ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ, ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Neeraj Chopra) ಅವರು ಇದೇ ತಿಂಗಳು 22ರಿಂದ ಆರಂಭಗೊಳ್ಳಲಿರುವ ಲಾಸಾನ್ನೆ ಡೈಮಂಡ್ ಲೀಗ್‌ನಲ್ಲಿ(Lausanne Diamond League) ಪಾಲ್ಗೊಳ್ಳಲಿದ್ದಾರೆ. ಈ ವಿಚಾರವನ್ನು ಸ್ವತಃ ನೀರಜ್ ಖಚಿತಪಡಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ನೀರಜ್ ಅವರು ಜರ್ಮನಿಯಲ್ಲಿ ತೊಡೆಸಂಧು ನೋವಿಗೆ ಚಿಕಿತ್ಸೆ ಪಡೆಯಲಿದ್ದಾರೆ ಎನ್ನಲಾಗಿತ್ತು. ಇದೀಗ ಅವರಿಗೆ ವೈದ್ಯರು ಸದ್ಯಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ನೀರಜ್ ಡೈಮಂಡ್ ಲೀಗ್‌ನಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದಾರೆ. ಮುಂದಿನ ತಿಂಗಳು ಸೆಪ್ಟೆಂಬರ್ 13 ಮತ್ತು 14ರಂದು ಬ್ರಸೆಲ್ಸ್‌ನಲ್ಲಿ ಕೊನೆಯ ಡೈಮಂಡ್ ಲೀಗ್ ನಡೆಯಲಿದೆ. ಇದಾದ ಮೇಲೆ ನೀರಜ್ ಮತ್ತೆ ವೈದ್ಯರನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಹಲವು ವರ್ಷಗಳಿಂದ 90 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವುದಕ್ಕೆ ಸತತ ಪ್ರಯತ್ನ ನಡೆಸುತ್ತಿರುವ ನೀರಜ್ ಇನ್ನು ಮುಂದೆ 90 ಮೀ. ಗುರಿಯನ್ನು ದೇವರಿಗೆ ಬಿಡುತ್ತೇನೆ ಎಂದು ಹೇಳಿದ್ದಾರೆ. ನೀರಜ್ರ ಇದುವರೆಗಿನ ಶ್ರೇಷ್ಠ ನಿರ್ವಹಣೆ 89.94 ಮೀ. ದೂರ ಎಸೆದಿರುವುದು. ಈ ಎಸೆತವನ್ನು 2022ರ ಸ್ಟಾಕ್ಹೋಮ್ ಡೈಮಂಡ್ ಲೀಗ್‌ನಲ್ಲಿ ಎಸೆದಿದ್ದರು.
ನೋವಿನ ಮಧ್ಯೆಯೂ ನೀರಜ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 89.45 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಬೆಳ್ಳಿ ಗೆದ್ದಿದ್ದರು. ಪಾಕಿಸ್ತಾನದ ಅರ್ಷದ್ ನದೀಮ್ ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದರು. ಇದೀಗ ಮತ್ತೆ ಲಾಸಾನ್ನೆ ಡೈಮಂಡ್ ಲೀಗ್‌ನಲ್ಲಿ ಇಂಡೋ-ಪಾಕ್ ಅಥ್ಲೀಟ್ಗಳು ಕಾಣಿಸಿಕೊಳ್ಳಲಿದ್ದಾರೆ. ಜರ್ಮನಿಯ ಜೂಲಿಯನ್ ವೆಬ್ಬರ್, ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ಅವರಿಂದ ನೀರಜ್ಗೆ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. ನೀರಜ್ ಚೋಪ್ರಾ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಡೈಮಂಡ್ ಲೀಗ್‌ನಲ್ಲಿ ಬೆಳ್ಳಿ ಗೆದ್ದಿದ್ದರು.
ಇದನ್ನೂ ಓದಿ Neeraj Chopra: ಫೈನಲ್ ವೇಳೆ ನೀರಜ್ ಚೋಪ್ರಾ ಧರಿಸಿದ್ದ ವಾಚ್ ಕಂಪನಿ ಯಾವುದು?, ಇದರ ಬೆಲೆ ಎಷ್ಟು?
ಪ್ಯಾರಿಸ್ ಒಲಿಂಪಿಕ್ಸ್ ಮುಕ್ತಾಯದ ಬೆನ್ನಲ್ಲೇ ನೀರಜ್ ಚೋಪ್ರಾ(Manu Bhaker-Neeraj Chopra) ಹಾಗೂ ಶೂಟಿಂಗ್ನಲ್ಲಿ ಅವಳಿ ಕಂಚಿನ ಪದಕ ಗೆದ್ದ ಮನು ಭಾಕರ್ ಮಧ್ಯೆ ಪ್ರೇಮಾಂಕುರವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿತ್ತು. ಇವರಿಬ್ಬರು ಆತ್ಮೀಯವಾಗಿ ಮಾತನಾಡುತ್ತಿರುವ ವಿಡಿಯೊ ಭಾರೀ ಚರ್ಚೆಗೆ ಗ್ರಾಸವಾಗಿತ್ತು,. ಅಲ್ಲದೆ ಮನು(Manu Bhaker) ತಾಯಿ ಕೂಡ ನೀರಜ್ ಜತೆ ಕಾಣಿಸಿಕೊಂಡಿದ್ದ ಕಾರಣ ನೀರಜ್-ಮನು ಮಧ್ಯೆ ಪ್ರೀತಿ ಇರುವುದು ಖಚಿತ ಎನ್ನಲಾಗಿತ್ತು. ಬಳಿಕ ಮನು ಭಾಕರ್ ತಂದೆ(Manu Bhaker Father) ರಾಮ್ ಕಿಶನ್(Ram Kishan) ಸ್ಪಷ್ಟನೆ ನೀಡುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದರು.
“ನನ್ನ ಮಗಳು ಇನ್ನೂ ಚಿಕ್ಕ ವಯಸ್ಸಿನವಳು. ಈಗ ವಿವಾಹವಾಗುವ ವಯಸ್ಸು ಕೂಡ ಅವಳದ್ದಲ್ಲ. ಸದ್ಯ ಮದುವೆ ಬಗ್ಗೆ ಯಾವ ಯೋಚನೆಯೂ ಇಲ್ಲ. ಮನು ತಾಯಿ ನೀರಜ್ರನ್ನು ತನ್ನ ಸ್ವಂತ ಮಗನಂತೆ ಕಾಣುತ್ತಾರೆ. ಹೀಗಾಗಿ ನೀರಜ್ ಜತೆ ತುಂಬಾ ಆತ್ಮೀಯವಾಗಿ ಕಾಣಿಸಿಕೊಂಡರು” ಎಂದು ಹೇಳಿದ್ದರು.