ಬುಡಾಪೆಸ್ಟ್ (ಹಂಗೇರಿ): ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡುವ ಮೂಲಕ ಭಾರತದ ನೀರಜ್ ಚೋಪ್ರಾ (Neeraj Chopra) ಇತಿಹಾಸ ಸೃಷ್ಟಿಸಿದ್ದಾರೆ. ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ 88.17 ಮೀಟರ್ ದೂರ ಭರ್ಜಿ ಎಸೆಯುವ ಮೂಲಕ ವಿಶ್ವ ಚಿನ್ನದ ಪದಕ ಗೆದ್ದಿದ್ದಾರೆ. ಅಷ್ಟೇ ಅಲ್ಲ, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ (World Athletics Championships 2023) ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ. ಇನ್ನು ಚಿನ್ನ ಗೆದ್ದ ಬಳಿಕ ನೀರಜ್ ಚೋಪ್ರಾ ಅವರು ಪಾಕಿಸ್ತಾನದ ಅರ್ಷದ್ ನದೀಮ್ (Arshad Nadeem) ಅವರನ್ನು ಕರೆದು, ಭಾರತದ ತಿರಂಗಾ ಪಕ್ಕ ನಿಲ್ಲುವಂತೆ ಕೋರಿದ ವಿಡಿಯೊ ಈಗ ವೈರಲ್ ಆಗಿದೆ.
ಫೈನಲ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ ನೀರಜ್ ಚೋಪ್ರಾ ಕ್ಯಾಮೆರಾ ಎದುರು ಮಿಂಚುತ್ತಿದ್ದರು. ಇದೇ ವೇಳೆ ಅವರು ಪಾಕಿಸ್ತಾನದ ಅರ್ಷದ್ ನದೀಮ್ ಅವರನ್ನು ಪಕ್ಕಕ್ಕೆ ಕರೆದು, ಅವರ ಜತೆ ಕ್ಯಾಮೆರಾಗೆ ಪೋಸ್ ನೀಡಿದರು. ನೀರಜ್ ಚೋಪ್ರಾ ಕರೆಯುತ್ತಲೇ ಆಗಮಿಸಿದ ಅರ್ಷದ್ ನದೀಮ್, ತಿರಂಗಾ ಬಳಿ ನಿಂತು ಕ್ಯಾಮೆರಾಗೆ ಪೋಸ್ ಕೊಟ್ಟರು. ನೀರಜ್ ಚೋಪ್ರಾ ಹಾಗೂ ಅರ್ಷದ್ ನದೀಮ್ ತುಂಬ ದಿನಗಳಿಂದ ಉತ್ತಮ ಸ್ನೇಹಿತರಾಗಿದ್ದು, ಅವರನ್ನು ಆಹ್ವಾನಿಸಿದ ಕುರಿತು ನೀರಜ್ ಚೋಪ್ರಾಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಎರಡನೇ ಸ್ಥಾನ ಪಡೆದ ಅರ್ಷದ್ ನದೀಮ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.
ನೀರಜ್ ಚೋಪ್ರಾ ಕರೆದಿದ್ದು ಹೀಗೆ…
ನೀರಜ್ ಚೋಪ್ರಾ ಈಗಾಗಲೇ ಒಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಗೆದ್ದಿದ್ದಾರೆ. ಇದೀಗ ವಿಶ್ವ ಚಾಂಪಿಯನ್ಶಿಪ್ನಲ್ಲಿಯೂ ಚಿನ್ನ ಗೆದ್ದು ನಾಲ್ಕು ಪ್ರಮುಖ ಟೂರ್ನಿಯಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಹಿರಿಮೆಗೆ ಪಾತ್ರರಾದರು. ಜತೆಗೆ ಡೈಮಂಡ್ ಲೀಗ್ನಲ್ಲಿಯೂ ಚಿನ್ನದ ಪದಕದಿಂದ ಮಿನುಗಿದ್ದಾರೆ. ಕಳೆದ ವರ್ಷ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಈ ಬಾರಿ ಚಿನ್ನದ ಪದಕದೊಂದಿಗೆ ಮಿಂಚಿದರು. ಇದರೊಂದಿಗೆ ಭಾರತಕ್ಕೆ ನೀರಜ್ ಚೋಪ್ರಾ ತಂದುಕೊಟ್ಟ ಪದಕಗಳ ಸಂಖ್ಯೆ 22ಕ್ಕೆ ಏರಿಕೆಯಾದಂತಾಗಿದೆ.
ಚೋಪ್ರಾಗೆ ಮೋದಿ ಅಭಿನಂದನೆ
ಇದನ್ನೂ ಓದಿ: World Championships: ಭಾರತಕ್ಕೆ ಐತಿಹಾಸಿಕ ಚಿನ್ನ ಗೆದ್ದ ನೀರಜ್ ಚೋಪ್ರಾ; ಕನ್ನಡಿಗ ಮನುಗೆ 6ನೇ ಸ್ಥಾನ
ಈ ಟೂರ್ನಿಯಲ್ಲಿ ಭಾರತ ಇದುವರೆಗೆ ಕೇವಲ ಎರಡು ಪದಕ ಮಾತ್ರ ಗೆದ್ದಿತ್ತು. ಇದರಲ್ಲಿ ಒಂದು ಪದಕ ಕಳೆದ ವರ್ಷ ನೀರಜ್ ಅವರೇ ತಂದುಕೊಟ್ಟಿದ್ದರು. 2003ರ ಪ್ಯಾರಿಸ್ ವಿಶ್ವ ಕೂಟದ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಅಂಜು ಬಾಬಿ ಜಾರ್ಜ್ ಮೊದಲ ಪದಕ ಪಡೆದಿದ್ದರು. ಅವರು ಕಂಚಿನ ಪದಕ ಗೆದ್ದಿದ್ದರು. ಇದೀಗ ಮತ್ತೆ ನೀರಜ್ ಪದಕ ಗೆದ್ದು ಈ ಕೂಟದಲ್ಲಿ ಭಾರತದ ಪದಕ ಸಂಖ್ಯೆಯನ್ನು ಮೂರಕ್ಕೆ ಏರಿಸಿದ್ದಾರೆ.