Site icon Vistara News

ICC World Cup 2023 : ಅನಿರೀಕ್ಷಿತ ಫಲಿತಾಂಶ; ದ. ಆಫ್ರಿಕಾ ತಂಡವನ್ನು ಸೋಲಿಸಿದ ನೆದರ್ಲ್ಯಾಂಡ್ಸ್​

Netharlands cricket team

ಧರ್ಮಶಾಲಾ: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಏಕ ದಿನ ವಿಶ್ವ ಕಪ್​ನಲ್ಲಿ (ICC World Cup 2023) ಮತ್ತೊಂದು ಅನಿರೀಕ್ಷಿತ ಫಲಿತಾಂಶ ಮೂಡಿ ಬಂದಿದೆ. ಮೊದಲೆರಡು ಪಂದ್ಯಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ದಕ್ಷಿಣ ಆಫ್ರಿಕಾ ಬಳಗ, ಅರ್ಹತಾ ಸುತ್ತಿನ ಮೂಲಕ ಪ್ರವೇಶ ಪಡೆದಿರುವ ನೆದರ್ಲ್ಯಾಂಡ್ಸ್​ ತಂಡದ ವಿರುದ್ಧ 38 ರನ್​ಗಳಿಂದ ಹೀನಾಯವಾಗಿ ಸೋಲು ಕಂಡಿದೆ. ಈ ಮೂಲಕ ಹಾಲಿ ಆವೃತ್ತಿಯ ತನ್ನ ಮೊದಲ ವಿಜಯವನ್ನು ದಾಖಲಿಸಿದೆ ಡಚ್ಚರ ಪಡೆ. ಇದು ವಿಶ್ವ ಕಪ್​ 202ರ ಎರಡನೇ ಆಘಾತಕಾರಿ ಫಲಿತಾಂಶವಾಗಿದೆ. ನವದೆಹಲಿಯಲ್ಲಿ ನಡೆದಿದ್ದ ಹಾಲಿ ಚಾಂಪಿಯನ್​ ಇಂಗ್ಲೆಂಡ್ ತಂಡವನ್ನು ಅಫಘಾನಿಸ್ತಾನ ತಂಡ 69 ರನ್​ಗಳಿಂದ ಸೋಲಿಸಿ ಸಂಭ್ರಮಿಸಿತ್ತು.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್​ ಸಂಸ್ಥೆಯ ಸ್ಟೇಡಿಯಮ್​ನಲ್ಲಿ ಆಯೋಜನೆಗೊಂಡಿದ್ದ ಪಂದ್ಯಕ್ಕೆ ಆರಂಭದಲ್ಲಿಯೇ ಮಳೆಯ ಅಡಚಣೆ ಉಂಟಾಯಿತು. ಹೀಗಾಗಿ 43 ಇನಿಂಗ್ಸ್​ಗಳ ಪಂದ್ಯವನ್ನು ಆಯೋಜಿಸಲಾಯಿತು. ಅಂತೆಯೇ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ಸ್​ ತಂಡ ನಿಗದಿತ ಓವರ್​ಗಳಲ್ಲಿ ವಿಕೆಟ್​ ನಷ್ಟಕ್ಕೆ 245 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಹರಿಣಗಳ ಬಳಗ 42.5 ಓವರ್​ಗಳಲ್ಲಿ 207 ರನ್​ ಬಾರಿಸಿ ಆಲ್​ಔಟ್ ಆಗಿ ಸೋಲೊಪ್ಪಿಕೊಂಡಿತು.

ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡ ಪರಿಪೂರ್ಣ ಕ್ರಿಕೆಟ್ ಆಡಿತು. ಇನಿಂಗ್ಸ್ ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಮಾಡಿದರೂ ಕೊನೇ 9 ಓವರ್​ಗಳಲ್ಲಿ 109 ರನ್​ ಬಾರಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಸ್ಪರ್ಧಾತ್ಮಕ ಗುರಿಯನ್ನು ಒಡ್ಡಿತು. ಆ ಮೊತ್ತವನ್ನು ಬಳಿಕ ಬೌಲಿಂಗ್​ನಲ್ಲಿಯೂ ಸ್ಮರಣೀಯ ಪ್ರದರ್ಶನ ನೀಡಿ ಗೆಲುವು ತನ್ನದಾಗಿಸಿಕೊಂಡಿತು.

ಈ ಸುದ್ದಿಗಳನ್ನೂ ಓದಿ
Shikhar Dhawan : ಡೈವೋರ್ಸ್ ಬಳಿಕ ಮಗನೊಂದಿಗೆ ವಿಡಿಯೊ ಕಾಲ್​ ಮಾಡಿ ಭಾವುಕರಾದ ಧವನ್​​
Ind vs Pak : ಸೋತರೂ ಬಿಡದ ಹುಂಬತನ; ಭಾರತ ವಿರುದ್ಧವೇ ದೂರು ನೀಡಿದ ಪಾಕಿಸ್ತಾನ
Rohit Sharma : ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ಬೌಲಿಂಗ್ ಮಾಡ್ತಾರಾ ರೋಹಿತ್​?

ಅತ್ತ ದಕ್ಷಿಣ ಆಫ್ರಿಕಾ ತಂಡ ಮೊದಲೆರಡು ಪಂದ್ಯಗಳಲ್ಲಿ ಅದ್ಧೂರಿ ಪ್ರದರ್ಶನ ನೀಡಿತ್ತು. ಶ್ರೀಲಂಕಾ ವಿರುದ್ಧ ತನ್ನ ಮೊದಲ ಪಂದ್ಯದಲ್ಲಿ 102 ರನ್​ಗಳ ವಿಜಯ ದಾಖಲಿಸಿದ್ದರೆ, ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧವಂತೂ 132 ರನ್​ಗಳ ಬೃಹತ್​ ವಿಜಯವನ್ನು ತನ್ನದಾಗಿಸಿಕೊಂಡಿತ್ತು. ಆದರೀಗ ಏಕಾಏಕಿ ಕುಸಿತ ಕಂಡು ದುರ್ಬಲ ತಂಡವೊಂದರ ವಿರುದ್ಧ ಸೋಲು ಕಂಡಿತ್ತು.

ಎಡ್ವರ್ಡ್ಸ್​​ ಭರ್ಜರಿ ಬ್ಯಾಟಿಂಗ್​

ಬ್ಯಾಟಿಂಗ್ ಆರಂಭಿಸಿದ ನೆದರ್ಲ್ಯಾಂಡ್ಸ್​ ತಂಡ ಉತ್ತಮ ಆರಂಭವೇನೂ ಪಡೆಯಲಿಲ್ಲ. 22ಕ್ಕೆ ಮೊದಲ ವಿಕೆಟ್ ಕಳೆದುಕೊಂಡರೆ 82 ರನ್ ಗಳಿಸುವಷ್ಟರಲ್ಲಿ 5 ವಿಕೆಟ್​ ನಷ್ಟ ಮಾಡಿಕೊಂಡಿತು. ಆದರೆ ಏಳನೇ ವಿಕೆಟ್​ಗೆ ಆಟಕ್ಕಿಳಿದ ನಾಯಕ ಸ್ಕಾಟ್​ ಎಡ್ವರ್ಡ್ಸ್​ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. 10 ಫೋರ್, 1 ಸಿಕ್ಸರ್​ ಸಮೇತ 69 ಎಸೆತಗಳಲ್ಲಿ 78 ರನ್ ಗಳಿಸಿದರು. ಅದೇ ರೀತಿ ವ್ಯಾನ್​ಡೆರ್​ ಮರ್ವ್​ 19 ಎಸೆತಕ್ಕೆ 29 ರನ್ ಬಾರಿಸಿದರೆ, ಆರ್ಯನ್ ದತ್​ 9 ಎಸೆತಕ್ಕೆ 23 ರನ್ ಬಾರಿಸಿದರು. ಕೊನೇ 9 ಓವರ್​ಗಳಲ್ಲಿ 100ಕ್ಕೂ ಅಧಿಕ ರನ್​ ಸೋರಿಕೆ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಬೌಲರ್​ಗಳು ಅದಕ್ಕೆ ಬೆಲೆ ತೆತ್ತರು.

ದುರ್ಬಲ ಬ್ಯಾಟಿಂಗ್​

ಗುರಿ ಬೆನ್ನಟ್ಟಲು ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವನ್ನು ನೆದರ್ಲ್ಯಾಂಡ್ಸ್​ ಬೌಲರ್​ಗಳು ತಮ್ಮ ನಿಖರ ದಾಳಿಯ ಮೂಲಕ ಕಟ್ಟಿ ಹಾಕಿದರು. ತೆಂಬಾ ಬವುಮಾ (16 ರನ್​), ಕ್ವಿಂಟನ್​ ಡಿ ಕಾಕ್​ (20ರನ್​), ರಸ್ಸೀ ಡಸ್ಸೆನ್​ (4 ರನ್​), ಏಡೆನ್​ ಮಾರ್ಕ್ರಮ್​ (1 ರನ್​) ಔಟಾಗುವ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಹಿನ್ನಡೆ ಉಂಟಾಯಿತು. ಬಳಿಕ ಕ್ಯಾಸೆನ್​ (28) ಹಾಗೂ ಡೇವಿಡ್​ ಮಿಲ್ಲರ್​ (43) ಸ್ವಲ್ಪ ಹೊತ್ತು ಕ್ರಿಸ್ ಕಾಯ್ದುಕೊಂಡರು. ಜತೆಗೆ ಗೆರಾಲ್ಡ್​ ಕೊಕೊಯೆಡ್ಜಿ 22 ರನ್ ಕೊಡುಗೆ ಕೊಟ್ಟರು. ಆದರೆ, ಸತತವಾಗಿ ವಿಕೆಟ್ ನಷ್ಟ ಮಾಡಿಕೊಂಡ ಹರಿಣಗಳ ಪಡೆಗೆ ಗೆಲವು ಅಸಾಧ್ಯವೆನಿಸಿತು. ಏತನ್ಮಧ್ಯೆ ಕೇಶವ್ ಮಹಾರಾಜ್​ ಕೊನೇ ಹಂತದಲ್ಲಿ 40 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿತು.

ನೆರ್ದಲ್ಯಾಂಡ್ಸ್​ ಪರ ಲೋಗೊನ್ ವ್ಯಾನ್ ಬೀಕ್​ 60 ರನ್​ ಗಳಿಗೆ 3 ವಿಕೆಟ್ ಪಡೆದರೆ, ಮೀಕೆರೆನ್​, ವ್ಯಾನ್​ಡೆರ್​ ಮರ್ವ್​ ಹಾಗೂ ಬಾಸ್ ಡೀ ಲೀಡ್​ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.

Exit mobile version