ಲಾಹೋರ್ : ಏಷ್ಯಾ ಕಪ್‌ನಲ್ಲಿ ಭಾರತ ತಂಡವನ್ನು ಕಾಡಿದ್ದ ಪಾಕಿಸ್ತಾನ ತಂಡದ ವೇಗದ ಬೌಲರ್ ನಾಸಿಮ್ ಶಾ ಏಕಾಏಕಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಎದೆನೋವು ಹಾಗೂ ಜ್ವರ ಕಾಣಿಸಿಕೊಂಡ ಕಾರಣ ಅವರನ್ನು ಮಂಗಳವಾರ ರಾತ್ರಿಯೇ ತಂಡದ ಮ್ಯಾಜೇನ್ಮೆಂಟ್ ಆಸ್ಪತ್ರೆಗೆ ದಾಖಲು ಮಾಡಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿಯ ಐದನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಆಡಿ ಐದನೇ ಪಂದ್ಯಕ್ಕೆ ಮೊದಲು ಗಾಯಗೊಂಡಿರುವ ಕಾರಣ ತಂಡಕ್ಕೆ ಹಿನ್ನಡೆಯಾಗಿದೆ.
ಐದನೇ ಪಂದ್ಯಕ್ಕಾಗಿ ತಂಡ ಲಾಹೋರ್‌ಗೆ ಬಂದಿಳಿದಿತ್ತು. ಏತನ್ಮಧ್ಯೆ, ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಅಲ್ಲದೆ ವಿಪರೀತ ಜ್ವರವೂ ಬಂತು. ಹೀಗಾಗಿ ರಾತ್ರೋರಾತ್ರಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ದಾಖಲಾಗಿರುವ ಕಾರಣ ಸರಣಿಯ ಉಳಿದ ಮೂರು ಪಂದ್ಯಗಳಿಗೆ ಅವರು ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ.
“ವೈರಲ್ ಸೋಂಕಿನಿಂದಾಗಿ ನಾಸಿಮ್ ಶಾ ಅವರು ಅಸ್ವಸ್ಥಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಾಗಿದೆ. ಅವರೀಗ ಗುಣಮುಖರಾಗುತ್ತಿದ್ದಾರೆ. ಅವರು ಬುಧವಾರದ ಪಂದ್ಯದಲ್ಲಿ ಪಾಲ್ಗೊಳ್ಳುವುದಿಲ್ಲ. ಸರಣಿಯ ಉಳಿದ ಪಂದ್ಯಗಳಲ್ಲಿ ಪಾಲ್ಗೊಳ್ಳುವರೇ ಎಂಬುದನ್ನು ವೈದ್ಯಕೀಯ ತಂಡ ನಿರ್ಧರಿಸಲಿದೆ,” ಎಂದು ಪಿಸಿಬಿ ಪ್ರಕಟಣೆ ಹೊರಡಿಸಿದೆ.
ಮೂಲಗಳ ಪ್ರಕಾರ ನಾಸಿಮ್ ಅವರಿಗೆ ಡೆಂಗೆ ಜ್ವರ ಬಂದಿದೆ. ಪಾಕಿಸ್ತಾನದಲ್ಲಿ ಡೆಂಗೆ ಜ್ವರದ ಪ್ರಮಾಣ ಹೆಚ್ಚಾಗಿದ್ದು, ಕ್ರಿಕೆಟಿಗನಿಗೂ ಅದೇ ಸೋಂಕು ತಗುಲಿದೆ ಎನ್ನಲಾಗಿದೆ.
ಇದನ್ನೂ ಓದಿ | Asia Cup | ಭಾರತ ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್‌ಗೆ ಕೊರೊನಾ ಸೋಂಕು