Site icon Vistara News

Cricket Record : T20ಯಲ್ಲಿ 314 ರನ್‌, 9 ಬಾಲ್‌ನಲ್ಲಿ ಫಿಫ್ಟಿ, 34 ಬಾಲ್‌ಗಳಲ್ಲಿ ಸೆಂಚುರಿ! ಯಾರ ದಾಖಲೆ ಇದು?

Nepal Team

ಹ್ಯಾಂಗ್ಝೌ: ಏಷ್ಯನ್ ಗೇಮ್ಸ್ (Asian Games 2023) ಕ್ರಿಕೆಟ್​ ಸ್ಪರ್ಧೆಯ ಗ್ರೂಪ್ ಪಂದ್ಯದಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ ಪುರುಷರ ತಂಡ ಇತಿಹಾಸ ಸೃಷ್ಟಿಸಿದೆ. ಪುರುಷರ ಟೂರ್ನಮೆಂಟ್ ಆರಂಭವಾಗುತ್ತಿದ್ದಂತೆ ಸರಣಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ದಾಖಲೆಗಳ (Cricket Record) ಮೇಲೆ ದಾಖಲೆಗಳು ಸೃಷ್ಟಿಯಾಗಿವೆ. ನೇಪಾಳ ತಂಡವು ಮಂಗೋಲಿಯಾ ವಿರುದ್ಧ 20 ಓವರ್​ಗಳಲ್ಲಿ 314/3 ರ ನಂಬಲಸಾಧ್ಯವಾದ ಸ್ಕೋರ್ ದಾಖಲಿಸಿತು. ಕೇವಲ 120 ಎಸೆತಗಳಲ್ಲಿ 300 ರನ್​ ದಾಖಲಿಸಿ ಅಚ್ಚರಿ ಮೂಡಿಸಿತು. ಕ್ರಿಕೆಟ್​ ಆಟದ ಕಿರು ಸ್ವರೂಪದಲ್ಲಿ 300 ರನ್​ಗಳ ಗಡಿಯನ್ನು ದಾಟಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು ನೇಪಾಳ. ಏಷ್ಯನ್​ ಗೇಮ್ಸ್ ನಲ್ಲಿ ನಡೆಯುವ ಪಂದ್ಯಗಳಿಗೆ ಟ್ವೆಂಟಿ-20 ಸ್ಥಾನಮಾನ ನೀಡಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಈ ಹಿಂದೆ ದೃಢಪಡಿಸಿತ್ತು. ಹೀಗಾಗಿ ನೇಪಾಳ ಮಾಡಿದ್ದೆಲ್ಲವೂ ಕ್ರಿಕೆಟ್​ ಇತಿಹಾಸದ ದಾಖಲೆ ಪುಸ್ತಕ ಸೇರಿಕೊಂಡವು.

2007ರ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ವಿರುದ್ಧ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಯುವರಾಜ್ ಸಿಂಗ್ ಅವರ ದೀರ್ಘಕಾಲದ ದಾಖಲೆಯನ್ನು ನೇಪಾಳ ಬ್ಯಾಟರ್​ ದೀಪೇಂದ್ರ ಸಿಂಗ್ ಐರಿ ಮುರಿದರು. ಅವರು 9 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿ 10 ಎಸೆತಗಳಲ್ಲಿ ಅಜೇಯ 52 ರನ್ ಗಳಿಸಿದರು, ಅದರಲ್ಲಿ 48 ರನ್​ಗಳು ಸಿಕ್ಸರ್​ಗಳ ಮೂಲಕೇ ಬಂದಿದ್ದವು.

ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ದಾಖಲೆಯೂ ಮುರಿಯಿತು. ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್​​ ಡೇವಿಡ್ ಮಿಲ್ಲರ್ ಅವರನ್ನು ಹಿಂದಿಕ್ಕಿದ ನೇಪಾಳ ಬ್ಯಾಟರ್​​ ಕುಶಾಲ್ ಮಲ್ಲಾ ಕೇವಲ 34 ಎಸೆತಗಳಲ್ಲಿ ಟಿ 20 ಐನಲ್ಲಿ ವೇಗವಾಗಿ ಶತಕ ಗಳಿಸಿದರು. ಇಬ್ಬರೂ ಬ್ಯಾಟರ್​ಗಳಲ್ಲಿ 35 ಎಸೆತಗಳಲ್ಲಿ ಮೂರಂಕಿ ಮೊತ್ತ ದಾಟಿದ್ದರು. ಮಲ್ಲಾ 8 ಬೌಂಡರಿ ಮತ್ತು 12 ಸಿಕ್ಸರ್​ಗಳನ್ನು ಬಾರಿಸಿ ಕೇವಲ 50 ಎಸೆತಗಳಲ್ಲಿ 137 ರನ್ ಗಳಿಸಿ ಅಜೇಯರಾಗಿ ಉಳಿದರು.

ಇತಿಹಾಸದಲ್ಲಿ ಅತಿ ಹೆಚ್ಚು ಟಿ 20 ಸ್ಕೋರ್ ಗಳ ಪಟ್ಟಿ ಇಲ್ಲಿದೆ

  1. ನೇಪಾಳ – ಮಂಗೋಲಿಯಾ ವಿರುದ್ಧ 314/4 (2023)
  2. ಅಫ್ಘಾನಿಸ್ತಾನ – ಐರ್ಲೆಂಡ್ ವಿರುದ್ಧ 278/3 (2019)
  3. ಜೆಕ್ ಗಣರಾಜ್ಯ – ಟರ್ಕಿ ವಿರುದ್ಧ 278/4 (2019)
  4. ಆಸ್ಟ್ರೇಲಿಯಾ – ಶ್ರೀಲಂಕಾ ವಿರುದ್ಧ 263/3 (2016)
  5. ಕೀನ್ಯಾ ವಿರುದ್ಧ ಶ್ರೀಲಂಕಾ 260/6 (2007)

ಕುತೂಹಲಕಾರಿ ಸಂಗತಿಯೆಂದರೆ, ಹ್ಯಾಂಗ್ಝೌನ ಝೆಜಿಯಾಂಗ್ ಯುನಿವರ್ಸಿಟಿ ಆಫ್ ಟೆಕ್ನಾಲಜಿ ಕ್ರಿಕೆಟ್ ಫೀಲ್ಡ್​​ನಲ್ಲಿ ನೇಪಾಳವು ತಮ್ಮ ಇನ್ನಿಂಗಗ್ಸ್​ಗೆ ನಿಧಾನಗತಿಯ ಆರಂಭವನ್ನು ನೀಡಿತು, ಇಬ್ಬರೂ ಆರಂಭಿಕರು 100ಕ್ಕಿಂತ ಕಡಿಮೆ ಸ್ಟ್ರೈಕ್ ರೇಟ್​​ನಲ್ಲಿ ಆಡಿದ್ದರು. ಆದರೆ, ಬಳಿಕ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು ನೇಪಾಳ ಬ್ಯಾಟರ್​ಗಳು.

ಒಂದೇ ಪಂದ್ಯದಲ್ಲಿ 26 ಸಿಕ್ಸರ್​ಗಳು

ನೇಪಾಳದ ಬ್ಯಾಟರ್​​ಗಳು ಒಂದೇ ಇನ್ನಿಂಗ್ಸ್​​ನಲ್ಲಿ 26 ಸಿಕ್ಸರ್​ಗಳನ್ನು ಬಾರಿಸುವ ಮೂಲಕ ತಮ್ಮ ಹಿಟ್ಟಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಈ ಗಮನಾರ್ಹ ಸಾಧನೆಯು ಈಗ ಟಿ 20 ಐ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್​​ನಲ್ಲಿ ಯಾವುದೇ ತಂಡವು ಅತಿ ಹೆಚ್ಚು ಸಿಕ್ಸರ್​ಗಳ ದಾಖಲೆಯಾಗಿದೆ. ಇದು 2019 ರಲ್ಲಿ ಅಫ್ಘಾನಿಸ್ತಾನವು 278/3 ಸ್ಕೋರ್ ಮಾಡಿದಾಗ 22 ಸಿಕ್ಸರ್​ಗಳ ದಾಖಲೆಯನ್ನೂ ಮುರಿದಿದೆ.

ಇದನ್ನೂ ಓದಿ :Asian Games 2023 : ಶೂಟಿಂಗ್​ನಲ್ಲಿ ಭಾರತಕ್ಕೆ ಚಿನ್ನ, 25 ಮೀಟರ್​ ಪಿಸ್ತೂಲ್​ ಸ್ಪರ್ಧೆಯಲ್ಲಿ ಮಹಿಳೆಯರ ಸಾಧನೆ

ಭಾರತ ನೇರ ಕ್ವಾರ್ಟರ್​ಫೈನಲ್ಸ್​ಗೆ

ಏಷ್ಯನ್ ಗೇಮ್ಸ್ ನ ಪುರುಷರ ಕ್ರಿಕೆಟ್​​ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ತಲಾ ಮೂರು ತಂಡಗಳನ್ನು ಹೊಂದಿರುವ ಮೂರು ಗುಂಪುಗಳಿವೆ. ಪ್ರತಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್​ಗೆ ಅರ್ಹತೆ ಪಡೆಯುತ್ತವೆ. ಅಲ್ಲಿ ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಂತಹ ತಂಡಗಳು ಸೇರಿಕೊಳ್ಳುತ್ತವೆ.

ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಭಾಗವಾಗಿದ್ದ ಋತುರಾಜ್ ಗಾಯಕ್ವಾಡ್ ಭಾರತವನ್ನು ಮುನ್ನಡೆಸಲಿದ್ದಾರೆ.

Exit mobile version