ಪ್ಯಾರಿಸ್: ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್(Paris Olympics)ನಲ್ಲಿ ಭಾರತದ ಕೊನೆಯ ಚಿನ್ನದ ಪದಕ ಭರವಸೆಯಾಗಿ ಉಳಿದಿರುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Neeraj Chopra) ಅವರು ಇಂದು ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದು ಭಾರತಕ್ಕೆ ಟ್ರ್ಯಾಕ್ ಆ್ಯಂಡ್ ಫೀಲ್ಡ್ನಲ್ಲಿ ಐತಿಹಾಸಿಕ ಪದಕ ಗೆದ್ದ ನೀರಜ್ ಈ ಬಾರಿಯೂ ಚಿನ್ನಕ್ಕೆ ಗುರಿ ಇರಿಸಲಿ ಎನ್ನುವುದು ದೇಶವಾಸಿಗಳ ಹಾರೈಕೆ. ಫೈನಲ್ ಪಂದ್ಯ ರಾತ್ರಿ 11:55ಕ್ಕೆ ಅರಂಭವಾಗಲಿದೆ.
ಮಂಗಳವಾರ ನಡೆದಿದ್ದ ಅರ್ಹತಾ ಸುತ್ತಿನ ಪಂದ್ಯದಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ 89.34 ಮೀ. ದೂರ ಜಾವೆಲಿನ್ ಎಸೆದು ನೇರವಾಗಿ ಫೈನಲ್ ಪ್ರವೇಶಿಸಿದ್ದರು. ನೀರಜ್ ಅವರೇ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದರು. ಹೀಗಾಗಿ ಫೈನಲ್ನಲ್ಲಿಯೂ ಅವರ ಮೇಲೆ ನಿರೀಕ್ಷೆ ಇರಿಸಲಾಗಿದೆ. ಜರ್ಮನಿಯ ಜೂಲಿಯನ್ ವೆಬ್ಬರ್, ಪಾಕಿಸ್ತಾನದ ಅರ್ಷದ್ ನದೀಮ್, ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಇದೆ.
“ನಾನು ಕಠಿಣ ತರಬೇತಿ ಪಡೆದಿದ್ದೇನೆ ಮತ್ತು ಉತ್ತಮ ಭಾವನೆ ಹೊಂದಿದ್ದೇನೆ. ನನ್ನ ಸಾಮರ್ಥ್ಯದ ಅತ್ಯುತ್ತಮ ಪ್ರದರ್ಶನವನ್ನು ನಾನು ಇನ್ನೂ ಮಾಡಿಲ್ಲ ಎಂದು ನಾನು ಭಾವಿಸುತ್ತೇನೆ. ಇದಕ್ಕಾಗಿ ನಾನು ಹಿಂದೆಂದೂ ತಯಾರಿಸಿದ ಅತ್ಯುತ್ತಮ ತಯಾರಿಯಾನ್ನು ನಡೆಸಿದ್ದೇನೆ. ಇಂದು ನನ್ನ ಪಾಲಿಗೆ ಉತ್ತಮ ದಿನವಾಗಿರುವ ವಿಶ್ವಾಸವಿದೆ. ನಾನು ನನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುತ್ತೇನೆ. ಈ ಸ್ಪರ್ಧೆಯನ್ನು ಆನಂದಿಸುತ್ತೇನೆ” ಎಂದು ನೀರಜ್ ಫೈನಲ್ ಪಂದ್ಯಕ್ಕೂ ಮುನ್ನ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.
ನೀರಜ್ ಚೋಪ್ರಾ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಡೈಮಂಡ್ ಲೀಗ್ನಲ್ಲಿ ಬೆಳ್ಳಿ ಗೆದ್ದಿದ್ದರು. 26 ವರ್ಷದ ನೀರಜ್ ಒಲಿಂಪಿಕ್ಸ್‌ನ ಟ್ರ್ಯಾಕ್ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.
ನೀರಜ್ ಅವರ ಮೊದಲ ಕೋಚ್ ಕಾಶಿನಾಥ್ ನಾಯ್ಕ್ ಅವರು ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್ನಲ್ಲಿಯೂ(neeraj chopra paris olympics) ನೀರಜ್ ಚಿನ್ನದ ಪದಕ ಗೆಲ್ಲಲಿದ್ದಾರೆ ಎಂದು ಇತ್ತೀಚೆಗೆ ಸಂದರ್ಶನವೊಂದಲ್ಲಿ ಭವಿಷ್ಯ ನುಡಿದಿದ್ದರು.
“ನಾನು 2015 ರಿಂದ ನೀರಜ್ ಜತೆ ಕೆಲಸ ಮಾಡುತ್ತಿದ್ದೇನೆ. ಅವರ ಛಲವನ್ನು ಮೆಚ್ಚಲೇ ಬೇಕು. ಸಾಧಿಸುವ ಛಲವೇ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಅತ್ಯಂತ ಶಿಸ್ತಿನ ಕ್ರೀಡಾಪಟು ಕೂಡ ಆಗಿದ್ದಾರೆ. 90 ಮೀ. ದೂರ ಜಾವೆಲಿನ್ ಎಸೆಯುವದು ಪ್ರಮುಖ ಗುರಿ ಎಂದು ನೀರಜ್ ಈಗಾಗಲೇ ಹೇಳಿದ್ದಾರೆ. ಹೇಳಿದಂತೆ ಅವರು ಈ ದೂರವನ್ನು ಕ್ರಮಿಸುವ ವಿಶ್ವಾಸ ನನ್ನಲ್ಲಿದೆ” ಎಂದು ಹೇಳಿದ್ದರು.