Site icon Vistara News

Diamond League: ಸೆಂಟಿಮೀಟರ್ ಅಂತರದಲ್ಲಿ ನೀರಜ್​ ಕೈತಪ್ಪಿದ ಚಿನ್ನ; ಲಾಂಗ್​ ಜಂಪ್​ನಲ್ಲಿ ಶ್ರೀಶಂಕರ್​ಗೆ 5ನೇ ಸ್ಥಾನ

neeraj chopra and Sreeshankar

ಜ್ಯೂರಿಚ್‌: ಭಾನುವಾರ ಬುಡಾಪೆಸ್ಟ್​ನಲ್ಲಿ ನಡೆದಿದ್ದ ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಭಾರತದ ಜಾವೆಲಿನ್‌ ತಾರೆ ನೀರಜ್‌ ಚೋಪ್ರಾ(Neeraj Chopra) ನಾಲ್ಕು ದಿನಗಳ ಅಂತರದಲ್ಲಿ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದಾರೆ. ಜ್ಯೂರಿಚ್‌ನಲ್ಲಿ ನಡೆದ ಮೂರನೇ ಚರಣರದ ಡೈಮಂಡ್​ ಲೀಗ್​ನಲ್ಲಿ ನೀರಜ್​ ಅವರು 85.71 ದೂರ ಜಾವೆಲಿನ್​ ಎಸೆದು ಕೇವಲ 15 ಸೆಂಟಿಮೀಟರ್​ ಅಂತರದಿಂದ ಚಿನ್ನದ ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡರು. ಆದರೆ ಮತ್ತೊಮ್ಮೆ ಭಾರತದ ಕೀರ್ತಿ ಪತಾಕೆಯನ್ನು ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಎತ್ತಿ ಹಿಡಿದರು. ಭಾರತರ ಮತ್ತೊಂದು ಭರವಸೆಯಾಗಿದ್ದ ಲಾಂಗ್​ ಜಂಪ್​ ಸ್ಪರ್ಧೆಯಲ್ಲಿ ಮುರಳಿ ಶ್ರೀಶಂಕರ್‌ ಅವರು ಪದಕ ಗೆಲ್ಲುವಲ್ಲಿ ವಿಫಲರಾದರು. ಅವರು 7.99 ಮೀ. ಜಿಗಿದು 5ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಗ್ರ್ಯಾಂಡ್‌ ಫಿನಾಲೆ ಅಮೆರಿಕದ ಯೂಜಿನ್‌ನಲ್ಲಿ ಸೆಪ್ಟೆಂಬರ್​ 16, 17ರಂದು ನಡೆಯಲಿದೆ.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ 85.86 ದೂರ ಎಸೆದು ಚಿನ್ನ ಗೆದ್ದರು. ನೀರಜ್​ 85.71 ದೂರ ಎಸೆದು ಬೆಳ್ಳಿ ಗೆದ್ದರೆ, ಜರ್ಮನಿಯ ಜೂಲಿಯನ್‌ ವೆಬ್ಬರ್‌ 85.04 ಕಂಚು ಗೆದ್ದರು. ​ಮೊದಲ ಪ್ರಯತ್ನದಲ್ಲಿ 80.79 ಮೀ. ಎಸೆದ ನೀರಜ್​ ದ್ವಿತೀಯ ಎಸೆತದಲ್ಲಿ ಫೌಲ್​ ಆದರು. ನಾಲ್ಕನೇ ಎಸೆದಲ್ಲಿ ಮತ್ತೆ ಹಿಡಿತ ಸಾಧಿಸಿದರೂ ಅಂತಿಮ ಎಸೆದಲ್ಲಿ ಎಡವಿ ಚಿನ್ನದ ಪದಕದಿಂದ ವಂಚಿತಾದರು.

ದೋಹ- ಲಾಸನ್ನೆ ಚರಣದಲ್ಲಿ ಚಿನ್ನ

ನೀರಜ್‌ ಚೋಪ್ರಾ ಇದೇ ಮೇ 5ರಂದು ದೋಹಾದಲ್ಲಿ ನಡೆದಿದ್ದ ಡೈಮಂಡ್‌ ಲೀಗ್‌ನಲ್ಲಿ(Diamond League) ಚಿನ್ನದ ಪದಕ ಗೆದ್ದಿದ್ದರು. ಈ ಕೂಟದಲ್ಲಿ ಅವರು ತಮ್ಮ 4ನೇ ಅತ್ಯುತ್ತಮ ದೂರದ(88.67 ಮೀ.) ಸಾಧನೆಯೊಂದಿಗೆ ಗುರುತಿಸಿಕೊಂಡಿದ್ದರು. ಬಳಿಕ ಸ್ನಾಯು ಸೆಳೆತಕ್ಕೆ ಸಿಲುಕಿದ ಕಾರಣ ಒಂದು ತಿಂಗಳ ವಿಶ್ರಾಂತಿ ಪಡೆದು ಲಾಸನ್ನೆ ಚರಣರದ ಡೈಮಂಡ್​ ಲೀಗ್​ನಲ್ಲಿ(Lausanne Diamond League) ಕಣಕ್ಕಿಳಿದಿದ್ದರು. ಇಲ್ಲಿ 87.66 ಮೀಟರ್‌ ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ್ಕೆ ಕೊರಳೊಡ್ಡಿ ಸತತ ಚಿನ್ನ ಗೆದ್ದ ಸಾಧನೆ ಮಾಡಿದ್ದರು. ಇಲ್ಲಿಯೂ ಚಿನ್ನ ಗೆದ್ದಿದ್ದರೆ ಹ್ಯಾಟ್ರಿಕ್​ ಚಿನ್ನ ಗೆದ್ದ ಸಾಧನೆ ಮಾಡುತ್ತಿದ್ದರು.

ಇದನ್ನೂ ಓದಿ Neeraj Chopra: ಪ್ಯಾರಿಸ್​ನಲ್ಲಿಯೂ ನೀರಜ್​ ಚೋಪ್ರಾಗೆ ಚಿನ್ನ ಒಲಿಯಲಿದೆ; ಶಿರಸಿಯ ಕಾಶಿನಾಥ್ ನಾಯ್ಕ್ ವಿಶ್ವಾಸ

5ನೇ ಸ್ಥಾನಕ್ಕೆ ತೃಪ್ತಿಪಟ್ಟ ಮುರಳಿ ಶ್ರೀಶಂಕರ್‌

ಭಾರತರ ಮತ್ತೊಂದು ಭರವಸೆಯಾಗಿದ್ದ ಲಾಂಗ್​ ಜಂಪ್​ ಸ್ಪರ್ಧೆಯಲ್ಲಿ ಮುರಳಿ ಶ್ರೀಶಂಕರ್‌ ಅವರು ಪದಕ ಗೆಲ್ಲುವಲ್ಲಿ ವಿಫಲರಾದರು. 7.99 ಮೀ. ಜಿಗಿದು 5ನೇ ಸ್ಥಾನ ಪಡೆದರು. ಲಾಸನ್ನೆ ಚರಣದಲ್ಲಿಯೂ 7.88 ಮೀಟರ್‌ ಜಿಗಿತದೊಂದಿಗೆ ಐದನೇ ಸ್ಥಾನ ಪಡೆದಿದ್ದರು. ಈ ಬಾರಿ ತಮ್ಮ ಜಿಗಿತವನ್ನು ಕೊಂಚ ಉತ್ತಮಗೊಳಿಸಿದರು. ಗ್ರೀಸ್‌ನ ಮಿಲ್ಟಿಯಾಡಿಸ್ ಟೆಂಟೊಗ್ಲೋ 8.07 ಮೀ. ಜಿಗಿದು ಚಿನ್ನ ಗೆದ್ದರು.

ಕಳೆದ ಪ್ಯಾರಿಸ್‌ ಡೈಮಂಡ್‌ ಲೀಗ್‌ ಲಾಂಗ್‌ಜಂಪ್‌ನಲ್ಲಿ 8.09 ಮೀ. ದೂರದ ಸಾಧನೆಯೊಂದಿಗೆ ತೃತೀಯ ಸ್ಥಾನಿಯಾಗಿದ್ದ ಮುರಳಿ ಶ್ರೀಶಂಕರ್‌ ಇಲ್ಲಿ ಪದಕ ಗೆಲ್ಲುವಲ್ಲಿ ಎಡವಿದರು. ಇದಕ್ಕೂ ಮುನ್ನ ನಡೆದಿದ್ದ ನ್ಯಾಶನಲ್‌ ಇಂಟರ್‌ ಸ್ಟೇಟ್‌ ಆ್ಯತ್ಲೆಟಿಕ್ಸ್‌ನಲ್ಲಿ ಅತ್ಯುತ್ತಮ ವೈಯಕ್ತಿಕ ಸಾಧನೆಯನ್ನು ದಾಖಲಿಸಿ(8.42 ಮೀ.) ಮಿಂಚಿದ್ದರು.

ವಿಶ್ವ ಆ್ಯತ್ಲೆಟಿಕ್ಸ್‌ನಲ್ಲಿ ಚಿನ್ನದ ಹೊಳಪು

ಭಾನುವಾರ ರಾತ್ರಿ ನಡೆದಿದ್ದ ಫೈನಲ್‌ನಲ್ಲಿ ನೀರಜ್‌ ಚೋಪ್ರಾ 88.17 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಚಿನ್ನದ ಪದಕ ಗೆದ್ದಿದ್ದರು. ಈ ಮೂಲಕ ವಿಶ್ವ ಆ್ಯತ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟಿದ್ದರು. ಒಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ ಹಾಗೂ ವಿಶ್ವ ಚಾಂಪಿಯನ್​ಶಿಪ್​ನಲ್ಲಿಯೂ ಚಿನ್ನ ಗೆದ್ದ ಭಾರತದ ಮೊದಲ ಅಥ್ಲೀಟ್​ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಕಳೆದ ವರ್ಷ ಇದೇ ಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

Exit mobile version