ತುರ್ಕು (ಫಿನ್ಲೆಂಡ್): ಪ್ಯಾರಿಸ್ ಒಲಿಂಪಿಕ್ಸ್(Paris Olympics) ಟೂರ್ನಿಗೂ ಮುನ್ನ ನೀರಜ್ ಚೋಪ್ರಾ(Neeraj Chopra) ಅವರು ಹೊಸ ಉತ್ಸಾಹದೊಂದಿಗೆ ಇಂದು (ಮಂಗಳವಾರ) ನಡೆಯುವ ಪಾವೊ ನೂರ್ಮಿ(Paavo Nurmi Games) ಅಥ್ಲೆಟಿಕ್ ಕೂಟದಲ್ಲಿ ಭಾಗವಹಿಸಲಿದ್ದಾರೆ. ಜರ್ಮನಿಯ ಯುವ ಜಾವೆಲಿನ್ ಪಟು ಮ್ಯಾಕ್ಸ್ ಡ್ಹೆನಿಂಗ್(Max Dehning) ಅವರಿಂದ ತೀವ್ರ ಪೈಪೋಟಿ ಎದುರಾಗುವ ನಿರೀಕ್ಷೆಯಿದೆ. ನೀರಜ್ ಈ ಟೂರ್ನಿಯ ಕಣದಲ್ಲಿರುವ ಏಕೈಕ ಭಾರತೀಯ ಅಥ್ಲೀಟ್.
19 ವರ್ಷದ ಡ್ಹೆನಿಂಗ್ ಇತ್ತೀಚೆಗೆ ನಡೆದ ಟೂರ್ನಿಯೊಂದರಲ್ಲಿ 90 ಮೀ. ದೂರ ಜಾವೆಲಿನ್ ಎಸೆದು ಈ ಸಾಧನೆ ತೋರಿದ ಅತಿ ಕಿರಿಯ ಜಾವೆಲಿನ್ ಪಟು ಎಂಬ ಹಿರಿಮೆಗೆ ಪಾತ್ರರಾಗಿದ್ದರು. ನೀರಜ್ ಅವರು ಇದುವರೆಗೂ 90ರ ಗಡಿ ದಾಟಿಲ್ಲ. 89.94 ಮೀ. ದೂರ ಅವರ ಇದುವರೆಗಿನ ವೈಯಕ್ತಿಕ ಶ್ರೇಷ್ಠ ಪ್ರದರ್ಶನವಾಗಿದೆ. ಈ ಎಸೆತವನ್ನು ನೀರಜ್ 2022ರ ಡೈಮಂಡ್ ಲೀಗ್‌ನಲ್ಲಿ ದಾಖಲಿಸಿದ್ದರು. ಹೀಗಾಗಿ ಈ ಟೂರ್ನಿಯಲ್ಲಿ ಅವರಿಗೆ ಡ್ಹೆನಿಂಗ್ ಅವರಿಂದ ಪೈಪೋಟಿ ಎದುರಾಗುವ ಸಾಧ್ಯತೆ ಇದೆ.
ಇದು ಮಾತ್ರವಲ್ಲದೆ 2022ರಲ್ಲಿ ನಡೆದಿದ್ದ ಇದೇ ಕೂಟದಲ್ಲಿ ನೀರಜ್ಗೆ ಸೋಲುಣಿಸಿದ್ದ ಒಲಿವರ್ ಹೆಲಾಂಡರ್, ಎರಡು ಬಾರಿಯ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್ (ಗ್ರೆನೆಡಾ) ಮತ್ತು 2012ರ ಒಲಿಂಪಿಕ್ ಚಾಂಪಿಯನ್ ಕೆಶೋರ್ನ್ ವಾಲ್ಕಾಟ್ (ಟ್ರಿನಿಡಾಡ್ ಮತ್ತು ಟೊಬಾಗೊ) ಕೂಡ ಈ ಬಾರಿ ಕಣದಲ್ಲಿದ್ದಾರೆ. ಒಟ್ಟಾರೆ ಬಲಿಷ್ಠ ಜಾವೆಲಿನ್ ಪಟುಗಳ ಮಧ್ಯೆ ಇಂದು ಜಿದ್ದಾಜಿದ್ದಿನ ಹೋರಾಟವೊಂದು ನಡೆಯಲಿದೆ ಎನ್ನಲಡ್ಡಿಯಿಲ್ಲ. ಝೆಕ್ ರಿಪಬ್ಲಿಕ್‌ನ ಪ್ರಮುಖ ಸ್ಪರ್ಧಿ, ಕಳೆದ ದೋಹಾ ಡೈಮಂಡ್ ಲೀಗ್‌ನಲ್ಲಿ ಚಿನ್ನ ಗೆದ್ದಿದ್ದ ಯಾಕುಬ್ ವಾಡ್ಲೆಚ್ ಈ ಟೂರ್ನಿಗೆ ಗೈರಾಗಿದ್ದಾರೆ.
ಇದನ್ನೂ ಓದಿ Neeraj Chopra: 2 ತಿಂಗಳು ವಿದೇಶದಲ್ಲಿ ಕಠಿಣ ತರಬೇತಿ ಪಡೆಯಲಿದ್ದಾರೆ ನೀರಜ್ ಚೋಪ್ರಾ
ತೊಡೆಯ ಸ್ನಾಯು ನೋವಿನಿಂದ ವಿಶ್ರಾಂತಿ ಪಡೆದಿದ್ದ ನೀರಜ್ ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಒಲಿಂಪಿಕ್ಸ್ಗೆ ಸಿದ್ಧತೆ ನಡೆಸಲಿದ್ದೇನೆ ಎಂದು ಹೇಳಿದ್ದಾರೆ. ಕಳೆದ ತಿಂಗಳು ಭುವನೇಶ್ವರದಲ್ಲಿ ನಡೆದ ಫೆಡರೇಷನ್ ಕಪ್ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ ಕೂಟದಲ್ಲಿ ಚಿನ್ನ ಗೆದ್ದ ಬಳಿಕ ನೀರಜ್ ಯಾವುದೇ ಟೂರ್ನಿಯಲ್ಲಿ ಆಡಿರಲಿಲ್ಲ. ಈ ಟೂರ್ನಿ ಮಾತ್ರವಲ್ಲದೆ ಜುಲೈ 7ರಂದು ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿಯೂ ನೀರಜ್ ಕಣಕ್ಕಿಳಿಯಲಿದ್ದಾರೆ.
ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ನೀರಜ್ ಈ ಬಾರಿಯೂ ಚಿನ್ನ ಗೆಲ್ಲಲಿ ಎನ್ನುವುದು ಶತ ಕೋಟಿ ಭಾರತೀಯರ ಆಶಯ ಮತ್ತು ಹಾರೈಕೆಯಾಗಿದೆ. 2024ರಲ್ಲಿ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್ ಅತಿ ದೊಡ್ಡ ಮತ್ತು ಮಹತ್ವದ ಕ್ರೀಡಾಕೂಟವಾಗಿದೆ. ಸುಮಾರು 200 ದೇಶಗಳ 10,000 ಕ್ರೀಡಾಪಟುಗಳು ಒಲಿಂಪಿಕ್ ವೈಭವಕ್ಕಾಗಿ ಸ್ಪರ್ಧಿಸಲಿದ್ದಾರೆ. ಪ್ಯಾರಿಸ್ ತನ್ನ ಮೂರನೇ ಬಾರಿಗೆ ಆತಿಥೇಯ ನಗರವಾಗಿ (1900 ಮತ್ತು 1924 ರ ನಂತರ) ಟೂರ್ನಿಯ ಆತಿಥ್ಯ ವಹಿಸಿಕೊಳ್ಳಲಿದೆ. ಜುಲೈ 26 ರಿಂದ ಆಗಸ್ಟ್ 11ರ ತನಕ ಟೂರ್ನಿ ನಡೆಯಲಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.