ಮುಂಬಯಿ: ಮುಂಬಯಿ ತಂಡದ ನಿಖರ ಬೌಲಿಂಗ್ ದಾಳಿಗೆ ಬೆಚ್ಚಿ ಬಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಹಿಳೆಯರ ಪ್ರೀಮಿಯರ್ ಲೀಗ್ನ (WPL 2023) ಏಳನೇ ಪಂದ್ಯದಲ್ಲಿ 105 ರನ್ಗಳಿಗೆ ಆಲ್ಔಟ್ ಆಗಿದೆ. ಇದರೊಂದಿಗೆ ಮುಂಬಯಿ ತಂಡದ ಗೆಲುವಿಗೆ 106 ರನ್ಗಳ ಗುರಿ ಎದುರಾಗಿದೆ. ನಾಯಕಿ ಮೆಗ್ಲ್ಯಾನಿಂಗ್ (43) ಹೊರತುಪಡಿಸಿದರೆ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಕಾರಣ ಡೆಲ್ಲಿ ತಂಡಕ್ಕೆ ಹಿನ್ನಡೆ ಉಂಟಾಯಿತು.
ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕಿ ಮೆಗ್ಲ್ಯಾನಿಂಗ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ತಂಡದ ಸದಸ್ಯರು ಆಯ್ಕೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ. 18 ಓವರ್ಗಳಲ್ಲಿ 105 ರನ್ಗಳಿಗೆ ಆಲ್ಔಟ್ ಆಯಿತು. ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ 2 ರನ್ಗೆ ವಿಕೆಟ್ ಒಪ್ಪಿಸಿದರೆ ಅಲೀಸ್ ಕಾಪ್ಸಿ 6 ರನ್ ಗಳಿಸಿ ಔಟಾದರು. ಮರಿಜನ್ ಕಾಪ್ 2 ರನ್ಗೆ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ರೋಡ್ರಿಗಸ್ (25) ಇನಿಂಗ್ಸ್ ಕಟ್ಟುವ ಪ್ರಯತ್ನ ಮಾಡಿದರೂ ದೊಡ್ಡ ಮೊತ್ತ ಪೇರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಜೆಸ್ ಜೊನಾಸೆನ್ 2 ರನ್, ತಾನಿಯಾ ಭಾಟಿಯಾ 4 ರನ್ ಹಾಗೂ ಮಿನ್ನು ಮಣಿ ಶೂನ್ಯಕ್ಕೆ ಔಟಾದರು. ರಾಧಾ ಯಾದವ್ 10 ರನ್ ಕೊಡುಗೆ ಕೊಟ್ಟರೆ ಶಿಖಾ ಪಾಂಡೆ 4 ರನ್ ಗಳಿಸಿದರು.
ಮುಂಬಯಿ ತಂಡದ ಪರ ಬೌಲಿಂಗ್ನಲ್ಲಿ ಸೈಕಾ ಇಶಾಕ್ 13 ರನ್ಗಳಿಗೆ 3 ವಿಕೆಟ್ ಪಡೆದರೆ, ಇಸ್ಸಿ ವಾಂಗ್ 10 ರನ್ ನೀಡಿ 3 ವಿಕೆಟ್ ಉರುಳಿಸಿದರು. ಹೇಲಿ ಮ್ಯಾಥ್ಯೂಸ್ 19 ರನ್ಗೆ 3 ವಿಕೆಟ್ ಉರುಳಿಸಿದರು.