Site icon Vistara News

MS Dhoni Jersey: ಧೋನಿ 7ನೇ ಸಂಖ್ಯೆ ಜೆರ್ಸಿಗೆ ವಿದಾಯ!

MS Dhoni's No. 7 Jersey

ಮುಂಬಯಿ: ಎರಡು ವಿಶ್ವಕಪ್​ ವಿಜೇತ, ಟೀಮ್​ ಇಂಡಿಯಾದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರ 7ನೇ ಸಂಖ್ಯೆ ಜೆರ್ಸಿಯನ್ನು ಬಿಸಿಸಿಐ ನಿವೃತ್ತಿಗೊಳಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಇನ್ನು ಮುಂದೆ ಭಾರತೀಯ ಆಟಗಾರರು ಈ ಸಂಖ್ಯೆಯ ಜೆರ್ಸಿಯನ್ನು ತೊಡದಿರಲು ಸೂಚಿಸಲಾಗಿದೆ ಎಂದು ವರದಿಯಾಗಿದೆ.

ಕ್ರಿಕೆಟ್​ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಅವರ ನಂ. 10 ಶರ್ಟ್​ಗೆ ಈಗಾಗಲೇ ಭಾರತೀಯ ಮಂಡಳಿ ನಿವೃತ್ತಿ ಮಾಡಿದೆ. ಇದೀಗ ಭಾರತ ತಂಡಕ್ಕೆ ಧೋನಿ ಸಲ್ಲಿಸಿದ ಕೊಡುಗೆಗೆ ಗೌರವ ಸೂಚಿಸುವ ಸಲುವಾಗಿ ಅವರ 7 ನಂಬರ್​ನ ಜೆರ್ಸಿಗೂ ನಿವೃತ್ತಿ ಹೇಳಿ ಸಚಿನ್ ಅವರ ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ನಿಯಮಗಳ ಪ್ರಕಾರ ಯಾವುದೇ ಸಂಖ್ಯೆಯ ಜೆರ್ಸಿಗೆ ಅಧಿಕೃತವಾಗಿ ವಿದಾಯ ಹೇಳುವುದು ಅಸಾಧ್ಯ. ಆದರೆ ಭಾರತೀಯ ಆಟಗಾರರು ಅದನ್ನು ಬಳಸಲು ಮುಂದಾಗದಿರುವುದು ಅನಧಿಕೃತ ನಿವೃತ್ತಿಯ ವಾತಾವರಣ ಸೃಷ್ಟಿಸಿದೆ. ಅದೂ ಅಲ್ಲದೇ ಧೋನಿ ಅವರ 7ನೇ ಸಂಖ್ಯೆಯ ಜೆರ್ಸಿಯನ್ನು ಬೇರಾವುದೇ ಆಟಗಾರ ಧರಿಸುವುದನ್ನು ಅಭಿಮಾನಿಗಳು ಕೂಡ ಸಹಿಸುವುದಿಲ್ಲ.

“ಯುವ ಆಟಗಾರರು ಮತ್ತು ಪ್ರಸ್ತುತ ಭಾರತೀಯ ತಂಡದ ಆಟಗಾರರಿಗೆ ಎಂಎಸ್ ಧೋನಿಯ ನಂಬರ್ 7 ಜೆರ್ಸಿಯನ್ನು ಆಯ್ಕೆ ಮಾಡದಂತೆ ತಿಳಿಸಲಾಗಿದೆ. ಆಟಗಾರರು ನಂ. 7 ಜೆರ್ಸಿ ಪಡೆಯಲು ಸಾಧ್ಯವಿಲ್ಲ, ಮತ್ತು ಲಭ್ಯವಿರುವ ಸಂಖ್ಯೆಗಳ ಪಟ್ಟಿಯಿಂದ ನಂ. 10 ಈಗಾಗಲೇ ಹೊರಗಿದೆ” ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವಾಗಿ ಎನ್​ಡಿಟಿವಿ ತನ್ನ ವರದಿಯಲ್ಲಿ ತಿಳಿಸಿದೆ. ಆದರೆ ಬಿಸಿಸಿಐ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಧೋನಿ ಅವರ ಜೆರ್ಸಿ ವಿದಾಯದ ಮಾತುಗಳು ಕೆಲ ವರ್ಷಗಳ ಹಿಂದೆಯೇ ಕೇಳಿ ಬಂದಿತ್ತು. ಆಗ ಈ ಕುರಿತು ಪ್ರತಿಕ್ರಿಯಿಸಿದ್ದ ಬಿಸಿಸಿಐನ ಅಪೆಕ್ಸ್‌ ಕೌನ್ಸಿಲ್‌ ಸದಸ್ಯೆ ಶಾಂತಾ ರಂಗಸ್ವಾಮಿ ಅವರು ‘ಈ ಗೌರವಕ್ಕೆ ಧೋನಿ ಅರ್ಹರು‘ ಎಂದಿದ್ದರು. ಆಟಗಾರ ಹಾಗೂ ನಾಯಕನಾಗಿ ಅವರ ಕೊಡುಗೆ ಅಪಾರವಾಗಿದೆ. ಇದನ್ನು ಪರಿಗಣಿಸಿ ಜೆರ್ಸಿಗೆ ವಿದಾಯ ಹೇಳಿದರೆ ಅವರಿಗೆ ಸೂಕ್ತ ಗೌರವ ದೊರೆತಂತಾಗುತ್ತದೆ‘ ಎಂದು ಶಾಂತಾ ಹೇಳಿದ್ದರು.

ಇದನ್ನೂ ಓದಿ MS Dhoni : ಧೋನಿಯೂ ಕೋಪ ಮಾಡ್ಕೋತಾರೆ; ಮಾಜಿ ಆಟಗಾರ ಹೀಗೆ ಹೇಳಿದ್ದು ಯಾಕೆ?

2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ 275 ರನ್​ಗಳು ಬೇಕಾಗಿದ್ದವು. ಅಂತೆಯೇ ಆರಂಭಿಕ ಬ್ಯಾಟರ್​ ಗೌತಮ್​ ಗಂಭೀರ್​ 97 ರನ್​ ಬಾರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಸೆಹ್ವಾಗ್​ ಸೊನ್ನೆಗೆ ಔಟಾಗಿದ್ದರೆ ಸಚಿನ್​​ ಕೊಡಗೆ 18 ರನ್​. ಆದರೆ, ಕೊನೇ ಹಂತದಲ್ಲಿ ಕ್ರೀಸ್​ಗೆ ತಳವೂರಿ ಆಡಿದ್ದ ನಾಯಕ ಧೋನಿ ಅಜೇಯ 91 ರನ್​ ಬಾರಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು. ಅಂತೆಯೇ ಇನಿಂಗ್ಸ್​ನ ಕೊನೇ ಓವರ್​ನಲ್ಲಿ ಲಂಕಾ ಬೌಲರ್​ ನುವಾನ್​ ಕುಲಶೇಖರ ಅವರ ಎಸೆತಕ್ಕೆ ಸಿಕ್ಸರ್​ ಬಾರಿಸಿದ್ದರು. ಅದು ಭಾರತದ ವಿಜಯ ರನ್​ ಆಗಿತ್ತು. 

Exit mobile version