Site icon Vistara News

NADA Test: ಐದು ತಿಂಗಳಲ್ಲಿ ಮೂರು ಬಾರಿ ಉದ್ದೀಪನ ಟೆಸ್ಟ್​ಗೆ ಒಳಗಾದ ಟೀಮ್​ ಇಂಡಿಯಾ ಆಟಗಾರ

ravindra jadeja and virat kohli

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ ರವೀಂದ್ರ ಜಡೇಜಾ(Ravindra Jadeja) ಅವರನ್ನು ಕಳೆದ ಐದು ತಿಂಗಳಲ್ಲಿ ಮೂರು ಬಾರಿ ನಾಡಾ ಟೆಸ್ಟ್​ಗೆ(NADA Test) ಒಳಪಡಿಸಿದ ವಿಚಾರ ಬೆಳಕಿಗೆ ಬಂದಿದೆ. ಜತೆಗೆ 55 ಕ್ರಿಕೆಟರ್​ಗಳ (ಪುರುಷ ಮತ್ತು ಮಹಿಳೆ) 58 ಮಾದರಿ ಸಂಗ್ರಹಿಸಲಾಗಿದೆ ಎಂದು ರಾಷ್ಟ್ರೀಯ ಉದ್ದೀಪನ ನಿಗ್ರಹ ಸಂಸ್ಥೆ(National Anti-Doping Agency) ತಿಳಿಸಿದೆ.

ಕೊಹ್ಲಿಗೆ ಇಲ್ಲ ಈ ಟೆಸ್ಟ್​

ಬುಧವಾರ ಈ ವಿಚಾರವನ್ನು ನಾಡಾ ತಿಳಿಸಿದೆ. ಈ ವರ್ಷದ ಜನವರಿಯಿಂದ ಮೇ ತಿಂಗಳ ವರೆಗೆ ನಡೆಸಿರುವ ಪರೀಕ್ಷೆಗಳ ಅಂಕಿ ಅಂಶವನ್ನು ಅದು ಬಿಡುಗಡೆ ಮಾಡಿದೆ. ಆದರೆ, ಈ ಐದು ತಿಂಗಳ ಅವಧಿಯಲ್ಲಿ ರೋಹಿತ್‌ ಶರ್ಮ(Rohit Sharma) ಮತ್ತು ವಿರಾಟ್‌ ಕೊಹ್ಲಿ(Virat Kohli) ಅವರ ಮಾದರಿಯನ್ನು ಸಂಗ್ರಹಿಸಿಲ್ಲ ಎಂದು ನಾಡಾ ತಿಳಿಸಿದೆ. 2021 ಮತ್ತು 2022ರಲ್ಲಿ ರೋಹಿತ್‌ ಅವರನ್ನು ಮೂರು ಬಾರಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಕೊಹ್ಲಿಯನ್ನು ಈ ಅವಧಿಯಲ್ಲಿಯೂ ಟೆಸ್ಟ್​ಗೆ ಒಳಪಡಿಸಿರಲಿಲ್ಲ. ಇದಕ್ಕೆ ಸ್ಪಷ್ಟ ಕಾರಣವೇನೆಂಬುದು ಕೂಡ ತಿಳಿದಿಲ್ಲ. ಮೂಲಗಳ ಪ್ರಕಾರ ಫಿಟ್​ ಆಗಿರುವ ಕೊಹ್ಲಿ ಒಮ್ಮೆಯೂ ಗಾಯಗೊಂಡು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ. ಹೀಗಾಗಿ ಅವರಿಗೆ ಈ ಟೆಸ್ಟ್​ ಮಾಡಿಲ್ಲ ಎನ್ನಲಾಗಿದೆ. ಹೆಚ್ಚಾಗಿ ಗಾಯಗೊಂಡು ವೈದ್ಯಕೀಯ ಚಿಕಿತ್ಸೆ ಪಡೆದ ಕ್ರಿಕೆಟಿಗರ ಮಾದರಿ ಸಂಗ್ರಹಿಸಲಾಗಿದೆ.

ಜಡೇಜಾಗೆ ಹಲವು ಬಾರಿ ಗಾಯ

ರವೀಂದ್ರ ಜಡೇಜಾ ಅವರು ಕಳೆದ ವರ್ಷ ಹಲವು ಗಾಯಗಳಿಗೆ ತುತ್ತಾಗಿ ಶಸ್ತ್ರ ಚಿಕಿತ್ಸೆಯನ್ನು ಪಡೆದಿದ್ದರು. ಇದೇ ಕಾರಣಕ್ಕೆ ಈ ವರ್ಷ ರವೀಂದ್ರ ಜಡೇಜ ಅವರನ್ನು ಮೂರು ಬಾರಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರ ಜತೆಗೆ ಸೂರ್ಯಕುಮಾರ್‌, ಕೆ.ಎಲ್‌.ರಾಹುಲ್‌, ಇಶಾನ್‌ ಕಿಶನ್‌, ಮೊಹಮ್ಮದ್​ ಸಿರಾಜ್‌, ದೀಪಕ್‌ ಚಹರ್‌, ಮಯಾಂಕ್​ ಅಗರ್ವಾಲ್​, ರಾಹುಲ್‌ ತ್ರಿಪಾಠಿ, ಭುವನೇಶ್ವರ್​ ಕುಮಾರ್‌, ವೃದ್ಧಿಮಾನ್‌ ಸಹ, ದಿನೇಶ್‌ ಕಾರ್ತೀಕ್‌, ಯಶಸ್ವಿ ಜೈಸ್ವಾಲ್‌, ರಾಯುಡು, ಮನೀಷ್‌ ಪಾಂಡೆ ಸೇರಿ ಹಲವರ ಟೆಸ್ಟ್‌ ನಡೆಸಲಾಗಿದೆ. ಮಹಿಳಾ ಕ್ರಿಕೆಟ್​ ತಂಡದ ಕೆಲ ಆಟಗಾರ್ತಿಯರು ಕೂಡ ಒಳಗೊಂಡಿದ್ದಾರೆ.

ಇದನ್ನೂ ಓದಿ Viral Video: ಅಮೆರಿಕದ ಹಾದಿ ಬೀದಿಯಲ್ಲಿ ‘ಮುಕ್ಕಾಲ ಮುಕ್ಕಾಬುಲ್ಲಾ’ ಹಾಡಿಗೆ​ ಬಿಂದಾಸ್​ ಸ್ಟೆಪ್ಸ್ ಹಾಕಿದ ಜಡೇಜಾ

ಒಲಿಂಪಿಕ್​ ಪದಕ ವಿಜೇತರಿಗೂ ಟೆಸ್ಟ್​

ಕೇವಲ ಕ್ರಿಕೆಟ್​ ಆಟಗಾರರನ್ನು ಮಾತ್ರವಲ್ಲದೆ ದೇಶದ ವಿವಿಧ ಕ್ರೀಡಾ ಸಾಧಕರನ್ನು ಈ ಟೆಸ್ಟ್​ಗೆ ಒಳಪಡಿಸಲಾಗಿದೆ. ಟೋಕಿಯೊ ಒಲಿಂಪಿಕ್ಸ್​ ಬೆಳ್ಳಿ ಪದಕ ವಿಜೇತೆ ವೇಟ್‌ ಲಿಫ್ಟರ್‌ ಮೀರಾಬಾಯಿ ಚಾನು, ಬಾಕ್ಸರ್‌ ಲವ್ಲೀನಾ ಬೋರ್ಗಹೈನ್​, ಬ್ಯಾಡ್ಮಿಂಟನ್‌ ಆಟಗಾರರಾದ ಸೈನಾ ನೆಹ್ವಾಲ್‌, ಕಿದಂಬಿ ಶ್ರೀಕಾಂತ್‌, ಬ್ರಿಜ್​ ಭೂಷಣ್​ ವಿರುದ್ಧ ಪ್ರತಿಭಟನೆ ನಡೆಸಿದ್ದ ಬಜರಂಗ್‌ ಪೂನಿಯ ಮತ್ತು ವಿನೇಶ್‌ ಪೋಗಟ್‌, ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌, ಅನುಭವಿ ಗೋಲ್​ ಕೀಪರ್​ ಶ್ರೀಜೇಶ್‌, ಮಹಿಳಾ ಹಾಕಿ ತಂಡದ ನಾಯಕಿ ಸವಿತಾ ಪೂನಿಯಾ ಅವರ ಮಾದರಿ ಸಂಗ್ರಹಿಸಿ ಟೆಸ್ಟ್‌ ನಡೆಸಲಾಗಿದೆ. ವರದಿ ಎಲ್ಲ ಕ್ರೀಡಾಪಟುಗಳ ವರದಿ ಇನ್ನಷ್ಟೇ ಬರಬೇಕಿದೆ. ಒಂದೊಮ್ಮೆ ನಿಷೇಧಿತ ಉದ್ದೀಪನ ಮದ್ದು ಸೇವಿಸಿದ್ದು ಕಂಡುಬಂದರೆ ಅವರಿಗೆ ಕೆಲ ವರ್ಷಗಳ ನಿಷೇಧ ಶಿಕ್ಷೆ ವಿಧಿಸಲಾಗುತ್ತದೆ. ಈಗಾಗಲೇ ಹಲವು ಕ್ರೀಡಾಒಟುಗಳು ಈ ಶಿಕ್ಷೆಗೆ ಗುರಿಯಾಗಿದ್ದಾರೆ.

Exit mobile version