Site icon Vistara News

IPL 2024 : ಸೂರ್ಯನ ಪ್ರತಾಪಕ್ಕೆ ಮಂಕಾದ ಸನ್​; ಮುಂಬೈಗೆ 7 ವಿಕೆಟ್​ ಭರ್ಜರಿ ಗೆಲುವು

IPL 2024

ಮುಂಬಯಿ: ಸೂರ್ಯಕುಮಾರ್ ಯಾದವ್ (Suryakumar Yadav) ಬಾರಿಸಿದ ಸ್ಫೋಟಕ ಶತಕ (102,51 ಎಸೆತ, 12 ಫೋರ್, 6 ಸಿಕ್ಸರ್​) ಹಾಗೂ ಬೌಲರ್​ಗಳ ಸಂಘಟಿತ ಹೋರಾಟದಿಂದ ಮಿಂಚಿದ ಮುಂಬೈ ಇಂಡಿಯನ್ಸ್​ (Mumbai Indians) ತಂಡ ಐಪಿಎಲ್​ 17ನೇ ಆವೃತ್ತಿಯ (IPL 2024) 55ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ (Sunrisers Hyderabad)​ ವಿರುದ್ಧ 7 ವಿಕೆಟ್​ ಸುಲಭ ವಿಜಯ ದಾಖಲಿಸಿದೆ. ಈ ಮೂಲಕ ಸೂರ್ಯನ ಪ್ರತಾಪಕ್ಕೆ ಸನ್​​ ಮಂಕಾಗಿ ಹೋಯಿತು. ಇದು ಮುಂಬಯಿ ತಂಡಕ್ಕೆ ಹಾಲಿ ಆವೃತ್ತಿಯ 12 ಪಂದ್ಯಗಳಲ್ಲಿ 4ನೇ ಗೆಲುವಾಗಿದೆ. ಇದರೊಂದಿಗೆ 10ನೇ ಸ್ಥಾನದಿಂದ ಒಂದು ಸ್ಥಾನ ಮೇಲ್ಕಕೇರಿದೆ. ಇದೇ ವೇಳೆ ಕಳೆದ ಆವೃತ್ತಿಯ ರನ್ನರ್​ ಅಪ್​ ತಂಡ ಗುಜರಾತ್​ ಕೊನೇ ಸ್ಥಾನಕ್ಕೆ ಇಳಿದಿದೆ.

ಇಲ್ಲಿನ ಐತಿಹಾಸಿಕ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಮುಂಬಯಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಸನ್​ ರೈಸರ್ಸ್​ ತಂಡ ತನ್ನ ಪಾಲಿನ 20 ಓವರ್​ಗಳಲ್ಲಿ 8 ವಿಕೆಟ್​ಗೆ 173 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬೈ ತಂಡ ಆರಂಭಿಕ ಹಿನ್ನಡೆ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಅವರ ಅದ್ಭುತ್ ಇನಿಂಗ್ಸ್​ ನೆರವಿನಿಂದ ಇನ್ನೂ 7 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು 174 ರನ್ ಬಾರಿಸಿ ಗೆಲುವು ಸಾಧಿಸಿತು.

ಇದನ್ನೂ ಓದಿ: T20 World Cup 2024 : ಕೇಸರಿಯ ರಂಗು; ಟೀಮ್​ ಇಂಡಿಯಾದ ಟಿ20 ವಿಶ್ವ ಕಪ್​​ ಜೆರ್ಸಿ ಬಿಡುಗಡೆ

ಸೂರ್ಯನ ಆಧಾರ

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಹೊರಟ ಮುಂಬೈ ತಂಡ ಆಘಾತಕಾರಿ ಆರಂಭ ಪಡೆಯಿತು. ಇಶಾನ್ ಕಿಶನ್ 9 ರನ್​ಗೆ ಔಟಾದರೆ ರೋಹಿತ್ ಶರ್ಮಾ 4 ರನ್​ಗೆ ಕ್ರೀಸ್ ತೊರೆಯಬೇಕಾಯಿತು. ನಮನ್ ಧಿರ್ ಶೂನ್ಯಕ್ಕೆ ಔಟಾಗುವ ಮೂಲಕ ಮತ್ತೆ ಸೋಲಿನ ಸುಳಿಗೆ ಸಿಲುಕಿತು. 31 ರನ್​ಗೆ 3 ವಿಕೆಟ್ ಕಳೆದುಕೊಂಡ ಮುಂಬೈ ಆತಂಕಕ್ಕೆ ಬಿತ್ತು. ಈ ವೇಳೆ ಕ್ರೀಸ್​ನಲ್ಲಿ ಗಟ್ಟಿಯಾಗಿ ನಿಂತ ಸೂರ್ಯಕುಮಾರ್​ ಎಸ್​ಆರ್​ಎಚ್​ ಬೌಲರ್​ಗಳನ್ನು ದಂಡಿಸಲು ಆರಂಭಿಸಿದರು. 30 ಎಸೆತಕ್ಕೆ ಅರ್ಧ ಶತಕ ಬಾರಿಸಿದ ಸೂರ್ಯ ನಂತರದ 21 ಎಸೆತದಲ್ಲಿ ಉಳಿದ ರನ್​ಗಳನ್ನು ಪೂರೈಸಿದರು. ಇವರಿಗೆ ಜತೆಯಾದ ತಿಲಕ್​ ವರ್ಮಾ 32 ಎಸೆತಕ್ಕೆ 37 ರನ್ ಬಾರಿಸಿದರು.

ಎಸ್​ಆರ್​ಎಚ್ ಬ್ಯಾಟರ್​ಗಳು ಫೇಲ್​

ಮೊದಲು ಬ್ಯಾಟ್ ಮಾಡಿದ ಎಸ್​ಆರ್​ಎಚ್​ ಉತ್ತಮ ಆರಂಭ ಪಡೆದ ಬಳಿಕವೂ ಆಘಾತಕಾರಿ ಕುಸಿತ ಕಂಡಿತು. ಟ್ರಾವಿಸ್​ ಹೆಡ್​ 40 ರನ್​ ಬಾರಿಸಿದರೆ ಅಭಿಷೇಕ್ ಶರ್ಮಾ 11 ರನ್​ಗೆ ಮೀಸಲಾದರು. ಮತ್ತೆ ಅವಕಾಶ ಪಡೆದ ಮಯಾಂಕ್​ ಅಗರ್ವಾಲ್​ 5 ರನ್ ಬಾರಿಸಿದರೆ ನಿತಿಶ್​ ಕುಮಾರ್​ 20 ರನ್​ಗೆ ಔಟಾದರು. ಕೊನೆಯಲ್ಲಿ ನಾಯಕ ಪ್ಯಾಟ್​ ಕಮಿನ್ಸ್ 17 ಎಸೆತಕ್ಕೆ 35 ರನ್ ಬಾರಿಸಿ ತಂಡದ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಡುಗೆ ಕೊಟ್ಟರು.

ಮುಂಬೈ ಪರ ಮಾರಕ ಬೌಲಿಂಗ್ ದಾಳಿ ಸಂಘಟಿಸಿದ ಪಿಯೂಶ್​ ಚಾವ್ಲಾ 33 ರನ್​ಗೆ 3 ವಿಕೆಟ್ ಪಡೆದರೆ ಹಾರ್ದಿಕ್ ಪಾಂಡ್ಯ 31 ರನ್​ಗೆ 3 ವಿಕೆಟ್ ಉರುಳಿಸಿದರು.

Exit mobile version