Site icon Vistara News

Neeraj Chopra: 2 ತಿಂಗಳು ವಿದೇಶದಲ್ಲಿ ಕಠಿಣ ತರಬೇತಿ ಪಡೆಯಲಿದ್ದಾರೆ ನೀರಜ್ ಚೋಪ್ರಾ

Neeraj Chopra

Neeraj Chopra: Sports Ministry approves Neeraj Chopra's two-month training in Europe with coach and physio

ನವದೆಹಲಿ: ಮಹತ್ವದ ಕ್ರೀಡಾಕೂಟವಾದ ಪ್ಯಾರಿಸ್ ಒಲಿಂಪಿಕ್ಸ್(​Paris Olympics 2024) ಆರಂಭಕ್ಕೆ ಇನ್ನು ಒಂದುವರೆ ತಿಂಗಳು ಮಾತ್ರ ಬಾಕಿ ಉಳಿದಿವೆ. ಈ ಕ್ರೀಡಾಕೂಟದ ಸಿದ್ಧತೆಯಾಗಿ ಟೋಕಿಯೊ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ಭಾರತದ ಸ್ಟಾರ್​ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Neeraj Chopra) ಅವರು ಕೋಚ್ ಕ್ಲಾಸ್ ಬಾರ್ಟೋನಿಯೆಟ್ಜ್ ಮತ್ತು ಫಿಸಿಯೋ ಇಶಾನ್ ಮಾರ್ವಾಹಾ ಅವರೊಂದಿಗೆ 60 ದಿನ ಯುರೋಪ್‌ನಲ್ಲಿ ತರಬೇತಿ ಪಡೆಯಲಿದ್ದಾರೆ.

ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದ ನೀರಜ್​ ಚೋಪ್ರಾ ಜುಲೈ 28 ರವರೆಗೆ ಯುರೋಪ್‌ನ ವಿವಿಧ ಸ್ಥಳಗಳಲ್ಲಿ ತರಬೇತಿ ಪಡೆಯಲಿದ್ದಾರೆ. ಕ್ರೀಡಾ ಸಚಿವಾಲಯದ ಮಹತ್ವದ ಯೋಜನೆಯಾದ ‘ಟಾರ್ಗೆಟ್ ಒಲಂಪಿಕ್ ಪೋಡಿಯಂ’ ಅಡಿಯಲ್ಲಿ ಅವರಿಗೆ ಈ ವಿದೇಶಿ ತರಬೇತಿಯ ವೆಚ್ಚವನ್ನು ಭರಿಸಲಾಗುತ್ತದೆ.

“ನಾನು ಕಠಿಣ ತರಬೇತಿ ಪಡೆಯುತ್ತಿದ್ದೇನೆ ಮತ್ತು ಉತ್ತಮ ಭಾವನೆ ಹೊಂದಿದ್ದೇನೆ. ನನ್ನ ಸಾಮರ್ಥ್ಯದ ಅತ್ಯುತ್ತಮ ಪ್ರದರ್ಶನವನ್ನು ನಾನು ಇನ್ನೂ ಮಾಡಿಲ್ಲ ಎಂದು ನಾನು ಭಾವಿಸುತ್ತೇನೆ. ಇದಕ್ಕಾಗಿ ನಾನು ಹಿಂದೆಂದೂ ತಯಾರಿಸಿದ ಅತ್ಯುತ್ತಮ ತಯಾರಿಯಾನ್ನು ನಡೆಸಲಿದ್ದೇನೆ. ಇದು ಮುಂದಿನ ದಿನಗಳಲ್ಲಿ ಉತ್ತಮಗೊಳ್ಳುತ್ತದೆ ಎಂಬ ವಿಶ್ವಾಸವಿದೆ. ನಾನು ನನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುತ್ತೇನೆ. ಈ ಸ್ಪರ್ಧೆಯನ್ನು ಆನಂದಿಸುತ್ತೇನೆ” ಎಂದು ನೀರಜ್ ಹೇಳಿದರು.

ಕಳೆದ ತಿಂಗಳು ಭುನೇಶ್ವರದಲ್ಲಿ ನಡೆದಿದ್ದ ಫೆಡರೇಷನ್ ಕಪ್‌ನಲ್ಲಿ(Federation Cup) ಕಣಕ್ಕಿಳಿದ್ದ ನೀರಜ್ ಚೋಪ್ರಾ(82.27 ಮೀ.), ಕನ್ನಡಿಗ ಡಿಪಿ ಮನು ಅವರಿಂದ ತೀವ್ರ ಪೈಪೋಟಿ ಎದುರಿಸಿ ಚಿನ್ನದ ಪದಕ ಗೆದ್ದಿದ್ದರು. ನೀರಜ್​ ಚೋಪ್ರಾ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಡೈಮಂಡ್ ಲೀಗ್​ನಲ್ಲಿ ಬೆಳ್ಳಿ ಗೆದ್ದಿದ್ದರು. ಒಲಿಂಪಿಕ್ಸ್‌ನ ಟ್ರ್ಯಾಕ್‌ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

ನೀರಜ್​ರ ಇದುವರೆಗಿನ ಶ್ರೇಷ್ಠ ನಿರ್ವಹಣೆ 89.94 ಮೀ. ದೂರ ಎಸೆದಿರುವುದು. ಈ ಎಸೆತವನ್ನು 2022ರ ಸ್ಟಾಕ್​ಹೋಮ್​ ಡೈಮಂಡ್​ ಲೀಗ್​ನಲ್ಲಿ ಎಸೆದಿದ್ದರು. ಅಭ್ಯಾಸದ ವೇಳೆ ಈಗಾಗಲೆ ನೀರಜ್​ ಹಲವು ಬಾರಿ 90 ಮೀ. ಗಡಿ ದಾಟಿದ್ದಾರೆ. ಆದರೆ, ಸ್ಪರ್ಧೆಗಳಲ್ಲಿ ಇದು ಸಾಧ್ಯವಾಗಿರಲಿಲ್ಲ. ಈ ಬಾರಿ ಸ್ಪರ್ಧೆಯಲ್ಲಿಯೂ ಇದನ್ನು ಸಾಧಿಸಲಿದ್ದೇನೆ ಎಂದು ನೀರಜ್​ ಹೇಳಿದ್ದಾರೆ.

ಇದನ್ನೂ ಓದಿ Paris Olympics 2024: ಒಲಿಂಪಿಕ್ಸ್‌ಗೆ‌ ಅರ್ಹತೆ ಪಡೆದ ಬಾಕ್ಸರ್ ನಿಶಾಂತ್ ದೇವ್

ಚಿನ್ನದ ವಿಶ್ವಾಸದಲ್ಲಿ ಕೋಚ್​


ನೀರಜ್ ಅವರ ಮೊದಲ ಕೋಚ್​ ಕಾಶಿನಾಥ್ ನಾಯ್ಕ್ ಅವರು ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿಯೂ(neeraj chopra paris olympics) ನೀರಜ್​ ಚಿನ್ನದ ಪದಕ ಗೆಲ್ಲಲಿದ್ದಾರೆ ಎಂದು ಇತ್ತೀಚೆಗೆ ಸಂದರ್ಶನವೊಂದಲ್ಲಿ ಭವಿಷ್ಯ ನುಡಿದಿದ್ದರು.

“ನಾನು 2015 ರಿಂದ ನೀರಜ್​ ಜತೆ ಕೆಲಸ ಮಾಡುತ್ತಿದ್ದೇನೆ. ಅವರ ಛಲವನ್ನು ಮೆಚ್ಚಲೇ ಬೇಕು.​ ಸಾಧಿಸುವ ಛಲವೇ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಅತ್ಯಂತ ಶಿಸ್ತಿನ ಕ್ರೀಡಾಪಟು ಕೂಡ ಆಗಿದ್ದಾರೆ. 90 ಮೀ. ದೂರ ಜಾವೆಲಿನ್​ ಎಸೆಯುವದು ಪ್ರಮುಖ ಗುರಿ ಎಂದು ನೀರಜ್​ ಈಗಾಗಲೇ ಹೇಳಿದ್ದಾರೆ. ಹೇಳಿದಂತೆ ಅವರು ಈ ದೂರವನ್ನು ಕ್ರಮಿಸುವ ವಿಶ್ವಾಸ ನನ್ನಲ್ಲಿದೆ” ಎಂದು ಹೇಳಿದ್ದರು.

Exit mobile version