ಮುಂಬಯಿ: ಸಂಘಟಿತ ಬೌಲಿಂಗ್ ಹಾಗ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಮಿಂಚಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಡಬ್ಲ್ಯುಪಿಎಲ್ನ (WPL 2023) 18ನೇ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ 9 ವಿಕೆಟ್ ಸುಲಭ ವಿಜಯ ದಾಖಲಿಸಿತು. ಈ ಮೂಲಕ ಲೀಗ್ ಹಂತದ ಈ ಹಿಂದಿನ ಪಂದ್ಯದ ಸೋಲಿಗೆ ತಿರುಗೇಟು ಕೊಟ್ಟಿತು. ಈ ಪಂದ್ಯದ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಬಳಗ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಎರಡೂ ತಂಡಗಳಿಗೆ ತಲಾ ಒಂದು ಪಂದ್ಯ ಬಾಕಿ ಇವೆ. ಅದರಲ್ಲೂ ಜಯಿಸುವ ಮೂಲಕ ಅಗ್ರ ಸ್ಥಾನ ಕಾಪಾಡಿಕೊಂಡು ನೇರವಾಗಿ ಫೈನಲ್ಗೇರುವುದು ಇತ್ತಂಡಗಳ ನಾಯಕಿಯರ ಉದ್ದೇಶ.
ಇಲ್ಲಿನ ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಸೋಮವಾರ ನಡೆದ ಡಬಲ್ ಹೆಡರ್ನ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಮುಂಬಯಿ ಇಂಡಿಯನ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 109 ರನ್ ಪೇರಿಸಿತು. ಸಾಧಾರಣ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ 9 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟ ಮಾಡಿಕೊಂಡು 110 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು.
ಡೆಲ್ಲಿ ಬ್ಯಾಟಿಂಗ್ ಅಬ್ಬರದ ವಿಡಿಯೊ ಇಲ್ಲಿದೆ
ಮುಂಬಯಿ ನೀಡಿದ್ದ ಸವಾಲಿಗೆ ಕ್ಯಾರೆ ಎನ್ನದ ಡೆಲ್ಲಿ ತಂಡ ಸ್ಫೋಟಕ ಬ್ಯಾಟಿಂಗ್ ನಡೆಸಿತು. ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ 15 ಎಸೆಗಳಲ್ಲಿ 33 ರನ್ ಬಾರಿಸಿದರೆ ನಾಯಕಿ ಮೆಗ್ ಲ್ಯಾನಿಂಗ್ 4 ಫೋಲ್ ಹಾಗೂ 1 ಸಿಕ್ಸರ್ ಮೂಲಕ 32 ರನ್ ಗಳಿಸಿದರು. ಅಲೀಸ್ ಕಾಪ್ಸಿ 5 ಸಿಕ್ಸರ್ ಹಾಗೂ 1 ಫೋರ್ ನೆರವಿನಿಂದ 17 ಎಸೆತಗಳಲ್ಲಿ 38 ರನ್ ಬಾರಿಸಿದರು. ಈ ಮೂವರ ಅಬ್ಬರದ ಬ್ಯಾಟಿಂಗ್ನಿಂದಾಗಿ ಕೇವಲ 54 ಎಸೆತಗಳಲ್ಲಿ ಡೆಲ್ಲಿ ತಂಡ ಗುರಿ ಮುಟ್ಟಿತು.
ಮುಂಬಯಿ ಬ್ಯಾಟಿಂಗ್ ವೈಫಲ್ಯ
ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ಮುಂಬಯಿ ತಂಡ ಸಂಪೂರ್ಣ ವೈಫಲ್ಯ ಎದುರಿಸಿತು. 10 ರನ್ಗಳಾಗುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಡೆಲ್ಲಿ ತಂಡದ ಮಾರಕ ಬೌಲಿಂಗ್ ಹಾಗೂ ಉತ್ತಮ ಕ್ಷೇತ್ರ ರಕ್ಷಣೆ ಮುಂದೆ ಮುಂಬಯಿ ಬ್ಯಾಟರ್ಗಳು ಮಂಕಾದರು. ಹರ್ಮನ್ಪ್ರೀತ್ಕೌರ್ (23), ಪೂಜಾ ವಸ್ತಕಾರ್ (26), ಇಸ್ಸಿ ವಾಂಗ್ (23), ಅಮನ್ಜೋತ್ ಕೌರ್ (19) ಅಲ್ಪ, ಸ್ವಲ್ಪ ಹೋರಾಟ ಸಂಘಟಿಸಿದರೂ ಡೆಲ್ಲಿ ತಂಡಕ್ಕೆ ದೊಡ್ಡ ಮೊತ್ತದ ಸವಾಲೊಡ್ಡಲು ಸಾಧ್ಯವಾಗಲಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ವಿಭಾಗದಲ್ಲಿ ಮರಿಜನ್ ಕಪ್, ಶಿಖಾ ಪಾಂಡೆ, ಜೆಸ್ ಜೊನಾಸೆನ್ ತಲಾ ಎರಡು ವಿಕೆಟ್ ಕಬಳಿಸಿದರೆ ಅರುಂಧತಿ ರೆಡ್ಡಿ 1 ವಿಕೆಟ್ ತಮ್ಮದಾಗಿಸಿಕೊಂಡರು.
ಟಾಸ್ ಗೆದ್ದ ಮೆಗ್ಲ್ಯಾನಿಂಗ್ ಮಾತನಾಡಿ, ಫೀಲ್ಡಿಂಗ್ ಆಯ್ಕೆಗೆ ಯಾವುದೇ ಕಾರಣಗಳು ಇಲ್ಲ. ಆದರೆ, ಪರಿಸ್ಥಿತಿಯನ್ನು ನೋಡಿದರೆ ಚೇಸ್ ಮಾಡಿ ಗೆಲ್ಲುವುದೇ ಉತ್ತಮ ಎಂದು ಅನಿಸುತ್ತದೆ. ನಮ್ಮ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಹೇಳಿದ್ದರು. ತಮ್ಮ ಮಾತನ್ನು ಅವರು ಉಳಿಸಿಕೊಂಡರು.
ಇದನ್ನೂ ಓದಿ : WPL 2023 : ಗುಜರಾತ್ ಜಯಂಟ್ಸ್ ವಿರುದ್ಧ 3 ವಿಕೆಟ್ ವಿಜಯ ಸಾಧಿಸಿದ ಯುಪಿ ವಾರಿಯರ್ಸ್
ಮುಂಬಯಿ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಮಾತನಾಡಿ, ಬ್ಯಾಟಿಂಗ್ನಲ್ಲಿ ನಾವು ಹೆಚ್ಚಿನ ಜವಾಬ್ದಾರಿ ಪ್ರದರ್ಶಿಸಲು ಇಚ್ಛೆಪಡುತ್ತಿದ್ದೇವೆ ಎಂದು ಭರವಸೆ ನೀಡಿದ್ದರು. ಆದರೆ, ಅವರಿಗೆ ಅದು ಸಾಧ್ಯವಾಗಲಿಲ್ಲ.