ಮುಂಬಯಿ: ಐಪಿಎಲ್ (IPL 2023) ಆರಂಭಕ್ಕೆ ಒಂದು ವಾರ ಬಾಕಿ ಉಳಿದಿದೆ. ಹೀಗಾಗಿ ಎಲ್ಲ ಫ್ರಾಂಚೈಸಿಗಳು ಸಿದ್ಧತೆ ನಡೆಸಿಕೊಳ್ಳುತ್ತಿವೆ. ಮಾರ್ಚ್ 31ರಂದು ಗುಜರಾತ್ ಜಯಂಟ್ಸ್ ಹಾಗೂ ಮುಂಬಯಿ ಇಂಡಿಯನ್ಸ್ ತಂಡಗಳ ನಡುವೆ ಮೊದಲ ಹಣಾಹಣಿ ನಡೆಯಲಿವೆ. ಆದರೆ, ಈ ಬಾರಿಯ ಐಪಿಎಲ್ ಟೂರ್ನಿ ಪ್ರಮುಖ ಆಟಗಾರರ ಅಲಭ್ಯತೆಯಿಂದಾಗಿ ಕಳೆಗುಂದಲಿದೆ ಎಂದು ಹೇಳುತ್ತಿರುವ ನಡುವೆ ಇಬ್ಬರು ಆಟಗಾರರು ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಕ್ಕೆ ಉಳಿಯುವ ಪರಿಸ್ಥಿತಿ ಎದುರಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್ ಮುಕೇಶ್ ಚೌಧರಿ ಹಾಗೂ ಲಖನೌ ಸೂಪರ್ ಜಯಂಟ್ಸ್ ತಂಡದ ಬೌಲರ್ ಮೊಹ್ಸಿನ್ ಖಾನ್ ಗಾಯಗೊಂಡ ಬೌಲರ್ಗಳು.
ಜಸ್ಪ್ರಿತ್ ಬುಮ್ರಾ ಬೆನ್ನು ನೋವಿನ ಸಮಸ್ಯೆಯಿಂದಾಗಿ ಸರ್ಜರಿಗೆ ಒಳಗಾಗಿದ್ದು ಟೂರ್ನಿಯಲ್ಲಿ ಆಡುತ್ತಿಲ್ಲ. ಏತನ್ಮಧ್ಯೆ ಶ್ರೇಯಸ್ ಅಯ್ಯರ್ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದು ಅವರ ಲಭ್ಯತೆಯ ಬಗ್ಗೆಯೂ ಮಾಹಿತಿ ಇಲ್ಲ. ಆರಂಭಿಕ ಕೆಲವು ಪಂದ್ಯಗಳಿಗೆ ಅವರು ಇರುವುದಿಲ್ಲ ಎಂದೇ ಹೇಳಲಾಗುತ್ತಿದ್ದರೂ ಈ ಬಗ್ಗೆ ಸ್ಪಷ್ಟತೆ ಇಲ್ಲ. ಅದಕ್ಕಿಂತ ಮೊದಲು ಡೆಲ್ಲಿ ತಂಡದ ವಿಕೆಟ್ಕೀಪರ್ ಬ್ಯಾಟರ್ ರಿಷಭ್ ಪಂತ್ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿ ಮನೆಯಲ್ಲಿಯೇ ಉಳಿಯುವಂತಾಗಿದೆ. ಇದೀಗ ಮತ್ತಿಬ್ಬರು ಪ್ರಮುಖ ಆಟಗಾರರು ಗಾಯದ ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ.
ಇದನ್ನೂ ಓದಿ : IPL Records: ಅತಿ ಹೆಚ್ಚು ಐಪಿಎಲ್ ಶತಕ ಬಾರಿಸಿದ ಟಾಪ್ 5 ಆಟಗಾರರು
ಈ ಇಬ್ಬರೂ ಎಡಗೈ ಬೌಲರ್ಗಳು 2022ನೇ ಆವೃತ್ತಿಯ ಐಪಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಕ್ರಿಕೆಟ್ ಪಂಡಿತರು ಅವರಿಬ್ಬರ ಬೌಲಿಂಗ್ ವೇಗ, ಲೈನ್ ಮತ್ತು ಲೆಂತ್ ಬಗ್ಗೆ ಕೊಂಡಾಡಿದ್ದರು. ಅದಕ್ಕೆ ಪೂರಕವಾಗಿ ಅವರಿಬ್ಬರೂ ಹಲವು ಪಂದ್ಯಗಳ ಹೀರೋ ಎನಿಸಿಕೊಂಡಿದ್ದರು. ಮುಕೇಶ್ ಚೌಧರಿ 2022ನೇ ಐಪಿಎಲ್ನಲ್ಲಿ ಆಡಿದ 13ನ ಪಂದ್ಯಗಳಲ್ಲಿ 16 ವಿಕೆಟ್ ಕಬಳಿಸಿದ್ದರು. ಅವರ ಬಗ್ಗೆ ಮಾತನಾಡಿದ ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್, ಮುಕೇಶ್ ಗಾಯಗೊಂಡಿದ್ದಾರೆ. ಆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ, ಈ ಆವೃತ್ತಿಗೆ ಅವರು ಲಭ್ಯರಾಗುವರೇ ಎಂಬ ಬಗ್ಗೆ ಇನ್ನೂ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಮಕೇಶ್ ಚೌಧರಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ. ಬೇಗ ಗಾಯದಿಂದ ವಾಪಸಾಗುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೊಹ್ಸಿನ್ ಖಾನ್ ಮಾರಕ ಬೌಲಿಂಗ್
ಮೊಹ್ಸಿನ್ ಖಾನ್ ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಎಲ್ಲರ ಗಮನ ಸೆಳೆದಿದ್ದರು. ಆಡಿರುವ 9 ಪಂದ್ಯಗಳಲ್ಲಿ 14 ವಿಕೆಟ್ಗಳನ್ನು ತಮ್ಮದಾಗಿಸಿಕೊಂಡಿದ್ದರು. ಅವರ ಬೌಲಿಂಗ್ ಎಕಾನಮಿ ರೇಟ್ 5.97. ಅದಾಗಲೇ ಅವರು ಎಲ್ಎಸ್ಜಿ ಕ್ಯಾಂಪ್ ಸೇರಿಕೋಂಡು ಅಭ್ಯಾಸ ಆರಂಭಿಸಿದ್ದರು. ಏತನ್ಮಧ್ಯೆ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಆದರೆ,ಅ ವರ ಲಭ್ಯತೆ ಕುರಿತು ಲಖನೌ ಫ್ರಾಂಚೈಸಿ ಸ್ಪಷ್ಟ ಮಾಹಿತಿ ನೀಡಿಲ್ಲ.