ನವ ದೆಹಲಿ: ಫ್ರೆಂಚ್ ಓಪನ್ ಚಾಂಪಿಯನ್ ರಫಾಲ್ ನಡಾಲ್ ಮುಂಬರಲಿರುವ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಆಡುವುದನ್ನು ಖಚಿತಪಡಿಸಿದ್ದಾರೆ. 2019ರ ಸೆಮಿಫೈನಲ್ ಪಂದ್ಯವನ್ನು ಆಡಿದ ಬಳಿಕ ಇದೇ ಮೊದಲ ಬಾರಿಗೆ ಅವರು ವಿಂಬಲ್ಡನ್‌ನಲ್ಲಿ ಆಡುತ್ತಿದ್ದಾರೆ. ಜೂನ್ 27ರಿಂದ ಇಂಗ್ಲೆಂಡ್‌ನಲ್ಲಿ ಈ ಚಾಂಪಿಯನ್‌ಶಿಪ್ ಆರಂಭವಾಗಲಿದೆ.
ಫ್ರೆಂಚ್ ಓಪನ್ ಚಾಂಪಿಯನ್‌ಶಿಪ್ ವೇಳೆ ರಫಾಲ್ ನಡಾಲ್ ಪಾದಕ್ಕೆ ಸಂಬಂಧಿಸಿದ ಚಿಕಿತ್ಸೆಗೆ ಒಳಪಡುವುದಾಗಿ ತಿಳಿಸಿದ್ದರು. ಹಾಗಾಗಿ ನಡಾಲ್ ವಿಂಬಲ್ಡನ್ ಆಡುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಈಗ ಚಿಕಿತ್ಸೆ ಯಶಸ್ವಿಯಾಗಿದ್ದು ಕಾಲಿಗೆ ಉಂಟಾದ ನೋವು ಕೂಡ ಕಡಿಮೆಯಾಗಿದೆ ಎಂದು ನಡಾಲ್ ತಿಳಿಸಿದ್ದಾರೆ.
ಚಿಕಿತ್ಸೆಯನ್ನು ಪಡೆದ ಬಳಿಕ ನಡಾಲ್ ಪ್ರ್ಯಾಕ್ಟೀಸ್ ಆರಂಭಿಸಿದ್ದರು. ಕಳೆದ ಎರಡು ದಿನಗಳಿಂದ ನಡಾಲ್ ತೀವ್ರವಾದ ಅಭ್ಯಾಸ ಹಾಗೂ ಕಠಿಣ ಪರಿಶ್ರಮ ಪಡುತ್ತಿರುವುದು ಕಂಡುಬಂದಿದ್ದು, ನಡಾಲ್ ಮುಂದಿನ ಹೆಜ್ಜೆ ವಿಂಬಲ್ಡನ್ ಚಾಂಪಿಯನ್‌ಶಿಪ್ ಮೇಲೆ ಎಂಬುದು ಖಚಿತವಾಗಿದೆ.
ವಿಂಬಲ್ಡನ್ ಆಡುವ ಬಗ್ಗೆ ಖಚಿತಪಡಿಸಿದ ನಡಾಲ್ “ನಾನು ವಿಂಬಲ್‌ಡನ್ ಆಡುವ ನಿಟ್ಟಿನಲ್ಲಿ ಸೋಮವಾರ ಲಂಡನ್‌ಗೆ ತೆರಳುತ್ತಿದ್ದೇನೆ. 3 ವರ್ಷಗಳ ಬಳಿಕ ಈ ಮೈದಾನದಲ್ಲಿ ಆಡುತ್ತಿರುವುದು. ಹಾಗಾಗಿ ನಾನು ಕಠಿಣ ಪರಿಶ್ರಮ ಹಾಕುತ್ತಿದ್ದೇನೆʼʼ ಎಂದು ತಿಳಿಸಿದ್ದಾರೆ.
ಈ ಹಿಂದೆ ನಡಾಲ್ 2008 ಹಾಗೂ 2010ರಲ್ಲಿ ಚಾಂಪಿಯನ್‌ಶಿಪ್ ಗೆದ್ದಿರುವ ದಾಖಲೆ ಇದೆ. ಈಗಾಗಲೆ ಆಸ್ಟ್ರೇಲಿಯಾ ಓಪನ್ ಹಾಗೂ ಫ್ರಂಚ್ ಓಪನ್ ಗೆದ್ದು ಚಾಂಪಿಯನ್ ಆಗಿರುವ ನಡಾಲ್ ವಿಂಬಲ್‌ಡನ್ ಗೆಲ್ಲುವ ಜೋಶ್‌ನಲ್ಲಿದ್ದಾರೆ.
ಇದನ್ನೂ ಓದಿ: French Open 2022 | ಕ್ಯಾಸ್ಪರ್ ನಡು ಮುರಿದು 14ನೇ ಬಾರಿ ಚಾಂಪಿಯನ್ ಆದ ನಡಾಲ್!