Site icon Vistara News

ಬಿಡ್ಡಿಂಗ್​ ಹಣದಲ್ಲಿ ತಂದೆ-ತಾಯಿಗೆ ವಿಶೇಷ ಉಡುಗೊರೆ ನೀಡಲು ಮುಂದಾದ ಕರ್ನಾಟಕದ ​ ವೃಂದಾ ದಿನೇಶ್​

WPL 2024 Auction

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ 2024ರ(WPL 2024 Auction) ಮಿನಿ ಹರಾಜಿನಲ್ಲಿ 1.30 ಕೋಟಿಗೆ ಯು.ಪಿ ವಾರಿಯರ್ಸ್‌ ಪಾಲಾಗಿದ ಕರ್ನಾಟಕದ ಯುವ ಬ್ಯಾಟರ್‌ ವೃಂದಾ ದಿನೇಶ್(Vrinda Dinesh) ಅವರು ತಮಗೆ ಸಿಕ್ಕ ಈ ಮೊತ್ತದಲ್ಲಿ ತಂದೆ ಮತ್ತು ತಾಯಿಗೆ ಉಡುಗೊರೆಯೊಂದನ್ನು ನೀಡಲು ಬಯಸಿದ್ದಾರೆ.

ಬಿಡ್ಡಿಂಗ್​ ಬಳಿಕ ಮಾತನಾಡಿದ ವೃಂದಾ ದಿನೇಶ್, ‘ಇನ್ನೂ ರಾಷ್ಟ್ರೀಯ ತಂಡದ ಪರ ಆಡದ ನನಗೆ ಇಷ್ಟೊಂದು ಬೇಡಿಕೆಯ ಮೊತ್ತ ಸಿಗಬಹುದೆಂದು ಕನಸಿನಲ್ಲಿಯೂ ಎನಿಸಿಕೊಂಡಿರಲಿಲ್ಲ. ಆದರೆ ನಾನು ಯಾವುದಾದರು ಒಂದು ತಂಡಕ್ಕೆ ಸೇಲ್​ ಆಗಬಹುದೆಂದು ನಂಬಿಕೆ ಇತ್ತು. ನನಗೆ ಸಿಕ್ಕ ಈ ಮೊತ್ತದಲ್ಲಿ ನನ್ನ ಎಲ್ಲ ಏಳು- ಬೀಳಿನಲ್ಲಿ ಜತೆಗಿದ್ದ ನನ್ನ ತಂದೆ ಮತ್ತು ತಾಯಿಗೆ ಕಾರನ್ನು ಉಡುಗೊರೆಯಾಗಿ ನೀಡುತ್ತೇನೆ” ಎಂದು ವೃಂದಾ ದಿನೇಶ್ ಹೇಳಿದ್ದಾರೆ.

ತಾಯಿಗೆ ವಿಡಿಯೊ ಕಾಲ್​ ಮಾಡಿಲ್ಲ

ಬೆಂಗಳೂರಿನವರದಾದ ವೃಂದಾ ಅವರು ಬಿಡ್ಡಿಂಗ್​ನಲ್ಲಿ ಅತ್ಯಧಿಕ ಮೊತ್ತಕ್ಕೆ ಸೇಲ್​ ಆದ ವಿಚಾರವನ್ನು ತಮ್ಮ ತಾಯಿಗೆ ವಿಡಿಯೊ ಕಾಲ್​ ಮೂಲಕ ಹೇಳಲಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕಾರಣನ್ನೂ ಕೂಡ ಅವರು ತಿಳಿಸಿದ್ದಾರೆ. “ನಾನು ಬಿಡ್ಡಿಂಗ್​ನಲ್ಲಿ ಕೋಟಿ ಮೊತ್ತಕ್ಕೆ ಸೇಲ್ ಆದೆ ಎಂಬ ವಿಚಾರವನ್ನು ನನ್ನ ತಾಯಿಗೆ ಹೇಳುವಾಗ ಅವರಲ್ಲಿ ಭಾವನೆ ತಡೆಯಲಾಗದೇ ಕಣ್ಣುತುಂಬಿ ಬರಬಹುದು ಎಂದೆನಿಸಿತು. ಅವರಿಗೆ ಭಾವನೆ ತಡೆಯಲಾಗದು ಎಂಬ ಒಂದೇ ಕಾರಣದಿಂದ ವಿಡಿಯೊ ಕಾಲ್‌ ಮಾಡಲಿಲ್ಲ. ಕೇವಲ ಮೊಬೈಲ್ ಕರೆಯಷ್ಟೇ ಮಾಡಿದೆ” ಎಂದು ವೃಂದಾ ಹೇಳಿದರು. ಈ ಎಲ್ಲ ವಿಚಾರವನ್ನು ಅವರು ಯುಪಿ ವಾರಿಯರ್ಸ್ ಏರ್ಪಡಿಸಿದ್ದ ಸಂವಾದದಲ್ಲಿ ಹೇಳಿಕೊಂಡರು.

1000 ವ್ಯಾಟ್‌ ನಗುವಿನ ಮೌಲ್ಯ

‘ಎಲ್ಲ ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಸಾಕಷ್ಟು ತ್ಯಾಗ ಮಾಡಿರುತ್ತಾರೆ. ಮಕ್ಕಳು ಇದನ್ನು ಸಾಧಿಸಿದಾಗ ಅವರ ಮೊಗದಲ್ಲಿ ಮೂಡುವ 1000 ವ್ಯಾಟ್‌ ನಗುವಿನ ಮೌಲ್ಯ ನೋಡುವುದೇ ಒಂದು ಸೌಭಾಗ್ಯ. ನನ್ನ ಸಾಧನೆಯನ್ನು ಕಂಡು ನನ್ನ ಪೋಷಕರಿಗೆ ತುಂಬಾ ಖುಷಿಯಾಗಿದೆ. ಅವರು ಕಂಡಿದ್ದ ಕನಸಿನ ಕಾರನ್ನು ನಾನು ಉಡುಗೊರೆಯಾಗಿ ನೀಡುತ್ತೇನೆ. ಜತೆಗೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ತಂಡದ ಗೆಲುವಿಗಾಗಿ ಶ್ರಮ ಪಡುತ್ತೇನೆ” ಎಂದರು.

ವೃಂದಾ ದಿನೇಸ್​ ಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿ. ಸೀನಿಯರ್ ಮಹಿಳಾ ಏಕದಿನ ಟ್ರೋಫಿಯಲ್ಲಿ ಕರ್ನಾಟಕದ ತಂಡವು ಫೈನಲ್ ತಲುಪುವಲ್ಲಿ ವೃಂದಾ ಪ್ರಮುಖ ಪಾತ್ರ ವಹಿಸಿದ್ದರು. 11 ಇನ್ನಿಂಗ್ಸ್‌ ಗಳಲ್ಲಿ 47.70 ರ ಸರಾಸರಿಯಲ್ಲಿ 477 ರನ್ ಗಳಿಸಿದ್ದರು. ವೃಂದಾ ಇತ್ತೀಚೆಗಷ್ಟೇ ಭಾರತ ‘ಎ’ ತಂಡವನ್ನು ಪ್ರತಿನಿಧಿಸಿದ್ದರು. ಆರಂಭಿಕ ಹಂತದಲ್ಲಿ ಕನ್ನಡತಿ ವೃಂದಾ ದಿನೇಶ್ ಅವರು ಡಬ್ಲ್ಯುಪಿಎಲ್​ನಲ್ಲಿ ಅತ್ಯಧಿಕ ಮೊತ್ತಕ್ಕೆ ಸೇಲ್​ ಆದ ಅನ್​ಕ್ಯಾಪ್ಡ್​ ಪ್ಲಯರ್​ ಎನ್ನುವ ಕೀರ್ತಿಗೆ ಪಾತ್ರವಾದರೂ ಈ ಸಂತಸ ಹಚ್ಚು ಕಾಲ ಉಳಿಯಲಿಲ್ಲ. ಕಶ್ವಿ ಗೌತಮ್ ಅವರು ಬರೋಬ್ಬರಿ 2 ಕೋಟಿ ರೂ. ಪಡೆದು ಈ ದಾಖಲೆಯನ್ನು ತಮ್ಮ ಹಸರಿಗೆ ಬರೆದರು.

Exit mobile version