ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ, ಭಾರತದ ತಾರಾ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Neeraj Chopra) ಅವರು ಇದೀಗ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿಯೂ(paris olympics) ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಈಗಾಗಲೇ ಕಠಿಣ ತಯಾರಿಯನ್ನೂ ಕೂಡ ನಡೆಸಿ ಸಿದ್ಧರಾಗಿದ್ದಾರೆ. ಇದೀಗ ನೀರಜ್ ಪ್ಯಾರಿಸ್ನಲ್ಲಿಯೂ ಚಿನ್ನ ಗೆದ್ದರೆ ಸಾಮಾನ್ಯ ಜನರು ಕೂಡ ಒಂದು ಬಾರಿ ತಮ್ಮ ನೆಚ್ಚಿನ ದೇಶಕ್ಕೆ ಉಚಿತವಾಗಿ ವಿಮಾನ ಪ್ರಯಾಣ ಕೈಗೊಳ್ಳುವ ಆಫರ್ ಒಂದು ಬಂದಿದೆ.
ಹೌದು, ನೀರಜ್ ಚೋಪ್ರಾ ಚಿನ್ನ ಗೆದ್ದರೆ, ಎಲ್ಲರಿಗೂ ಉಚಿತ ವೀಸಾ(Free visa) ನೀಡುವುದಾಗಿ ಆನ್‌ಲೈನ್ ವೀಸಾ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್ ಅಟ್ಲಿಸ್‌ನ (Atlys) ಸಂಸ್ಥಾಪಕ ಮತ್ತು ಸಿಇಒ ಮೊಹಕ್ ನಹ್ತಾ (Mohak Nahta) ಭರವಸೆ ನೀಡಿದ್ದಾರೆ. ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದರೆ ನಾನು ಎಲ್ಲರಿಗೂ ಉಚಿತ ವೀಸಾವನ್ನು ಕಳುಹಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಮೋಹಕ್ ನಹ್ತಾ ಅವರು ಈ ಪೋಸ್ಟ್ ಕಂಡ ತಕ್ಷಣ ಅನೇಕ ನೆಟ್ಟಿಗರು ಇದು ಹೇಗೆ ಸಾಧ್ಯ? ಎಷ್ಟು ದಿನ ಈ ಆಫರ್ ಇರಲಿದೆ? ಹೀಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ನೆಟ್ಟಿಗರಿಂದ ಹಲವು ಪ್ರಶ್ನೆಗಳು ಎದುರಾದ ಕಾರಣ ಮೋಹಕ್ ನಹ್ತಾ ಎಲ್ಲ ಪ್ರಶ್ನೆಗಳಿಗೆ ಮತ್ತು ಗೊಂದಕ್ಕೆ ಮತ್ತೊಂದು ಪೋಸ್ಟ್ ಮೂಲಕ ಉತ್ತರವನ್ನು ನೀಡಿದ್ದಾರೆ.
“ಆಗಸ್ಟ್ 8ರಂದು ನಡೆಯುವ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಅವರು ಚಿನ್ನದ ಪದಕ ಗೆದ್ದರೆ, ನಮ್ಮ ಬಳಿ ಬರುವ ಎಲ್ಲ ಗ್ರಾಹಕರಿಗೆ ಒಂದು ದಿನಕ್ಕೆ ಸೀಮಿತವಾಗಿರುವ ಒಂದು ಉಚಿತ ವೀಸಾ ನೀಡುತ್ತೇವೆ. ಯಾವುದೇ ರೂಪದಲ್ಲೂ ಹಣ ಪಡೆಯುವುದಿಲ್ಲ, ಶೂನ್ಯ ಖರ್ಚಿನಲ್ಲಿ ಈ ವೀಸಾ ನೀಡಲಾಗುವುದು. ಯಾವುದೇ ನಿರ್ದಿಷ್ಟ ದೇಶಗಳಿಗೆ ಸೀಮಿತವಲ್ಲ, ನಿಮ್ಮಿಷ್ಟದ ದೇಶಗಳಿಗೆ ವೀಸಾ ನೀಡಲಾಗುವುದು. ಈ ಆಫರ್ ಪಡೆಯಲು ನೀವು ಎಲ್ಲಿಗೆ ಪ್ರಯಾಣಿಸಲು ಬಯಸುತ್ತೀರೋ ಅದನ್ನು ನೀವೇ ಆಯ್ಕೆ ಮಾಡಿ, ಕಾಮೆಂಟ್‌ಗಳಲ್ಲಿ ನಿಮ್ಮ ಇಮೇಲ್ ನೀಡಿದರೆ ಉಚಿತ ವೀಸಾ ಕ್ರೆಡಿಟ್‌ನೊಂದಿಗೆ ನಾವು ನಿಮ್ಮ ಖಾತೆ ರಚಿಸುತ್ತೇವೆ” ಎಂದು ಸ್ಪಷ್ಟನೆ ನೀಡಿದ್ದಾರೆ.
23 ವರ್ಷದ ನೀರಜ್ ಚೋಪ್ರಾ ಇದುವರೆಗಿನ ಶ್ರೇಷ್ಠ ನಿರ್ವಹಣೆ 89.94 ಮೀ. ದೂರ ಎಸೆದಿರುವುದು. ಈ ಎಸೆತವನ್ನು 2022ರ ಸ್ಟಾಕ್ಹೋಮ್ ಡೈಮಂಡ್ ಲೀಗ್ನಲ್ಲಿ ಎಸೆದಿದ್ದರು. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ 90 ಮೀ. ದೂರ ಎಸೆಯುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
ಕಾಶಿನಾಥ್ ನಾಯ್ಕ್ ಅವರು ನೀರಜ್ ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್ನಲ್ಲಿಯೂ(neeraj chopra paris olympics) ಚಿನ್ನದ ಪದಕ ಗೆಲ್ಲಲಿದ್ದಾರೆ ಎಂದು ಆತ್ಮವಿಶ್ವಾಸದಿಂದ ಈ ಮಾತನ್ನು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಕಾಶಿನಾಥ್, “ನಾನು 2015 ರಿಂದ ನೀರಜ್ ಜತೆ ಕೆಲಸ ಮಾಡುತ್ತಿದ್ದೇನೆ. ಅವರ ಛಲವನ್ನು ಮೆಚ್ಚಲೇ ಬೇಕು. ಸಾಧಿಸುವ ಛಲವೇ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಅತ್ಯಂತ ಶಿಸ್ತಿನ ಕ್ರೀಡಾಪಟು ಕೂಡ ಆಗಿದ್ದಾರೆ. 90 ಮೀ. ದೂರ ಜಾವೆಲಿನ್ ಎಸೆಯುವದು ಪ್ರಮುಖ ಗುರಿ ಎಂದು ನೀರಜ್ ಈಗಾಗಲೇ ಹೇಳಿದ್ದಾರೆ. ಹೇಳಿದಂತೆ ಅವರು ಈ ದೂರವನ್ನು ಕ್ರಮಿಸುವ ವಿಶ್ವಾಸ ನನ್ನಲ್ಲಿದೆ” ಎಂದು ಹೇಳಿದ್ದಾರೆ.