Site icon Vistara News

ರಾಷ್ಟ್ರ ಧ್ವಜ ನೆಲಕ್ಕೆ ಬೀಳದಂತೆ ಕ್ಯಾಚ್​ ಹಿಡಿದು ದೇಶದ ಜನತೆಯ ಮನ ಗೆದ್ದ ನೀರಜ್‌ ಚೋಪ್ರಾ

Neeraj Chopra Catches Indian Flag

ಬೆಂಗಳೂರು: ಬುಧವಾರ ನಡೆದ ಏಷ್ಯನ್​ ಗೇಮ್ಸ್​ನ(asian games 2023) ಪುರುಷರ ಜಾವೆಲಿನ್‌ ಎಸೆತದಲ್ಲಿ ಯಾರ ನಿರೀಕ್ಷೆಯೂ ಹುಸಿಗೊಳಿಸದೆ ಟೋಕಿಯೊ ಒಲಿಂಪಿಕ್​ ಸ್ಟಾರ್​ ನೀರಜ್‌ ಚೋಪ್ರಾ(Neeraj Chopra) ಮತ್ತೆ ಚಿನ್ನಕ್ಕೆ ಮುತ್ತಿಟ್ಟಿದ್ದರು. 4ನೇ ಪ್ರಯತ್ನದಲ್ಲಿ 88.88 ಮೀ. ದೂರ ಜಾವೆಲಿನ್​ ಎಸೆದು ಚಾಂಪಿಯನ್‌ ಪಟ್ಟ ತಮ್ಮಲ್ಲೇ ಉಳಿಸಿಕೊಂಡರು. ಇದೇ ವೇಳೆ ಭಾರತದ ಪುರುಷರ 4×400 ಮೀ. ರಿಲೇ ತಂಡದೊಂದಿಗೆ ಸಂಭ್ರಮಾಚರಣೆ ನಡೆಸುತ್ತಿದ್ದ ವೇಳೆ ಪ್ರೇಕ್ಷಕರು ಎಸೆದ ರಾಷ್ಟ್ರ ಧ್ವಜವನ್ನು ನೆಲಕ್ಕೆ ಬೀಳದಂತೆ ನೀರಜ್​ ಕ್ಯಾಚ್​ ಹಿಡಿದು ಎಲ್ಲರ ಮನ ಗೆದ್ದಿದ್ದಾರೆ. ಈ ಮೂಲಕ ರಾಷ್ಟ್ರ ಧ್ವಜದ ಗೌರವಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಂಡಿದ್ದಾರೆ. ನೀರಜ್​ ಅವರು ರಾಷ್ಟ್ರ ಧ್ವಜವನ್ನು ಕ್ಯಾಚ್ ಹಿಡಿದ ವಿಡಿಯೊ ವೈರಲ್(viral video) ಆಗಿದೆ.​

ವಿಶ್ವ ಚಾಂಪಿಯನ್​ ಆಗಿರುವ ನೀರಜ್​ 2ನೇ ಪ್ರಯತ್ನದಲ್ಲಿ 84.49 ಮೀ. ದಾಖಲಿಸಿದ್ದರು. ಆದರೆ ಕಿಶೋರ್‌ ಜೆನಾ ತಮ್ಮ 3ನೇ ಪ್ರಯತ್ನದಲ್ಲಿ 86.77 ಮೀ. ದೂರಕ್ಕೆಸೆದು ಅಗ್ರಸ್ಥಾನಕ್ಕೇರಿದ್ದರು. ಬಳಿಕ 4ನೇ ಪ್ರಯತ್ನದಲ್ಲಿ ನೀರಜ್​ 88.88 ಮೀ. ದೂರ ಎಸೆದು ಚಿನ್ನ ಗೆದ್ದರು. 2018ರಲ್ಲೂ ಚಿನ್ನ ಜಯಿಸಿದ್ದರು. 87.54 ಮೀ. ದೂರ ದಾಖಲಿಸಿ ಕಿಶೋರ್‌ ಬೆಳ್ಳಿ ಗೆದ್ದರು. ಜಪಾನ್‌ನ ಡೀನ್‌ ರೋಡ್ರಿಕ್‌ (82.68 ಮೀ.) ಕಂಚು ಜಯಿಸಿದರು.

ಇದನ್ನೂ ಓದಿ Asian Games : ಏಷ್ಯನ್​ ಗೇಮ್ಸ್​ನಲ್ಲಿ ಹೊಸ ದಾಖಲೆಯೊಂದಿಗೆ ಚಿನ್ನ ಗೆದ್ದ ಪುರುಷರ ರಿಲೇ ತಂಡ

61 ವರ್ಷಗಳ ಬಳಿಕ ಚಿನ್ನದ ಪದಕ ಗೆದ್ದ ಭಾರತದ ಪುರುಷರ 4×400 ಮೀ. ರಿಲೇ ತಂಡದ ಜತೆ ನೀರಜ್​ ಕೂಡ ಸಂಭ್ರಮಾಚರಣೆ ಮಾಡಿದರು. ಅವರೊಂದಿಗೆ ಫೋಟೊ ತೆಗೆಯುವ ವೇಳೆ ಎಲ್ಲರು ಭಾರತದ ಧ್ವಜವನ್ನು ಕೈಯಲ್ಲಿ ಹಿಡಿದಿದ್ದರು. ಆದರೆ ನೀರಜ್​ ಬಳಿ ಧ್ವಜ ಇರಲಿಲ್ಲ. ಇದೇ ವೇಳೆ ಇಲ್ಲಿ ನೆಡರದಿದ್ದ ಭಾರತದ ಅಭಿಮಾನಿಗಳು ನೀರಜ್​ ಅವರನ್ನು ಕರೆದು ಧ್ವಜವನ್ನು ನೀಡಿ ಫೋಟೊಗೊ ಫೋಸ್​ ನೀಡುವಂತೆ ಹೇಳಿದ್ದಾರೆ. ಇದಕ್ಕೆ ಇದೇ ವೇಳೆ ಗ್ಯಾಲರಿಯಲ್ಲಿದ್ದ ಓರ್ವ ವ್ಯಕ್ತಿ ನೀರಜ್​ ಕಡೆ ಧ್ವಜವನ್ನು ಎಸೆದರು. ಗಾಳಿ ಇದ್ದ ಕಾರಣ ಧ್ವಜ ನೀರಜ್​ ಕಡೆ ಸರಿಯಾಗಿ ಬರಲಿಲ್ಲ. ಇನ್ನೇನು ಧ್ವಜ ನೆಲಕ್ಕೆ ಬೀಳಲಿದೆ ಎನ್ನುವಷ್ಟರಲ್ಲಿ ನೀರಜ್​ ಡೈವ್​ ಮೂಲಕ ಧ್ವಜವನ್ನು ಕ್ಯಾಚ್​ ಹಿಡಿದಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ರಾಷ್ಟ್ರಧ್ವಜದ ಮೇಲೆ ಆಟೋಗ್ರಾಫ್‌ ಬರೆಯಲು ನಿರಾಕರಿಸಿದ್ದ ನೀರಜ್‌

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇಡೀ ದೇಶದ ಮೆಚ್ಚುಗೆಗೆ ಪಾತ್ರರಾಗಿದ್ದ ನೀರಜ್‌ ಚೋಪ್ರಾ ರಾಷ್ಟ್ರಧ್ವಜದ ಮೇಲೆ ಸಹಿ ಹಾಕುವಂತೆ ಕೋರಿಕೊಂಡ ಅಭಿಮಾನಿಯೊಬ್ಬರ ಮನವಿಯನ್ನು ತಿರಸ್ಕರಿಸುವ ಮೂಲಕ ಕ್ರೀಡಾ ಬದ್ಧತೆ ಮತ್ತು ರಾಷ್ಟ್ರಾಭಿಮಾನವನ್ನು ಎತ್ತಿಹಿಡಿದ್ದರು.

‘ಹಂಗೇರಿಯಾ ಮಹಿಳಾ ಅಭಿಮಾನಿಯೊಬ್ಬರು ನೀರಜ್ ಅವರ ಬಳಿ ಬಂದು ಆಟೋಗ್ರಾಫ್‌ ಕೇಳುತ್ತಾರೆ. ಇದಕ್ಕೆ ಒಪ್ಪಿಗೆ ನೀಡಿದ ನೀರಜ್‌ ಚೋಪ್ರಾ ಎಲ್ಲಿ ಸಹಿ ಮಾಡಬೇಕೆಂದು ಕೇಳುತ್ತಾರೆ. ಆಗ ಆಕೆ ಭಾರತದ ರಾಷ್ಟ್ರ ಧ್ವಜವನ್ನು ತೋರಿಸುತ್ತಾರೆ. ಅಲ್ಲಿ ಸಹಿ ಮಾಡಲು ಸಾಧ್ಯವಿಲ್ಲ (ವಹಾ ನಹಿ ಸೈನ್ ಕರ್ ಸಕ್ತಾ) ಎಂದು ನೀರಜ್‌ ಹೇಳಿ ನಂತರ ಆಕೆಯ ಟೀ ಶರ್ಟ್‌ ಮೇಲೆ ಸಹಿ ಮಾಡಿದ್ದರು. ರಾಷ್ಟ್ರಾಭಿಮಾನ ಎತ್ತಿಹಿಡಿದು ದೇಶದ ಜನತೆಯ ಮನ ಗೆದ್ದಿದ್ದರು.

Exit mobile version