Site icon Vistara News

Neeraj Chopra: ರತನ್ ಟಾಟಾ ಭೇಟಿಯಾಗಿ ಹೃದಯಸ್ಪರ್ಶಿ ಸಂದೇಶ ಬರೆದ ನೀರಜ್ ಚೋಪ್ರಾ​

Neeraj Chopra

ಮುಂಬಯಿ: ಭಾರತದ ಸ್ಟಾರ್​ ಜಾವೆಲಿನ್‌ ಎಸೆತಗಾರ, ಒಲಿಂಪಿಕ್‌ ಮತ್ತು ವಿಶ್ವ ಚಾಂಪಿಯನ್‌ ನೀರಜ್‌ ಚೋಪ್ರಾ(Neeraj Chopra) ಅವರು ಭಾರತದ ಮಹೋನ್ನತ ಬಿಸಿನೆಸ್ ಮ್ಯಾಗ್ನೆಟ್ ರತನ್ ಟಾಟಾ(Ratan Tata) ಭೇಟಿಯಾಗಿದ್ದಾರೆ. ಜತೆಗೆ ಈ ಭೇಟಿಯ ಕುರಿತು ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ಅನುಭವವನ್ನು ಕೂಡ ಬರೆದುಕೊಂಡಿದ್ದಾರೆ.

“ನಿಜವಾದ ದಾರ್ಶನಿಕ ಮತ್ತು ಸ್ಫೂರ್ತಿಯ ಚಿಲುಮೆ ಶ್ರೀ ರತನ್ ಟಾಟಾ ಸರ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಕೃತಜ್ಞ. ಬಹು ದಿನದ ಆಸೆ ಈಗ ಈಡೇರಿತು” ಎಂದು ನೀರಜ್ ಚೋಪ್ರಾ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ನೀರಜ್​ ಅವರು ಸಾರ್ವಕಾಲಿಕ ಶ್ರೇಷ್ಠ ಟೆನ್ನಿಸ್ ಆಟಗಾರರಲ್ಲಿ ಒಬ್ಬರಾದ ರೋಜರ್ ಫೆಡರರ್(Roger Federer) ಅವರನ್ನು ಸ್ವಿಟ್ಜರ್ಲೆಂಡ್​ನಲ್ಲಿ ಭೇಟಿಯಾಗಿದ್ದರು.

ರೋಜರ್ ಫೆಡರರ್ ಅವರನ್ನು ಭೇಟಿಯಾದ ಬಗ್ಗೆ ಮುಕ್ತವಾಗಿ ಮಾತನಾಡಿದ್ದ ನೀರಜ್​, “ಟೆನ್ನಿಸ್ ಲೋಕದ ದಂತಕಥೆ ರೋಜರ್‌ ಫೆಡರರ್ ಅವರನ್ನು ಭೇಟಿಯಾಗುವ ಮೂಲಕ ದೀರ್ಘ ಕಾಲದ ನನ್ನ ಕನಸು ನನಸಾಗಿದೆ. ಅವರ ಕೌಶಲ್ಯ, ನಿಜವಾದ ಕ್ರೀಡಾ ಮನೋಭಾವ ಮತ್ತು ಅವರ ಸಾಮರ್ಥ್ಯವನ್ನು ನಾನು ಯಾವಾಗಲೂ ಮೆಚ್ಚಿದ್ದೇನೆ” ಎಂದು ಹೇಳಿದ್ದರು.  ಇದೇ ವೇಳೆ ನೀರಜ್​ ಅವರು ಏಷ್ಯನ್ ಗೇಮ್ಸ್‌ನಲ್ಲಿ ಧರಿಸಿದ್ದ ಭಾರತದ ಜೆರ್ಸಿಯನ್ನು ಫೆಡರರ್​ಗೆ ನೀಡಿ ಗೌರವಿಸಿದ್ದರು.

ಇದನ್ನೂ ಓದಿ Neeraj Chopra: ಚಿನ್ನದ ಹುಡುಗ ನೀರಜ್‌ ಚೋಪ್ರಾಗೆ ಸ್ವಿಸ್‌ ಪ್ರವಾಸೋದ್ಯಮ ಗೌರವ

ಸ್ವಿಟ್ಜರ್ಲೆಂಡ್‌ ಪ್ರವಾಸೋದ್ಯಮ ರಾಯಭಾರಿಯಾಗಿರುವ ನೀರಜ್‌ ಚೋಪ್ರಾ ಅವರನ್ನು ಇಲ್ಲಿನ ಪ್ರವಾಸೋದ್ಯಮ ಇಲಾಖೆ ವಿಶೇಷವಾಗಿ ಗೌರವ ಸೂಚಿಸಿತ್ತು. ಯುರೋಪ್‌ನ ಉನ್ನತ ಸ್ಥಳವಾದ ಜಂಗ್‌ಫ್ರಾಜೋಸ್‌ನಲ್ಲಿರುವ (Jungfraujoch,) ಪ್ರಖ್ಯಾತ ಐಸ್‌ ಪ್ಯಾಲೇಸ್‌ನಲ್ಲಿ(Ice Palace) ನೀರಜ್​ ಅವರ ಫ‌ಲಕವೊಂದನ್ನು ಸ್ಥಾಪಿಸಿ ಗೌರವಿಸಿತ್ತು. ಈ ವೇಳೆ ಪ್ರವಾಸಿಗರ ಆಕರ್ಷಣೆಗಾಗಿ ನೀರಜ್ ತಮ್ಮ ಜಾವೆಲಿನ್‌ ಒಂದನ್ನು ದೇಣಿಗೆಯಾಗಿ ನೀಡಿದ್ದರು. ಈ ಜಾವೆಲಿನ್‌ ಅನ್ನು ಫ‌ಲಕದ ಬದಿಯಲ್ಲಿ ಇರಿಸಲಾಗಿದೆ. ಫೆಡರರ್ ಕೂಡ ಸ್ವಿಟ್ಜರ್ಲೆಂಡ್‌ ಪ್ರವಾಸೋದ್ಯಮ ರಾಯಭಾರಿಯಲ್ಲಿ ಒಬ್ಬರಾಗಿದ್ದಾರೆ. 

2ನೇ ಒಲಿಂಪಿಕ್ ಪದಕ ನಿರೀಕ್ಷೆಯಲ್ಲಿ ನೀರಜ್…


ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್​ ಚೋಪ್ರಾ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಡೈಮಂಡ್ ಲೀಗ್​ನಲ್ಲಿ ಬೆಳ್ಳಿ ಗೆದ್ದಿದ್ದರು. 26 ವರ್ಷದ ನೀರಜ್ ಒಲಿಂಪಿಕ್ಸ್‌ನ ಟ್ರ್ಯಾಕ್‌ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಇದೇ ವರ್ಷ ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ಗೆ ಸಿದ್ಧತೆ ಆರಂಭಿಸಿರುವ ನೀರಜ್​ ಇಲ್ಲಿಯೂ ಚಿನ್ನ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ. ಗೆದ್ದರೆ ಸತತ 2ನೇ ಒಲಿಂಪಿಕ್ಸ್​ ಚಿನ್ನ ಗೆದ್ದ ಸಾಧಕರಾಗಲಿದ್ದಾರೆ

Exit mobile version