Site icon Vistara News

Ranji Trophy Final: ಉಡುಪಿ ಮೂಲದ ತನುಷ್‌ ಕೋಟ್ಯಾನ್‌ ದಾಳಿಗೆ ಕುಸಿದ ವಿದರ್ಭ; 42ನೇ ಟ್ರೋಫಿ ಗೆದ್ದ ಮುಂಬೈ

Mumbai vs Vidarbha

ಮುಂಬಯಿ: 538 ರನ್ನುಗಳ ಕಠಿಣ ಗುರಿಯನ್ನು ದಿಟ್ಟವಾಗಿ ಬೆನ್ನಟ್ಟಿಕೊಂಡು ಹೋದ ವಿದರ್ಭ ತಂಡ ರಣಜಿ ಟ್ರೋಫಿ(Ranji Trophy Final) ಫೈನಲ್​ನಲ್ಲಿ​ ಕೊನೆಗೂ ಸೋಲು ಕಂಡಿದೆ. 169 ರನ್ ಅಂತರದ​ ಗೆಲುವು ಸಾಧಿಸಿದ ಮುಂಬೈ 42 ಟ್ರೋಫಿ ಗೆದ್ದ ಸಾಧನೆ ಮಾಡಿತು. ಸೋಲು ಕಂಡರೂ ಕೂಡ ವಿದರ್ಭ ತಂಡದ ಪ್ರತಿ ಹೋರಾಟಕ್ಕೆ ನಿಜಕ್ಕೂ ಒಂದು ಸಲಾಂ ಹೇಳಲೇ ಬೇಕು.

ಕೊನೆ ದಿನವಾದ ಇಂದು ವಿದರ್ಭಕ್ಕೆ ಗೆಲುವು ಸಾಧಿಸಲು 290 ರನ್‌ ಅಗತ್ಯವಿದ್ದು, ಮುಂಬೈ ಗೆಲುವಿಗೆ 5 ವಿಕೆಟ್‌ ಪಡೆಯಬೇಕಿತ್ತು. ಭೋಜನ ವಿರಾಮದ ತನಕ ಐದೇ ವಿಕೆಟ್​ಗೆ 342 ರನ್​ ಬಾರಿಸಿದ್ದ ವಿದರ್ಭ ಪಂದ್ಯವನ್ನು ಗೆಲ್ಲಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಈ ವೇಳೆ ಅಕ್ಷಯ್‌ ವಾಡ್ಕರ್‌ ಶತಕ ಬಾರಿಸಿ ಕ್ರೀಸ್​ನಲ್ಲಿದ್ದರು. ಅವರ ಜತೆಗಾರ ಹರ್ಷ್‌ ದುಬೆ ಕೂಡ ಅರ್ಧಶತಕ ಬಾರಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದರು. ಆದರೆ ಭೋಜನ ವಿರಾಮದ ಬಳಿಕ ನಾಟಕೀಯ ಕುಸಿತ ಕಂಡ ವಿದರ್ಭ 4 ಓವರ್​ ಅಂತರದಲ್ಲಿ ಉಳಿದ 5 ವಿಕೆಟ್​ ಕೂಡ ಕಳೆದುಕೊಂಡು ಸೋಲನುಭವಿಸಿತು.

56 ರನ್​ ಗಳಿಸಿದ್ದ ಅಕ್ಷಯ್‌ ವಾಡ್ಕರ್‌ ಅಂತಿಮ ದಿನಾದ ಇಂದು 102 ರನ್​ ಬಾರಿಸಿ ವಿಕೆಟ್​ ಕೈಚೆಲ್ಲಿದರು. 11 ರನ್​ನಿಂದ ಬ್ಯಾಟಿಂಗ್​ ಮುಂದಿವರಿಸಿದ ಹರ್ಷ್‌ ದುಬೆ 65 ರನ್​ ಗಳಿಸಿದರು. ಈ ಜೋಡಿಯ ವಿಕೆಟ್​ ಪತನಗೊಂಡಂತೆ ವಿದರ್ಭ ಸೋಲು ಕೂಡ ಖಚಿತಗೊಂಡಿತು. ಕರುಣ್‌ ನಾಯರ್‌(74) ರನ್​ ಬಾರಿಸಿದರು. ಮೊದಲ ಇನಿಂಗ್ಸ್​ನಲ್ಲಿ 105 ರನ್​ಗೆ ಆಲೌಟ್​ ಆದ ವಿದರ್ಭ ಇನಿಂಗ್ಸ್​ ಹಿನ್ನಡೆಯೊಂದಿಗೆ ಗೆಲುವಿಗೆ 538 ರನ್ನುಗಳ ಕಠಿಣ ಗುರಿ ಪಡೆಯಿತು. ಮೊದಲ ಇನಿಂಗ್ಸ್​ನಲ್ಲಿ ತೋರಿದ ಕಳಪೆ ಪ್ರದರ್ಶನವನ್ನು ಕಂಡು ವಿದರ್ಭ ದ್ವಿತೀಯ ಇನಿಂಗ್ಸ್​ನಲ್ಲಿಯೂ ಅಲ್ಪ ಮೊತ್ತಕ್ಕೆ ಕುಸಿದು ಹೀನಾಯ ಸೋಲು ಕಾಣಲಿದೆ ಎಂದು ಊಹಿಸಲಾಗಿತ್ತು. ಆದರೆ, ದಿಟ್ಟ ಹೋರಾಟ ನಡೆಸಿ 368 ರನ್​ ಬಾರಿಸಿದರು.

ಮಿಂಚಿದ ತನುಷ್‌ ಕೋಟ್ಯಾನ್‌


ಮುಂಬೈ ಪರ ದ್ವಿತೀಯ ಇನಿಂಗ್ಸ್​ನಲ್ಲಿ ಉಡುಪಿ ಜಿಲ್ಲೆಯ ಪಾಂಗಾಳ ಮೂಲದ ತನುಷ್‌ ಕೋಟ್ಯಾನ್‌ ಅವರು ಘಾತಕ ಬೌಲಿಂಗ್​ ದಾಳಿ ನಡೆಸಿ ಮಿಂಚಿದರು. 4 ವಿಕೆಟ್​ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ತನುಷ್‌ ಕೋಟ್ಯಾನ್‌ ಪಾಂಗಾಳ ವಿಜಯಾ ಬ್ಯಾಂಕ್‌ ಬಳಿಯ ತುಳ್ಳಿಮಾರ್‌ ಹೌಸ್‌ನ ಕರುಣಾಕರ್‌ ಕೋಟ್ಯಾನ್‌ ಮತ್ತು ಹೆಜಮಾಡಿ ಕೋಡಿ ನಡಿಕುದ್ರು ಮಲ್ಲಿಕಾ ಕೋಟ್ಯಾನ್‌ ದಂಪತಿಯ ಪತ್ರನಾಗಿದ್ದಾರೆ. ಕಳೆದ 3 ವರ್ಷಗಳಿಂದ ಮುಂಬೈ ರಣಜಿ ತಂಡದ ಪರ ಆಡುತ್ತಿದ್ದಾರೆ. ಮುಂದೊಂದು ದಿನ ಟೀಮ್​ ಇಂಡಿಯಾಕ್ಕೂ ಕಾಲಿಟ್ಟರೆ ಅಚ್ಚರಿ ಪಡೆಬೇಕಿಲ್ಲ. ಮೊದಲ ಇನಿಂಗ್ಸ್​ನಲ್ಲಿಯೂ 3 ವಿಕೆಟ್​ ಕಿತ್ತಿದ್ದರು. ಒಟ್ಟಾರೆಯಾಗಿ ಫೈನಲ್​ನಲ್ಲಿ ಅವರು 7 ವಿಕೆಟ್​ ಕಿತ್ತ ಸಾಧನೆ ಮಾಡಿದರು. ವಿದಾಯ ಪಂದ್ಯವನ್ನಾಡಿದ ಧವಳ್ ಕುಲಕರ್ಣಿಗೆ ಸ್ಮರಣೀಯ ಗೆಲುವಿನ ವಿದಾಯ ದೊರಕಿತು.

Exit mobile version