Site icon Vistara News

National Wrestling Championships: ಚಿನ್ನ ಗೆದ್ದ ವಿನೇಶ್​ ಫೋಗಟ್‌

Vinesh Phogat

ಮುಂಬಯಿ: ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿಯಾದ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಮತ್ತು ಅರ್ಜುನ್ ಪ್ರಶಸ್ತಿಯನ್ನು ಹಿಂದಿರುಗಿಸಿ ಭಾರತೀಯ ಕುಸ್ತಿ ಒಕ್ಕೂಟದ ವಿರುದ್ಧ ತೊಡೆತಟ್ಟಿದ್ದ ಒಲಿಂಪಿಯನ್​ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) ಸೀನಿಯರ್‌ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನ 55 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಭಾನುವಾರ ನಡೆದ ಸೀನಿಯರ್‌ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನ 55 ಕೆಜಿ ವಿಭಾಗದಲ್ಲಿ ವಿನೇಶ್​ ಅವರು ಮಧ್ಯಪ್ರದೇಶದ ಜ್ಯೋತಿ ಅವರನ್ನು 4-0 ಅಂತರದಿಂದ ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ರೈಲ್ವೆ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ (ಆರ್‌ಎಸ್‌ಪಿಬಿ) ತಂಡದ ಪರ 29 ವರ್ಷದ ವಿನೇಶ್​ ಕಣಕ್ಕಿಳಿದಿದ್ದರು. ಭಾರತ ಒಲಿಂಪಿಕ್ಸ್ ಸಂಸ್ಥೆ (ಐಒಎ) ರಚಿಸಿರುವ ತಾತ್ಕಾಲಿಕ ಸಮಿತಿಯು ಈ ಚಾಂಪಿಯನ್‌ಷಿಪ್ ಆಯೋಜಿಸಿದೆ.

ದಿನದ ಮತ್ತೊಂದು ಸ್ಪರ್ಧೆಯಲ್ಲಿ 2021ರ ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ ಪದಕ ವಿಜೇತರಾದ ಹರಿಯಾಣದ ಅಂಶು ಮಲಿಕ್ 59 ಕೆಜಿ ವಿಭಾಗದಲ್ಲಿ 2020ರ ಏಷ್ಯನ್ ಚಾಂಪಿಯನ್‌ಷಿಪ್‌ ಚಿನ್ನದ ಪದಕ ವಿಜೇತೆ ಸರಿತಾ ಮೋರ್ (ರೈಲ್ವೆ) ಅವರನ್ನು 8-3 ಅಂತರದಿಂದ ಮಣಿಸಿ ಪ್ರಾಬಲ್ಯ ಮೆರೆದರು. ಸದ್ಯ ಹರಿಯಾಣದ ಮಹಿಳಾ ತಂಡ 189 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ಕೊನೆ ದಿನವಾದ ಸೋಮವಾರ ಪುರುಷರ ಫ್ರಿ ಸ್ಟೈಲ್ ಸ್ಪರ್ಧೆಗಳು ನಡೆಯಲಿವೆ.

ಇದನ್ನೂ ಓದಿ ಕರ್ತವ್ಯ ಪಥದ ಪಾದಚಾರಿ ಮಾರ್ಗದಲ್ಲಿ ಖೇಲ್ ರತ್ನ, ಅರ್ಜುನ ಪ್ರಶಸ್ತಿ ತೊರೆದ ವಿನೇಶ್ ಫೋಗಟ್

ಇತ್ತೀಚೆಗೆ ವಿನೇಶ್ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ನನ್ನನ್ನು ಈ ಪರಿಸ್ಥಿತಿಗೆ ತಂದ ಸರ್ವಶಕ್ತನಿಗೆ ತುಂಬಾ ಧನ್ಯವಾದಗಳು ಎಂದು ಅವರು ಟ್ವೀಟ್‌ ಮಾಡಿ ತಾವು ಪಡೆದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ(Khel Ratna) ಮತ್ತು ಅರ್ಜುನ್(Arjuna ) ಪ್ರಶಸ್ತಿಯನ್ನು ಹಿಂದಿರುಗಿಸಲಿದ್ದೇನೆ ಎಂಬ ಘೋಷಣೆ ಮಾಡಿದ್ದರು. ಇದಾದ ಬಳಿಕ ಈ ಪ್ರಶಸ್ತಿಗಳನ್ನು ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದ(Kartavya Path) ಪಾದಚಾರಿ ಮಾರ್ಗದಲ್ಲಿಟ್ಟು ತೊರೆದಿದ್ದರು. ಬ್ರಿಜ್​ ಭೂಷಣ್​ ಅವರ ಆಪ್ತ ಸಂಜಯ್​ ಸಿಂಗ್​ ಅವರು ಭಾರತ ಕುಸ್ತಿ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದುದನ್ನು ಖಂಡಿಸಿ ಅವರು ಈ ರೀತಿ ಮಾಡಿದ್ದರು.

ಆರು ಬಾರಿ ಬಿಜೆಪಿ ಸಂಸದರಾಗಿದ್ದ ಬ್ರಿಜ್ ಭೂಷಣ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಾಕ್ಷಿ ಮಲಿಕ್ ಸೇರಿದಂತೆ ದೇಶದ ಉನ್ನತ ಕುಸ್ತಿಪಟುಗಳು ಆರೋಪಿಸಿದ ನಂತರ ಅವರು ರಾಜೀನಾಮೆ ನೀಡಬೇಕಾಯಿತು. ಒಲಿಂಪಿಕ್ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಸೇರಿದಂತೆ ಅಗ್ರ ಕುಸ್ತಿಪಟುಗಳು ಕಳೆದ ವರ್ಷ ಜನವರಿಯಲ್ಲಿ ಬಿಜೆಪಿ ಸಂಸದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬೀದಿಗಿಳಿದಿದ್ದರು. ಈ ಪ್ರತಿಭಟನೆಯ ಪ್ರಮುಖ ರುವಾರಿ ಕೂಡ ವಿನೇಶ್​ ಅವರೇ ಆಗಿದ್ದರು.

Exit mobile version