋನಿ ಅವರು ಮುಂದಿನ ಆವೃತ್ತಿಯಲ್ಲಿ ಅಂದರೆ 18ನೇ ಆವೃತ್ತಿಯಲ್ಲಿ ಚೆನ್ನೈ ತಂಡದ ಕೋಚ್ ಅಥವಾ ಮೆಂಟರ್ ಆಗಿ ಕಾರ್ಯನಿರ್ವಹಿಸಲು ಯೋಜನೆಯೊಂದನ್ನು ಹಾಕಿಕೊಂಡಂತಿದೆ. ಇಲ್ಲವಾದಲ್ಲಿ ಅವರು ಈ ರೀತಿಯ ಪೋಸ್ಟ್ ಮಾಡುತ್ತಿರಲಿಲ್ಲ. ಒಟ್ಟಾರೆಯಾಗಿ ಅವರ ವಿದಾಯಕ್ಕೆ ವೇದಿಕೊಂದು ಸಿದ್ದವಾಗಿದೆ.
ಇದನ್ನೂ ಓದಿ IPL 2024: ಅಭಿಮಾನಿಗಳಿಗೆ ಸಿಹಿ ಸುದ್ದಿ; ಸಂಪೂರ್ಣ ಐಪಿಎಲ್ ಆಡಲಿದ್ದಾರೆ ಈ ಸ್ಟಾರ್ ಆಟಗಾರ
Facebook post of MS Dhoni.
— Johns. (@CricCrazyJohns) March 4, 2024
– It's time for the Thala show in IPL 2024. 🦁 pic.twitter.com/vM1HBtrKEa
ಅಭ್ಯಾಸ ಆರಂಭಿಸಿದ ಚೆನ್ನೈ ತಂಡ
ಹಾಲಿ ಚಾಂಪಿಯನ್ ಆಗಿರುವ ಚೆನ್ನೈ ತಂಡ ಈಗಾಗಲೇ 17ನೇ ಆವೃತ್ತಿಗಾಗಿ ಅಭ್ಯಾಸ ಆರಂಭಿಸಿದೆ. ಶನಿವಾರ ತಂಡದ ಹಲವು ಆಟಗಾರರು ಚೆನ್ನೈಯಲ್ಲಿ ಅಭ್ಯಾಸ ಶಿಬಿರದಲ್ಲಿ ಕಾಣಿಸಿಕೊಂಡಿದ್ದರು. ಧೋನಿ ಅವರು ಇನ್ನೆರಡು ದಿನದಲ್ಲಿ ಈ ಅಭ್ಯಾಸ ಕ್ಯಾಂಪ್ ಸೇರಲಿದ್ದಾರೆ. ಈ ಬಾರಿಯ ಆವೃತ್ತಿಗಾಗಿ ಆಟಗಾರರ ಮಿನಿ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಖರೀದಿಸಿ ತಂಡವನ್ನು ಬಲಿಷ್ಠಗೊಳಿಸಿದೆ. ಕಳೆದ ಬಾರಿಯ ಟೂರ್ನಿಯಲ್ಲಿ ಬೆರಳೆಣಿಕೆಯ ಅನುಭವಿ ಆಟಗಾರರನ್ನು ಹೊಂದಿದ್ದರೂ ಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಈ ಬಾರಿ ಬಲಿಷ್ಠವಾಗಿ ಗೋಚರಿಸಿದ ಚೆನ್ನೈ ತಂಡ ಮತ್ತೆ ಕಪ್ ಗೆಲ್ಲುವುದು ಖಚಿತ ಎಂದು ಟೂರ್ನಿ ಆರಂಭಕ್ಕೂ ಮುನ್ನವೇ ಅಭಿಮಾನಿಗಳು ಭವಿಷ್ಯ ನುಡಿಯಲಾರಂಭಿಸಿದ್ದಾರೆ. ಮಾರ್ಚ್ 22ರಿಂದ ಆರಂಭಗೊಳ್ಳಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಚೆನ್ನೈ ತಂಡ ತನ್ನ ಬದ್ಧ ಎದುರಾಳಿ ಆರ್ಸಿಬಿ ವಿರುದ್ಧ ಪಂದ್ಯವನ್ನಾಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.