ವಿಂಡ್‌ಹೋಕ್ (ನಮೀಬಿಯಾ): ಆತಿಥೇಯ ನಮೀಬಿಯಾ(Namibia vs Karnataka) ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಕರ್ನಾಟಕ ತಂಡ ಸೋಲು ಕಂಡಿದೆ. ಆದರೆ 3-2 ಅಂತರದಿಂದ ಸರಣಿ ಗೆಲುವು ಕಂಡಿದೆ. 5ನೇ ಹಾಗೂ ಅಂತಿಮ ಪಂದ್ಯವನ್ನು ಆರ್. ಸಮರ್ಥ್ ಪಡೆ 5 ವಿಕೆಟ್‌ಗಳಿಂದ ಕಳೆದುಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ 48.1 ಓವರ್‌ಗಳಲ್ಲಿ 231 ರನ್ ಗಳಿಸಿತು. ಗುರಿ ಬೆನ್ನಟ್ಟಿದ ನಮೀಬಿಯಾ 39.1 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 236 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಚೇಸಿಂಗ್ ವೇಳೆ ಸ್ಟೀಫನ್ ಬಾರ್ಡ್ (59), ಮೈಕಲ್ ವಾನ್ ಲಿಂಜೆನ್ (56) ಅರ್ಧ ಶತಕ ಬಾರಿಸುವ ಜತೆಗೆ 2ನೇ ವಿಕೆಟಿಗೆ 107 ರನ್ ಒಟ್ಟುಗೂಡಿಸಿ ಗೆಲುವನ್ನು ಖಾತ್ರಿಗೊಳಿಸಿದರು. ನಾಯಕ ಗೆರಾರ್ಡ್ ಎರಾಸ್ಮಸ್ ಅಜೇಯ 59 ರನ್ ಬಾರಿಸಿದರು. ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಕರ್ನಾಟಕ ಪರ ನಿಕಿನ್ ಜೋಸ್ 61 ರನ್ ಬಾರಿಸಿ ಗಮನ ಸೆಳೆದರು. ಅವರಿಲ್ಲಿ 6ನೇ ಕ್ರಮಾಂಕದಲ್ಲಿ ಆಡಲಿಳಿದಿದ್ದರು. ಕಿಶನ್ ಬೆಡಾರೆ 43, ಅನೀಶ್ವರ್ ಗೌತಮ್ 29, ಕೀಪರ್ ಕೃತಿಕ್ ಕೃಷ್ಣ 25, ಎಲ್.ಆರ್. ಚೇತನ್ 22 ರನ್ ಹೊಡೆದರು.
ಇದನ್ನೂ ಓದಿ WTC Final 2023 : ಸೋಲಿನ ಬಳಿಕ ರಹಸ್ಯ ಸಂದೇಶ ಪೋಸ್ಟ್ ಮಾಡಿದ ವಿರಾಟ್ ಕೊಹ್ಲಿ!
ಅತ್ಯಂತ ರೋಚಕವಾಗಿ ನಡೆದಿದ್ದ ಈ ಸರಣಿಯಲ್ಲಿ ಮೊದಲ ಪಂದ್ಯವನ್ನು ಕರ್ನಾಟಕ 9 ವಿಕೆಟ್‌ಗಳಿಂದ ಜಯಿಸಿತ್ತು. ಬಳಿಕ 360 ರನ್ ಪೇರಿಸಿಯೂ 5 ವಿಕೆಟ್ ಸೋಲನುಭವಿಸಿತು. 3ನೇ ಮತ್ತು 4ನೇ ಪಂದ್ಯವನ್ನು ಪಂದ್ಯದಲ್ಲಿ ಕರ್ನಾಟಕ ಗೆದ್ದು ಸರಣಿ ವಶಪಡಿಸಿಕೊಂಡಿತು. ಅಂತಿಮ ಪಂದ್ಯದಲ್ಲಿ ಎಡವಿತು.