ಯುಜೀನ್, (ಅಮೆರಿಕ): ಒಲಿಂಪಿಕ್ಸ್ ಸೇರಿ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ದಾಖಲೆ ಬರೆದಿರುವ ಭಾರತ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Neeraj Chopra) ಮತ್ತೊಂದು ಚಿನ್ನದ ಪದಕ ನಿರೀಕ್ಷೆಯಲ್ಲಿದ್ದಾರೆ. ಶನಿವಾರ ತಡರಾತ್ರಿ ಅಮೆರಿಕದ ಯುಜೀನ್‌ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ 2023 ಫೈನಲ್‌ನಲ್ಲಿ(Diamond League 2023 Final) ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಆದರೆ ಭಾರತೀಯ ಕಾಲಮಾನದಂತೆ ಈ ಪಂದ್ಯ ಭಾನುವಾರ ಬೆಳಗಿನ ಜಾವ ನಡೆಯಲಿದೆ.
ಫೈನಲ್‌ನಲ್ಲಿ ಏಕೈಕ ಭಾರತೀಯ ಅಥ್ಲೀಟ್
89.94 ಮೀ. ರಾಷ್ಟ್ರೀಯ ದಾಖಲೆ ಹೊಂದಿರುವ ನೀರಜ್ ಚೋಪ್ರಾ ಅವರು 2023ರ ಡೈಮಂಡ್ ಲೀಗ್ ಫೈನಲ್‌ನಲ್ಲಿ ಸ್ಪರ್ಧಿಸುವ ಏಕೈಕ ಭಾರತೀಯ ಅಥ್ಲೀಟ್ ಆಗಿದ್ದಾರೆ. ಪುರುಷರ ಲಾಂಗ್ ಜಂಪಿಂಗ್ನಲ್ಲಿ ಮುರಳಿ ಶ್ರೀಶಂಕರ್ ಮತ್ತು 3000 ಮೀ. ಸ್ಟೀಪಲ್ ಚೇಸ್ನಲ್ಲಿ ಅವಿನಾಶ್ ಸಬ್ಲೆ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಆದರೆ ಸೆಪ್ಟೆಂಬರ್ 23 ರಿಂದ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಇದಕ್ಕೆ ಬೇಕಾದ ತಯಾರಿ ನಡೆಸಲು ಉಭಯ ಅಥ್ಲೀಟ್ಗಳು ಫೈನಲ್ ಸ್ಫರ್ದೆಯಿಂದ ಹಿಂದೆ ಸರಿದಿದ್ದಾರೆ.
ಚಿನ್ನ ಉಳಿಸಿಕೊಳ್ಳುವ ವಿಶ್ವಾಸ
25 ವರ್ಷದ ನೀರಜ್ ಚೋಪ್ರಾ ಅವರು ಸದ್ಯ ಪ್ರಚಂಡ ಪ್ರದರ್ಶನ ತೋರುವ ಮೂಲಕ ಹಲವು ಕೂಟದಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಇದಲ್ಲದೆ ಈ ಕೂಟದಲ್ಲಿ ಅವರು ಹಾಲಿ ಚಾಂಪಿಯನ್ ಕೂಡ ಆಗಿದ್ದಾರೆ. ಕಳೆದ ವರ್ಷ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಈ ಬಾರಿಯೂ ಪದಕವನ್ನು ತಮ್ಮ ಬಳಿಯೇ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಅಲ್ಲದೆ 90 ಮೀ. ದೂರ ಎಸೆಯುವ ಗುರಿಯನ್ನು ಹೊಂದಿದ್ದಾರೆ.
ದೋಹ- ಲಾಸನ್ನೆ ಚರಣದಲ್ಲಿ ಚಿನ್ನ
ನೀರಜ್ ಚೋಪ್ರಾ ಇದೇ ಮೇ 5ರಂದು ದೋಹಾದಲ್ಲಿ ನಡೆದಿದ್ದ ಡೈಮಂಡ್ ಲೀಗ್‌ನಲ್ಲಿ(Diamond League) ಚಿನ್ನದ ಪದಕ ಗೆದ್ದಿದ್ದರು. ಈ ಕೂಟದಲ್ಲಿ ಅವರು ತಮ್ಮ 4ನೇ ಅತ್ಯುತ್ತಮ ದೂರದ(88.67 ಮೀ.) ಸಾಧನೆಯೊಂದಿಗೆ ಗುರುತಿಸಿಕೊಂಡಿದ್ದರು. ಬಳಿಕ ಸ್ನಾಯು ಸೆಳೆತಕ್ಕೆ ಸಿಲುಕಿದ ಕಾರಣ ಒಂದು ತಿಂಗಳ ವಿಶ್ರಾಂತಿ ಪಡೆದು ಲಾಸನ್ನೆ ಚರಣರದ ಡೈಮಂಡ್ ಲೀಗ್‌ನಲ್ಲಿ(Lausanne Diamond League) ಕಣಕ್ಕಿಳಿದಿದ್ದರು. ಇಲ್ಲಿ 87.66 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ್ಕೆ ಕೊರಳೊಡ್ಡಿ ಸತತ ಚಿನ್ನ ಗೆದ್ದ ಸಾಧನೆ ಮಾಡಿದ್ದರು. ಆದರೆ ಜ್ಯೂರಿಚ್‌ನಲ್ಲಿ ನಡೆದ ಮೂರನೇ ಚರಣರದ ಡೈಮಂಡ್ ಲೀಗ್‌ನಲ್ಲಿ 85.71 ದೂರ ಜಾವೆಲಿನ್ ಎಸೆದು ಕೇವಲ 15 ಸೆಂಟಿಮೀಟರ್ ಅಂತರದಿಂದ ಚಿನ್ನದ ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡರು ಬೆಳ್ಳಿಗೆ ತೃಪ್ತಿ ಪಟ್ಟಿದ್ದರು.
ಇದನ್ನೂ ಓದಿ World Championships: ಭಾರತಕ್ಕೆ ಐತಿಹಾಸಿಕ ಚಿನ್ನ ಗೆದ್ದ ನೀರಜ್ ಚೋಪ್ರಾ; ಕನ್ನಡಿಗ ಮನುಗೆ 6ನೇ ಸ್ಥಾನ
ಕಣದಲ್ಲಿರುವ ಘಾಟಾನುಘಟಿಗಳು
ನೀರಜ್ ಚೋಪ್ರಾ ಅವರಿಗೆ ಫೈನಲ್‌ನಲ್ಲಿ ಪೈಪೋಟಿ ನೀಡಲು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್, ಆಂಡರ್ಸನ್ ಪೀಟರ್ಸ್, ಜರ್ಮನಿಯ ವಿಶ್ವದ ನಂ. 2 ಜೂಲಿಯನ್ ವೆಬರ್ ಅವರಂತಹ ಘಟಾನುಘಟಿಗಳು ಕಾಣಿಸಿಕೊಂಡಿದ್ದಾರೆ.