ಕಠ್ಮಂಡು: ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಮಿಚಾನೆ(Sandeep Lamichhane) ಅವರು 18 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ದೋಷಿ(Lamichhane convicted of rape) ಎಂದು ಕಠ್ಮಂಡು ಜಿಲ್ಲಾ ನ್ಯಾಯಾಲಯವು ಶುಕ್ರವಾರ ತೀರ್ಪು ನೀಡಿದೆ. ಪ್ರಕರಣದ ಅಂತಿಮ ವಿಚಾರಣೆ ಡಿಸೆಂಬರ್ 24ರಂದು ನ್ಯಾಯಾಧೀಶ ಶಿಶಿರ್ ರಾಜ್ ಅವರ ಏಕ ಪೀಠದಲ್ಲಿ ಪ್ರಾರಂಭವಾಗಿತ್ತು. ಇದೀಗ ನೇಪಾಳಿ ಕ್ರಿಕೆಟಿಗನ ವಿರುದ್ಧ ಕೋರ್ಟ್ ಆದೇಶ ಹೊರಡಿಸಿದ್ದು ದೋಷಿ ಎಂದು ತಿಳಿಸಿದೆ. ಮುಂದಿನ ವಿಚಾರಣೆಯಲ್ಲಿ ಅವರ ಜೈಲು ಶಿಕ್ಷೆಯನ್ನು ನಿರ್ಧರಿಸಲಾಗುವುದು ಎಂದು ತಿಳಿದುಬಂದಿದೆ.
ಇದೇ ವರ್ಷದ ಜನವರಿ 12 ರಿಂದ ಲಾಮಿಚಾನೆ ಜಾಮೀನಿನ ಮೇಲೆ ಹೊರಬಂದಿದ್ದರು. ಅಲ್ಲದೆ ನೇಪಾಳ ಪರ ಕ್ರಿಕೆಟ್ ಕೂಡ ಆಡುತ್ತಿದ್ದರು. ದೇಶಕ್ಕಾಗಿ ಹಲವಾರು ಪಂದ್ಯಾವಳಿಗಳಲ್ಲಿ ಆಡುತ್ತಿದ್ದರು. ಇದೀಗ ಆರೋಪದಲ್ಲಿ ದೋಷಿ ಆದ ಕಾರಣ ಮುಂದೆ ಕ್ರಿಕೆಟ್ ಆಡಲು ಸಾಧ್ಯವಾಗಲಿದೆಯೇ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. 2022ರಲ್ಲಿ ಲಾಮಿಚಾನೆ ವಿರುದ್ಧ ಹದಿಹರೆಯದ ಹುಡುಗಿಯೊಬ್ಬಳು ಅತ್ಯಾಚಾರದ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಳು. ಈ ಆರೋಪದ ಬಳಿಕ ಲಾಮಿಚಾನೆ ಬಂಧನ ಕೂಡ ಆಗಿತ್ತು. ಕ್ರಿಮಿನಲ್ ಕೋಡ್ 2074 ರ ಸೆಕ್ಷನ್ 219 ರ ಅಡಿಯಲ್ಲಿ ಕ್ರಿಕೆಟಿಗನ ಮೇಲೆ ಆರೋಪ ಹೊರಿಸಲಾಗಿತ್ತು.
ಐಪಿಎಲ್ ಕೂಡ ಆಡಿದ್ದಾರೆ ಲಮಿಚಾನೆ
ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಸಂದೀಪ್ ಲಮಿಚಾನೆ ಒಟ್ಟು 9 ಪಂದ್ಯಗಳನ್ನು ಆಡಿ 13 ವಿಕೆಟ್ ಪಡೆದಿದ್ದಾರೆ. 2018 ಮತ್ತು 2019ರ ಆವೃತ್ತಿಯಲ್ಲಿ ಅವರು ಆಡಿದ್ದರು.
2022ರಲ್ಲಿ ಲಾಮಿಚಾನೆ ಅವರು ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿದ್ದ ಕೆರಿಬಿಯನ್ ಕ್ರಿಕೆಟ್ ಲೀಗ್ನಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರ ಮೇಲೆ ಅತ್ಯಾಚಾರದ ದೂರು ದಾಖಲಾದ ಬಳಿಕವೂ ತನಿಖೆಗೆ ಹಾಜರಾಗದ ಕಾರಣ ಅವರ ವಿರುದ್ಧ ಕೋರ್ಟ್ ಜಾಮೀನುರಹಿತ ವಾರಂಟ್ ಹೊರಡಿಸಿತ್ತು. ಬಳಿಕ ಅವರು ತವರಿಗೆ ಮರಳಿದ್ದರು. ಅವರನ್ನು ವಿಮಾನ ನಿಲ್ದಾಣದಲ್ಲೇ ಪೊಲೀಸರು ವಶಪಡಿಸಿಕೊಂಡು ಕೋರ್ಟ್ಗೆ ಹಾಜರುಪಡಿಸಿದ್ದರು.
ಕೆಳ ಹಂತದ ನ್ಯಾಯಾಲಯ ಲಾಮಿಚಾನೆಯನ್ನು ನ್ಯಾಯಾಂಗ ಬಂಧನದಲ್ಲಿ ಇಡುವಂತೆ ಆದೇಶಿಸಿತ್ತು. ಹೀಗಾಗಿ ಮೂರು ತಿಂಗಳಿಂದ ಜೈಲಿನಲ್ಲಿದ್ದರು. ತಮಗೆ ನೀಡಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಸಂದೀಪ್ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಅವರಿಗೆ ಜಾಮೀನು ನೀಡಿದೆ. ಈ ವೇಳೆ 20 ಲಕ್ಷ ರೂಪಾಯಿ ಬಾಂಡ್ ಕೂಡ ಪಡೆದುಕೊಂಡಿತ್ತು.
ಜೈಲಿನಿಂದ ಹೊರ ಬಂದ ಬಳಿಕ ಸಂದೀಪ್ ಅವರು ತಾವು ನಿರಪರಾಧಿ ಎಂದು ಹೇಳಿಕೊಂಡಿದ್ದರು. ಈ ಕುರಿತ ಟ್ವೀಟ್ ಮಾಡಿದ್ದ ಅವರು ನಾನು ಅಮಾಯಕ ಹಾಗೂ ನ್ಯಾಯಾಲಯದ ಬಗ್ಗೆ ಸಂಪೂರ್ಣ ಭರವಸೆಯಿದೆ. ನನ್ನ ಮೇಲೆ ಮಾಡಿರುವ ನಿರಾಧಾರ ಆರೋಪಗಳಿಗೆ ಉತ್ತರಿಸಲು ನಾನು ಸಿದ್ಧ. ಸೂಕ್ತ ನ್ಯಾಯ ದೊರೆಯುವ ಭರವಸೆಯಿದೆ ಎಂದು ಹೇಳಿದ್ದರು. ಆದರೆ ಇದೀಗ ಪ್ರಕರಣದಲ್ಲಿ ದೋಷಿಯಾಗಿದ್ದಾರೆ.
— Sandeep Lamichhane (@Sandeep25) September 9, 2022