Site icon Vistara News

Neeraj Chopra: ಪಾವೊ ನೂರ್ಮಿ ಅಥ್ಲೆಟಿಕ್ಸ್ ಗೇಮ್ಸ್​; ಚೊಚ್ಚಲ ಚಿನ್ನ ಗೆದ್ದ ನೀರಜ್ ಚೋಪ್ರಾ

Neeraj Chopra

Neeraj Chopra: Neeraj Chopra wins gold at Paavo Nurmi Games

ಟರ್ಕು:(ಫಿನ್ಲೆಂಡ್): ತೊಡೆ ಸ್ನಾಯು ನೋವಿನಿಂದ ಅಲ್ಪಾವಧಿ ವಿರಾಮ ಪಡೆದು ಕಣಕ್ಕಿಳಿದಿದ್ದ ಟೋಕಿಯೊ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ, ವಿಶ್ವ ಚಾಂಪಿಯನ್, ಭಾರತದ ತಾರಾ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Neeraj Chopra) ಅವರು ಪಾವೊ ನೂರ್ಮಿ ಅಥ್ಲೆಟಿಕ್ಸ್(Paavo Nurmi Games) ಕೂಟದಲ್ಲಿ ಚೊಚ್ಚಲ ಚಿನ್ನದ ಪದಕ ಗೆದ್ದಿದ್ದಾರೆ. ಜತೆಗೆ ಮುಂದಿನ ತಿಂಗಳು ನಡೆಯುವ ಪ್ಯಾರಿಸ್​ ಒಲಿಂಪಿಕ್ಸ್​ಗೂ ಮುನ್ನ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಮತ್ತೊಂದು ಚಿನ್ನದ ಪದಕದ ಭರವಸೆ ಮೂಡಿಸಿದ್ದಾರೆ.

26 ವರ್ಷದ ನೀರಜ್​ ಚೋಪ್ರಾ ಅವರು ಈ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಸ್ಪರ್ಧಿಯಾಗಿದ್ದರು. ಪಂದ್ಯಕ್ಕೂ ಮುನ್ನ ಜರ್ಮನಿಯ 19 ವರ್ಷದ ಜಾವೆಲಿನ್‌ ಎಸೆತಗಾರ ಮ್ಯಾಕ್ಸ್‌ ಡ್ಲೆನಿಂಗ್ ಅವರಿಂದ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಏಕೆಂದರೆ ಡ್ಲೆನಿಂಗ್ ಇತ್ತೀಚೆಗೆ ನಡೆದಿದ್ದ ಸ್ಥಳೀಯ ಟೂರ್ನಿಯೊಂದರಲ್ಲಿ 90 ಮೀ. ದೂರ ಜಾವೆಲಿನ್​ ಎಸೆದಿದ್ದರು. ಹೀಗಾಗಿ ಈ ಯುವ ಆಟಗಾರ ನೀರಜ್​ಗೆ ಪೈಪೋಟಿಯೊಡ್ಡುವ ನಿರೀಕ್ಷೆ ಮಾಡಲಾಗಿತ್ತು. ಆದರೆ ಭಾರತೀಯ ಆಟಗಾರ ಮುಂದೆ ಪ್ರಾಬಲ್ಯ ಮೆರೆಯಲು ಸಾಧ್ಯವಾಗಲಿಲ್ಲ. ಕೇವಲ 79.84 ಮೀ. ದೂರ ಎಸೆದು ಏಳನೇ ಸ್ಥಾನ ಪಡೆದರು.

ಇದನ್ನೂ ಓದಿ Neeraj Chopra: 2 ತಿಂಗಳು ವಿದೇಶದಲ್ಲಿ ಕಠಿಣ ತರಬೇತಿ ಪಡೆಯಲಿದ್ದಾರೆ ನೀರಜ್ ಚೋಪ್ರಾ

ಮಂಗಳವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ನೀರಜ್​ ಚೋಪ್ರಾ ಅವರು ತಮ್ಮ ಮೂರನೇ ಪ್ರಯತ್ನದಲ್ಲಿ 85.97 ಮೀಟರ್ ದೂರ ಎಸೆದು ಚಿನ್ನದ ಪದಕ ಜಯಿಸಿದರು. 2022ರಲ್ಲಿ ನೀರಜ್​ ಇದೇ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಈ ಬಾರಿ ಚಿನ್ನ ಗೆದ್ದ ಸಾಧನೆ ಮಾಡಿದರು. ಟೋನಿ ಕೆರಾನೆನ್ 84.19 ಮೀಟರ್ ಎಸೆದು ಬೆಳ್ಳಿ ಪದಕ ಗೆದ್ದರೆ, 2022ರ ಚಿನ್ನದ ಪದಕ ವಿಜೇತ ಒಲಿವರ್ ಹೆಲಾಂಡರ್ 83.96 ಮೀಟರ್ ಎಸೆದು ಮೂರನೇ ಸ್ಥಾನ ಪಡೆದರು.

ನೀರಜ್​ ಅವರು ತಮ್ಮ ಮೊದಲ ಎಸೆತದಲ್ಲಿ 93.62 ಮೀ. ಎಸೆತದೊಂದಿಗೆ ಮುನ್ನಡೆ ಸಾಧಿಸಿದರು. ಆದರೆ, ಒಲಿವರ್​ ತಮ್ಮ ಎರಡನೇ ಪ್ರಯತ್ನದಲ್ಲಿ 83.96 ಮೀ. ಎಸೆತದೊಂದಿಗೆ ನೀರಜ್​ ಅವರನ್ನು ಹಿಂದಿಕ್ಕಿದರು. ತಿರುಗಿ ಬಿದ್ದ ನೀರಜ್​ ಮೂರನೇ ಎಸೆತದಲ್ಲಿ 85.97 ಮೀ. ದೂರ ಎಸೆದು ಮತ್ತೆ ಮುನ್ನಡೆ ಕಾಯ್ದುಕೊಂಡರು. ಆ ಬಳಿಕ ನೀರಜ್​ ಅವರ ಈ ಉತ್ತಮ ಎಸೆತವನ್ನು ಯಾರಿಂದಲೂ ಮೀರಲು ಸಾಧ್ಯವಾಗಲಿಲ್ಲ. ಜುಲೈ 7ರಂದು ಪ್ಯಾರಿಸ್​ನಲ್ಲಿ ನಡೆಯುವ ಡೈಮಂಡ್​ ಲೀಗ್​ನಲ್ಲಿ ಮತ್ತೆ ನೀರಜ್​ ಕಣಕ್ಕಿಳಿಯಲಿದ್ದಾರೆ. ಇಲ್ಲಿಯೂ ಚಿನ್ನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

Exit mobile version