ನವ ದೆಹಲಿ: ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಈಗ ಮತ್ತೊಂದು ಹೊಸ ದಾಖಲೆ ಬರೆದಿದ್ದಾರೆ. 2022ರ ಪಾವೊ ನುರ್ಮಿ ಗೇಮ್ಸ್‌ನಲ್ಲಿ 89.30 ಮೀಟರ್ ದೂರ ಜಾವೆಲಿನ್ ಎಸೆದು ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ. ಇದು ಭಾರತದ ಮಟ್ಟಿಗೆ ರಾಷ್ಟ್ರೀಯ ದಾಖಲೆಯಾಗಿದೆ. ಫಿನ್‌ಲೆಂಡ್‌ನ ತುರ್ಕುವಿನಲ್ಲಿ ನಡೆದ ಕಾಂಟಿನೆಂಟಲ್ ಟೂರ್ ಇವೆಂಟ್‌ನಲ್ಲಿ ನೀರಜ್ ಈ ದಾಖಲೆ ಬರೆದಿದ್ದಾರೆ.
ಈ ಟೂರ್ನಿಯಲ್ಲಿ ನೀರಜ್ ಎರಡನೇ ಸ್ಥಾನ ಪಡೆದರು. 89.83 ಮೀ ದೂರ ಜಾವೆಲಿನ್ ಎಸೆದ ಫಿನ್‌ಲ್ಯಾಂಡ್‌ನ ಒಲಿವರ್ ಹೆಲಾಂಡರ್ ಮೊದಲ ಸ್ಥಾನ ಗಳಿಸಿದರು.
ಕಳೆದ ವರ್ಷದ ಮಾರ್ಚ್‌ನಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಹೊಸ ದಾಖಲೆ ಬರೆದಿದ್ದರು. ಅವರ ಸಾಧನೆಗೆ ಚಿನ್ನದ ಪದಕವೂ ದಕ್ಕಿತ್ತು. ಆ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬಂದ ಏಕೈಕ ಚಿನ್ನದ ಪದಕ ಅದಾಗಿತ್ತು. 88.07 ಮೀ ದೂರ ಜಾವೆಲಿನ್ ಎಸೆದು ನೀರಜ್ ಭಾರತದ ಹೆಮ್ಮೆಯಾಗಿದ್ದರು. ಭಾರತದ ಆಟಗಾರರು ಆವರೆಗೆ ಅಷ್ಟು ದೂರ ಜಾವೆಲಿನ್ ಎಸೆದ ದಾಖಲೆ ಇರಲಿಲ್ಲ.
ಆದರೆ, ಈ ಬಾರಿಯ ಕಾಂಟಿನೆಂಟಲ್ ಟೂರ್‌ನಲ್ಲಿ ನೀರಜ್ ಅವರ ಈ ಹಿಂದಿನ ರೆಕಾರ್ಡ್ ಈಗ ಅವರಿಂದಲೇ ಬ್ರೇಕ್ ಆಗಿದೆ. ಈ ಪಂದ್ಯದ ಮೊದಲ ಎಸೆತದಲ್ಲಿ ನೀರಜ್ ಜಾವೆಲಿನ್ ಅನ್ನು 86.92 ಮೀಟರ್ ದೂರ ಎಸೆದರು. ಎರಡನೇ ಅವಕಾಶದಲ್ಲಿ ನೀರಜ್ ಎಸೆದ ಜಾವೆಲಿನ್ 89.30 ಮೀ. ದೂರ ಹೋಗಿ ಬಿತ್ತು. ಈ ಮೂಲಕ ಅತಿ ದೂರ ಜಾವೆಲಿನ್ ಎಸೆದ ಅಟಗಾರರಲ್ಲಿ ನೀರಜ್ ಅವರೇ ಮೊದಲೆರಡು ಸ್ಥಾನ ಪಡೆದಿದ್ದಾರೆ. ಅಷ್ಟೇ ಅಲ್ಲ, ಅತಿ ದೂರದ ಎಸೆತದಲ್ಲಿ ಇದು ವಿಶ್ವಕ್ಕೇ 5ನೇ ಸ್ಥಾನ ಪಡೆದಿದೆ.
ಮೊದಲ ಎಸೆತ: 86.92 ಮೀ.
ಎರಡನೇ ಎಸೆತ: 89.30 ಮೀ.
ಮೂರನೇ ಎಸೆತ: 85.85 ಮೀ.
ನೀರಜ್ ಚೋಪ್ರಾ ಮುಂಬರಲಿರುವ ಕೊರ್ಟೇನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಜೂನ್ 30ರಂದು ಡೈಮಂಡ್ ಲೀಗ್‌ನ ಸ್ಟಾಕೊಮ್ ಲೀಗ್ ಪಂದ್ಯದಲ್ಲಿ ಭಾಗಿಯಾಗಿಲಿದ್ದಾರೆ. ನಂತರ ಜುಲೈ 15ರಿಂದ 24ರವರೆಗೆ ನಡೆಯಲಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಇವರ ಜಾವೆಲಿನ್ 90 ಮೀ. ಗಡಿಯನ್ನು ಯಾವಾಗ ದಾಟಬಹುದು ಎಂಬ ಕುತೂಹಲ ಭಾರತೀಯರದು.
ಇದನ್ನೂ ಓದಿ: NEERAJ CHOPRA ಎಂಬ ಏಕಲವ್ಯನಿಗೆ ಗುರುವಾದ ದ್ರೋಣಾಚಾರ್ಯ ಯಾರು?