ಮುಂಬಯಿ: ಮುಂಬಯಿ ಇಂಡಿಯನ್ಸ್ ತಂಡದ ವೇಗದ ಬೌಲರ್ ಆಕಾಶ್ ಮಧ್ವಾಲ್ ಕ್ರಿಕೆಟ್ ಕ್ಷೇತ್ರದ ಗಮನ ಸೆಳೆದಿದ್ದಾರೆ. ಐಪಿಎಲ್ 16ನೇ ಆವೃತ್ತಿಯ (IPL 2023) ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ (LSG) ತಂಡದ ವಿರುದ್ಧ 5 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಚಾಂಪಿಯನ್ ಪ್ರದರ್ಶನ ನೀಡಿದ್ದರು. ಈ ಮೂಲಕ ಅವರು ಟಾಕ್ ಆಫ್ ದಿ ಟೌನ್ ಎನಿಸಿಕೊಂಡಿದ್ದಾರೆ. ಆದರೆ, ಈ ವೇಗದ ಬೌಲರ್ ಸ್ಥಳೀಯ ಟೂರ್ನಿಗಳಲ್ಲಿ ಬ್ಯಾನ್ ಆಗಿದ್ದರೆಂಬ ಸತ್ಯವನ್ನು ಅವರ ಸಹೋದರ ಹೇಳಿದ್ದಾರೆ. ಆದರೆ, ಅವರು ಬ್ಯಾನ್ ಆಗಿದ್ದು ಅಕ್ರಮದ ಕಾರಣಕ್ಕೆ ಅಲ್ಲ. ಬದಲಾಗಿ ಅವರ ವೇಗದ ಬೌಲಿಂಗ್ ಎದುರಿಸಲಾಗದೇ ಆಡಲು ಅವಕಾಶವೇ ಕೊಡುತ್ತಿರಲಿಲ್ಲ.
ಆಕಾಶ್ ಅವರ ಸಹೋದರ ಆಶಿಶ್ ಈ ಸತ್ಯವನ್ನು ಹೇಳಿದ್ದಾರೆ. ಜತೆಗೆ ಸಹೋದರನ ಬೆಳವಣಿಗೆಗೆ ಕಾರಣರಾದ ಮುಂಬಯಿ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನೂ ಹೊಗಳಿದ್ದಾರೆ.
ರೋಹಿತ್ ಶರ್ಮಾ ಅವರು ಆಟಗಾರರಿಗೆ ಅವಕಾಶಗಳನ್ನು ನೀಡುತ್ತಾರೆ. ಅವರು ತಮ್ಮ ತಂಡದ ಆಟಗಾರರ ಮೇಳೆ ನಂಬಿಕೆ ಇಟ್ಟುಕೊಂಡಿರುತ್ತಾರೆ ಹಾಗೂ ಅದೇ ಮಾದರಿಯಲ್ಲಿ ಬೆಂಬಲಿಸುತ್ತಾರೆ. ಹೊಸ ಆಟಗಾರನು ತಂಡದಲ್ಲಿ ತನ್ನ ಸ್ಥಾನದ ಬಗ್ಗೆ ಆತಂಕ ಹೊಂದಿರುತ್ತಾರೆ. ಆದರೆ ರೋಹಿತ್ ಹೊಸ ಆಟಗಾರರ ಆತಂಕ ದೂರ ಮಾಡುತ್ತಾರೆ. ಅದೇ ರೀತಿ ಆಕಾಶ್ಗೂ ಅವಕಾಶ ನೀಡಿದ್ದಾರೆ ಎಂದು ಇಂಡಿಯಾ ಟುಡೆ ಜತೆ ಮಾತನಾಡಿದ ಆಶಿಶ್ ಅವರ ಹೇಳಿದ್ದಾರೆ.
ಇದೇ ವೇಳೆ ಆಕಾಶ್ ಅವರ ಆರಂಭಿಕ ದಿನಗಳ ಆಟದ ಬಗ್ಗೆ ಮಾತನಾಡಿದ ಆಶಿಶ್, ಆಕಾಶ್ ಬೌಲಿಂಗ್ ವೇಗಕ್ಕೆ ಎಲ್ಲರೂ ಹೆದರುತ್ತಿದ್ದರು. ಹೀಗಾಗಿ ಸ್ಥಳೀಯ ಪಂದ್ಯಾವಳಿಗೆ ಅವರನ್ನ ಸೇರಿಸಿಕೊಳ್ಳುತ್ತಿರಲಿಲ್ಲ. ಇದರಿಂದಾಗಿ ಅವರಿಗೆ ರೂರ್ಕಿಯಲ್ಲಿ ಆಡಲು ಅವಕಾಶವೇ ಸಿಗುತ್ತಿರಲಿಲ್ಲ. ಹೊರಗಿನ ಪ್ರದೇಶಗಳಿಗೆ ಹೋಗಿ ಅವರು ಕ್ರಿಕೆಟ್ ಆಡುತ್ತಿದ್ದರು ಎಂದು ಹೇಳಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಋತುವಿನ 46ನೇ ಪಂದ್ಯದಲ್ಲಿ ಆಕಾಶ್ ಐಪಿಎಲ್ಗೆ ಪದಾರ್ಪಣೆ ಮಾಡಿದರು. ಆ ಪಂದ್ಯದಲ್ಲಿ ಅವರು ತಮ್ಮ ಮೂರು ಓವರ್ಗಳ ಸ್ಪೆಲ್ನಲ್ಲಿ 37 ರನ್ ನೀಡಿದ್ದರು. ಆದರೆ, ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೇ ಅವರನ್ನು ಔಟ್ ಮಾಡುವ ಮೂಲಕ ಟೂರ್ನಿಯ ಮೊದಲ ವಿಕೆಟ್ ತಮ್ಮದಾಗಿಸಿಕೊಂಡಿದ್ದರು/
ರೂರ್ಕೆಲಾ ಮೂಲದ ವೇಗದ ಬೌಲರ್ ಗುಜರಾತ್ ಟೈಟನ್ಸ್ ವಿರುದ್ಧ 3/31, ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 4/37 ಮತ್ತು ಎಲ್ಎಸ್ಜಿ ವಿರುದ್ಧ ದಾಖಲೆಯ 5/5 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: IPL 2023: ಮತ್ತೆ ಸೊನ್ನೆ ಸುತ್ತಿದ ದಿನೇಶ್ ಕಾರ್ತಿಕ್; ಡಕ್‌ಔಟ್‌ನಲ್ಲಿ ಈಗ ರೋಹಿತ್ ಶರ್ಮಾಗಿಂತ ಮುಂದು
ಈವರೆಗೆ ಆಡಿರುವ 7 ಪಂದ್ಯಗಳಲ್ಲಿ 12.84ರ ಸರಾಸರಿಯಲ್ಲಿ 13 ವಿಕೆಟ್ ಕಬಳಿಸಿದ್ದಾರೆ ಆಕಾಶ್. ಜೇಸನ್ ಬೆಹ್ರೆನ್ಡಾರ್ಫ್ (14 ವಿಕೆಟ್) ಮತ್ತು ಪಿಯೂಷ್ ಚಾವ್ಲಾ (21 ವಿಕೆಟ್) ನಂತರ ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಆಗಿದ್ದಾರೆ.
ಜಸ್ಪ್ರೀತ್ ಬುಮ್ರಾ, ಜೋಫ್ರಾ ಆರ್ಚರ್ ಮತ್ತು ಜೇ ರಿಚರ್ಡ್ಸನ್ ಗಾಯಗೊಂಡಿರುವ ಕಾರಣ ಮುಂಬಯಿ ಇಂಡಿಯನ್ಸ್ ತಂಡದ ಬೌಲಿಂಗ್ ದುರ್ಬಲಗೊಂಡಿತ್ತು. ಇಂಥ ಸಂದರ್ಭದಲ್ಲಿ ಆಕಾಶ್ ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚಿದ್ದರು. 29 ವರ್ಷದ ಈ ಬೌಲರ್ ಕ್ವಾಲಿಫೈಯರ್ 2ರಲ್ಲಿ ಮತ್ತೊಂದು ಅದ್ಭುತ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದಾರೆ.