Site icon Vistara News

Namibia vs Karnataka: ದೊಡ್ಡ ಮೊತ್ತ ಪೇರಿಸಿಯೂ ಸೋಲು ಕಂಡ ಕರ್ನಾಟಕ

Michael van Lingen

ವಿಂಡ್‌ಹೋಕ್‌ (ನಮೀಬಿಯಾ): ನಮೀಬಿಯಾ ಎದುರಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಕರ್ನಾಟಕ ತಂಡ ಸೋಲು ಕಂಡಿದೆ. 360 ರನ್‌ ಪೇರಿಸಿಯೂ ಇದನ್ನು ಉಳಿಸಿಕೊಳ್ಳಲಾಗದೇ 5 ವಿಕೆಟ್‌ಗಳ ಸೋಲಿಗೆ ತುತ್ತಾಗಿದೆ. ಗೆಲುವು ಸಾಧಿಸಿದ ನಮೀಬಿಯಾ 5 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಇತ್ತಂಡಗಳ ನಡುವಿನ ಮೂರನೇ ಪಂದ್ಯ 3ನೇ ಬುಧವಾರ ನಡೆಯಲಿದೆ.

ಮೊದಲು ಬ್ಯಾಟಿಂಗ್​ ನಡೆಸಿದ ಕರ್ನಾಟಕ ಪರ ಎಲ್‌.ಆರ್‌. ಚೇತನ್‌ ಮತ್ತು ನಿಕಿನ್‌ ಜೋಸ್‌ ಆಕರ್ಷಕ ಶತಕ ಬಾರಿಸಿದ ಪರಿಣಾಮ ಕರ್ನಾಟಕ ಕೇವಲ 4 ವಿಕೆಟ್‌ ನಷ್ಟಕ್ಕೆ 360 ರನ್‌ ಬಾರಿಸಿತು. ದೊಡ್ಡ ಮೊತ್ತವನ್ನು ದಿಟ್ಟ ರೀತಿಯಲ್ಲೇ ಬೆನ್ನಟ್ಟಿದ ನಮೀಬಿಯಾ ಕೇವಲ ಒಂದು ಎಸೆತ ಬಾಕಿ ಇರುವಂತೆಯೇ 5 ವಿಕೆಟ್‌ ಕಳೆದುಕೊಂಡು 362 ರನ್‌ ಬಾರಿಸಿ ಅಮೋಘ ಗೆಲುವು ದಾಖಲಿಸಿತು. ಮೊದಲ ಪಂದ್ಯವನ್ನು ಕರ್ನಾಟಕ 9 ವಿಕೆಟ್‌ಗಳಿಂದ ಗೆದ್ದಿತ್ತು.

ಇನಿಂಗ್ಸ್​ ಆರಂಭಿಸಿದ ಕರ್ನಾಟಕ ನಾಯಕ ರವಿಕುಮಾರ್‌ ಸಮರ್ಥ್(5) ಅವರನ್ನು ಆರಂಭದಲ್ಲೇ ಕಳೆದುಕೊಂಡು ಆಘಾತ ಎದುರಿಸಿತು. ಆದರೆ ಬಳಿಕ ಜತೆಯಾದ ಎಲ್‌.ಆರ್‌. ಚೇತನ್‌ ಮತ್ತು ನಿಕಿನ್‌ ಜೋಸ್‌ ಸೇರಿಕೊಂಡು ದ್ವಿತೀಯ ವಿಕೆಟಿಗೆ 258 ರನ್‌ ಜತೆಯಾಟ ನಡೆಸಿ ತಂಡಕ್ಕೆ ಉತ್ತಮ ಅಡಿಪಾಯ ನಿರ್ಮಿಸಿದರು. .ಉಭಯ ಆಟಗಾರರಿಬ್ಬರು ಶತಕ ಬಾರಿಸಿ ಸಂಭ್ರಮಿಸಿದರು. ಚೇತನ್‌ 147 ಎಸೆತಗಳಿಂದ 169 ರನ್‌ ಸಿಡಿಸಿದರೆ (13 ಬೌಂಡರಿ, 8 ಸಿಕ್ಸರ್‌), ನಿಕಿನ್‌ ಜೋಸ್‌ 109 ಎಸೆತ ನಿಭಾಯಿಸಿ 103 ರನ್‌ ಹೊಡೆದರು (5 ಬೌಂಡರಿ, 2 ಸಿಕ್ಸರ್‌).

ಅಂತಿಮ ಹಂತದಲ್ಲಿ ಕೆ. ಸಿದ್ಧಾರ್ಥ್ ಅವರು ಬಿರುಸಿನ ಬ್ಯಾಟಿಂಗ್​ ನಡೆಸಿದರು. ಕೇವಲ 27 ಎಸೆತಗಳಿಂದ ಅಜೇಯ 59 ರನ್‌ ಬಾರಿಸಿದರು. ಈ ವೇಳೆ 6 ಸಿಕ್ಸರ್‌ ಹಾಗೂ ಒಂದು ಬೌಂಡರಿ ಸಿಡಿಯಿತು.

ಚೇಸಿಂಗ್​ ವೇಳೆ ಸ್ಟೀಫ‌ನ್‌ ಬಾರ್ಡ್‌ (57) ಮತ್ತು ನಿಕೋಲಾಸ್‌ ಡೇವಿನ್‌ (70) ಮೊದಲ ವಿಕೆಟಿಗೆ 119 ರನ್‌ ಪೇರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ದ್ವಿತೀಯ ವಿಕೆಟ್​ಗೆ ಆಡಲಿಳಿದ ಮೈಕಲ್‌ ವಾನ್‌ ಲಿಂಜೆನ್‌ ಕರ್ನಾಟಕ ಬೌಲರ್​ಗಳ ಬೆವರಿಲಿಸಿ ಶತಕ ಬಾರಿಸಿ ಮಿಂಚಿದರು. 85 ಎಸೆತ ಎದುರಿಸಿದ ಅವರು 7 ಫೋರ್‌, 5 ಸಿಕ್ಸರ್‌ ನೆರವಿನಿಂದ 104 ರನ್‌ ಹೊಡೆದರು. ನಾಯಕ ಗೆರಾರ್ಡ್‌ ಎರಾಸ್ಮಸ್‌ 91 ರನ್‌ ಬಾರಿಸಿದರು (67 ಎಸೆತ, 8 ಬೌಂಡರಿ, 2 ಸಿಕ್ಸರ್‌).

ಇದನ್ನೂ ಓದಿ IPL 2023 : ಮಾಲ್ಡೀವ್ಸ್​​ನಲ್ಲಿ ಶರ್ಟ್​ ಬಿಚ್ಚಿ ಸಿಕ್ಸ್​​ ಪ್ಯಾಕ್​ ತೋರಿಸಿದ ಐಪಿಎಲ್​ ಸ್ಟಾರ್ ರಿಂಕು ಸಿಂಗ್

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-4 ವಿಕೆಟಿಗೆ 360 (ಚೇತನ್‌ 169, ನಿಕಿನ್‌ ಜೋಸ್‌ 103, ಸಿದ್ಧಾರ್ಥ್ 59). ನಮೀಬಿಯಾ-49.5 ಓವರ್‌ಗಳಲ್ಲಿ 5 ವಿಕೆಟಿಗೆ 362 (ವಾನ್‌ ಲಿಂಜೆನ್‌ 104, ಎರಾಸ್ಮಸ್‌ 91, ಡೇವಿನ್‌ 71, ಬಾರ್ಡ್‌ 57, ಸಮರ್ಥ್ 32ಕ್ಕೆ 1, ಶುಭಾಂಗ್‌ ಹೆಗ್ಡೆ 61ಕ್ಕೆ 1).

Exit mobile version