ನವ ದೆಹಲಿ: ಭಾರತ ತಂಡ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಫಘಾನಿಸ್ತಾನ ವಿರುದ್ಧದ ಪಂದ್ಯದ ವೇಳೆ ಕ್ರಿಕೆಟ್ ಕ್ಷೇತ್ರಕ್ಕೆ ಮಾದರಿಯಾಗಬಲ್ಲ ಕೆಲಸವನ್ನು ಮಾಡಿದ್ದಾರೆ. ಇದು ಕ್ರೀಡಾಸ್ಫೂರ್ತಿ ಹಾಗೂ ಯುವ ಕ್ರಿಕೆಟಿಗರಿಗೆ ಆದರ್ಶ ಪ್ರಾಯ ಕೂಡ. ಅದೇನೆಂದರೆ ತಮ್ಮನ್ನು ಹಲವು ಬಾರಿ ಟೀಕೆಗೆ ಗುರಿ ಮಾಡಿದ್ದ ಹಾಗೂ ಮೈದಾನದಲ್ಲೇ ಅಪಮಾನ ಮಾಡಿದ್ದ ಅಫಘಾನಿಸ್ತಾನ ತಂಡದ ವೇಗದ ಬೌಲರ್ ನವಿನ್ ಉಲ್ ಹಕ್ (Virat vs Navin) ಜತೆ ಕೈಕುಲುಕಿ ಮಾತನಾಡಿ ಅಭಿನಂದನೆ ಸಲ್ಲಿಸಿರುವುದು. ಈ ಮೂಲಕ ಅವರು ತಮ್ಮ ನಡುವಿನ ಯಾವುದೇ ವೈರತ್ವ ಇಲ್ಲ ಹಾಗೂ ಇಂಥ ಸಣ್ಣ ಸಂಗತಿಗಳನ್ನು ಮುಂದುವರಿಸುವ ವ್ಯಕ್ತಿ ನಾನಲ್ಲ ಎಂಬುದನ್ನು ಕೊಹ್ಲಿ ಸಾಬೀತುಪಡಿಸಿದ್ದಾರೆ.
Virat & Navin ul HaQ 🤝 #INDvsAFG pic.twitter.com/xC6AXGfd4R
— HARDIK THACKER (@iamHardik42) October 11, 2023
ಭಾರತ ಹಾಗೂ ಅಫಘಾನಿಸ್ತಾನ ನಡುವಿನ ಪಂದ್ಯವನ್ನು ಕೊಹ್ಲಿ ಹಾಗೂ ನವಿನ್ ಉಲ್ ಹಕ್ ನಡುವಿನ ಹಣಾಹಣಿಯೆಂದೇ ಬಿಂಬಿಸಲಾಗಿತ್ತು . ಅದಕ್ಕೆ ಪೂರಕವಾಗಿ ಮೈದಾನದಲ್ಲಿ ಅಭಿಮಾನಿಗಳು ನವಿನ್ ಉಲ್ ಹಕ್ ಅವರನ್ನು ಸಿಕ್ಕಾಪಟ್ಟೆ ಪೀಡಿಸಿದ್ದರು. ಆದರೆ, ಕೊಹ್ಲಿ ಮತ್ತು ಹಕ್ ಮೈದಾನದಲ್ಲೇ ರಾಜಿ ಮಾಡಿಕೊಂಡು ತಮ್ಮ ನಡುವೆ ಉಂಟಾಗಿರುವ ಮನಸ್ತಾಪವನ್ನು ಮುಗಿಸಿದ್ದಾರೆ.
ಈ ಸುದ್ದಿಗಳನ್ನೂ ಓದಿ:
Virat kohli : ವಿರಾಟ್ ಕೊಹ್ಲಿಯನ್ನು ಮೂರ್ಖ ಎಂದು ಕರೆದ ನವಿನ್ ಉಲ್ ಹಕ್!
ವಿಶ್ವಕಪ್ನಲ್ಲೂ ನವೀನ್ ಉಲ್ ಹಕ್ ಬೆಂಬಿಡದ ವಿರಾಟ್ ಕೊಹ್ಲಿ ಅಭಿಮಾನಿಗಳು
Virat Kohli : ಅಭ್ಯಾಸವೇ ಇಲ್ಲದೆ ವಿಶ್ವ ಕಪ್ ಪಂದ್ಯ ಆಡಲಿದ್ದಾರೆ ವಿರಾಟ್ ಕೊಹ್ಲಿ!
ವಿರಾಟ್ ಕೊಹ್ಲಿ ಬ್ಯಾಟಿಂಗ್ಗೆ ಬಂದ ವೇಳೆ ಅಫಫಾನಿಸ್ತಾನ ತಂಡ ನಾಯಕ ಹಶ್ಮತುಲ್ಲಾ ಅವರು ನವಿನ್ ಅವರಿಂದಲೇ ಬೌಲಿಂಗ್ ಮಾಡಿಸಿದ್ದರು. ಈ ಮೂಲಕ ಪರಿಸ್ಥಿತಿಯ ಲಾಭವನ್ನು ಪಡೆಯುವ ಯತ್ನವನ್ನು ಮಾಡಿದ್ದರು. ಆದರೆ ಕೊಹ್ಲಿ ಯಾವುದೇ ಆತುರದ ನಿರ್ಧಾರ ತೋರದೆ ನವಿನ್ ಅವರ ಎಸೆತವನ್ನು ಜಾಣತನದಿಂದ ಎದುರಿಸಿದ್ದರು. ಸೇಡು ತೀರಿಸಿಕೊಳ್ಳಲು ಹೋದರೆ ವಿಕೆಟ್ ಕಳೆದುಕೊಳ್ಳಬಹುದು ಎಂಬ ಮುನ್ನೆಚ್ಚರಿಕೆಯನ್ನು ಅವರು ವಹಿಸಿದ್ದರು. ಏತನ್ಮಧ್ಯೆ ಅವರು ವಿನ್ ಅವರ ಕೈ ಕುಲುಕಿ ಅಭಿನಂದಿಸಿದ್ದಾರೆ.
ಅಭಿಮಾನಿಗಳಿಗೆ ಬೇಸರ, ಸಂತೋಷ
ಕೊಹ್ಲಿ ಹಾಗೂ ನವಿನ್ ಕೈ ಕುಲುಕಿ ಮಾತನಾಡುವ ವಿಡಿಯೊ ಮೈದಾನವನ್ನೇ ಸ್ತಬ್ಧಗೊಳಿಸಿತು. ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಬೇಸರ ಮೂಡಿತು. ಆದರೆ, ಕೊಹ್ಲಿಯ ಅಪ್ಪಟ ಅಭಿಮಾನಿಗಳು ಆಟಗಾರನ ಹಿರಿತನ ಹಾಗೂ ಕ್ರೀಡಾಸ್ಫೂರ್ತಿಯನ್ನು ಕೊಂಡಾಡಿದರು. ಅಂತೆಯೇ ಅವರಿಬ್ಬರು ಕೈ ಕುಲುಕುವ ದೃಶ್ಯದ ವಿಡಿಯೊಗಳು ಲಕ್ಷಾಂತರ ಲೈಕ್ಗಳನ್ನು ಪಡೆದುಕೊಂಡಿವೆ.
ಹಿರಿಯ ಕ್ರಿಕೆಟಿಗರು ಕೂಡ ಕೊಹ್ಲಿಯ ನಡೆಯನ್ನು ಮಾದರಿ ಎಂದಿದ್ದಾರೆ. ಮೈದಾನದಲ್ಲಿ ನಡೆದ ಘಟನೆಗಳನ್ನು ಅಲ್ಲೇ ಮುಗಿಸುವುದು ಕ್ರೀಡಾಪಟುವೊಬ್ಬನ ದೊಡ್ಡ ಗುಣ ಎಂದು ಹೊಗಳಿದ್ದಾರೆ.
ಐಪಿಎಲ್ ವೇಳೆ ನಡೆದ ಗಲಾಟೆ
ಇದೇ ವರ್ಷ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್-ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ಮೈದಾನದಲ್ಲೇ ಜಗಳವಾಡಿಕೊಂಡಿದ್ದರು. ಇದಾಗ ಬಳಿಕವೂ ವಿವಾದ ಅಷ್ಟಕ್ಕೆ ನಿಂತಿರಲಿಲ್ಲ.ಕೊಹ್ಲಿ ಮತ್ತು ನವೀನ್ ನಡುವಿನ ಜಟಾಪಟಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಭಾರಿ ಚರ್ಚೆಗೆ ವೇದಿಕೆ ಕಲ್ಪಿಸಿತ್ತು. ಪರ ವಿರೋಧಗಳು ವ್ಯಕ್ತವಾಗಿದ್ದವು. ಇಂದು ಈ ವಿರಾಟ್ ಮತ್ತು ನವೀನ್ ಉಲ್ ಹಕ್ ಮುಖಾಮುಖಿ ಎಲ್ಲವನ್ನೂ ಸುಖಾಂತ್ಯಗೊಳಿಸಿದರು.
2023ರ ಮೇ 1 ರಂದು ಲಕ್ನೋದಲ್ಲಿ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ವಾಗ್ವಾದ ನಡೆಸಿದ್ದರು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ 18 ರನ್‌ಗಳ ಜಯ ಸಾಧಿಸಿತ್ತು. ಪಂದ್ಯದ ನಂತರ ವಿರಾಟ್ ಕೊಹ್ಲಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ನಡುವೆಯೂ ವಾಗ್ವಾದ ನಡೆದಿತ್ತು. ಆ ಬಳಿಕ ಗಂಭೀರ್ ಎಲ್ಲೇ ಕಾಣಿಸಿಕೊಂಡರು ಕೊಹ್ಲಿ ಅಭಿಮಾನಿಗಳ ಕೊಹ್ಲಿ ಕೊಹ್ಲಿ ಎಂದು ಕೂಗುವ ಮೂಲಕ ಗಂಭೀರ್ ಅವರನ್ನು ಕೆಣಕುತ್ತಿದ್ದಾರೆ.