ಬೆಂಗಳೂರು: ಶ್ರೀಲಂಕಾ ತಂಡದ ವಿರುದ್ಧ 5 ವಿಕೆಟ್ಗಳ ಅಧಿಕಾರಯುತ ಗೆಲುವು ಸಾಧಿಸಿದ ನ್ಯೂಜಿಲ್ಯಾಂಡ್ ತಂಡ ಹಾಲಿ ವಿಶ್ವ ಕಪ್ನ (ICC World Cup 2023) ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಡಿದೆ. ಆದರೆ, ಶನಿವಾರ ನಡೆಯಲಿರುವ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಫಲಿತಾಂಶದ ಬಳಿಕ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ. ಪಾಕಿಸ್ತಾನ ತಂಡವೂ ಸೆಮಿಫೈನಲ್ ರೇಸ್ನಲ್ಲಿದೆ. ಆದರೆ, ಮುಂದಿನ ಪಂದ್ಯವನ್ನು 335 ರನ್ಗಳಿಗಿಂತಳು ಹೆಚ್ಚು ಅಂತರದಿಂದ ಗೆದ್ದರೆ ಮಾತ್ರ ಅದು ಸಾಧ್ಯವಿದೆ. ಹೀಗಾಗಿ ನ್ಯೂಜಿಲ್ಯಾಂಡ್ ನಾಲ್ಕನೇ ತಂಡವಾಗಿ ಸೆಮೀಸ್ ಪ್ರವೇಶ ಮಾಡುವುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಇನ್ನೂ ಎರಡು ದಿನ ಕಾಯಬೇಕಾಗಿದೆ.
New Zealand made a solid push to affirm their place in the top four with a crucial victory over Sri Lanka 👊#NZvSL | #CWC23 | 📝: https://t.co/2hBz4ErQKl pic.twitter.com/ssQiL653dw
— ICC Cricket World Cup (@cricketworldcup) November 9, 2023
ನ್ಯೂಜಿಲ್ಯಾಂಡ್ ತಂಡ ಲಂಕಾ ವಿರುದ್ದದ ಗೆಲುವಿನೊಂದಿಗೆ ಲೀಗ್ ಹಂತದಲ್ಲಿ ಒಟ್ಟು 10 ಅಂಕಗಳನ್ನು ಸಂಪಾದಿಸಿಕೊಂಡಿದೆ. ಹೀಗಾಗಿ ಪ್ರಸ್ತುತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವ ಕಪ್ನ ಲೀಗ್ ಹಂತದಲ್ಲಿ ಇನ್ನೂ ನಾಲ್ಕು ಪಂದ್ಯಗಳು ಬಾಕಿ ಉಳಿದಿವೆ. ಕೊನೇ ಪಂದ್ಯದಲ್ಲಿ ಭಾರತ ಹಾಗೂ ನೆದರ್ಲ್ಯಾಂಡ್ಸ್ ತಂಡ ಆಡಲಿದೆ. ಆ ಬಳಿಕ ನಡೆಯುವ ಮೊದಲ ಸೆಮಿಫೈನಲ್ನಲ್ಲಿ ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳು ಕಣಕ್ಕಿಳಿಯುವುದು ಬಹುತೇಕ ನಿಶ್ಚಿತ ಎನಿಸಿಕೊಂಡಿದೆ.
ಇದೇ ವೇಳೆ ಶ್ರೀಲಂಕಾ ತಂಡ ಹಾಲಿ ವಿಶ್ವ ಕಪ್ನಲ್ಲಿ ತನ್ನ ಅಭಿಯಾನ ಮುಗಿಸಿತು. ಆಡಿರುವ 9 ಪಂದ್ಯಗಳಲ್ಲಿ ಕೇವಲ 2 ಗೆಲುವ ಕಂಡಿದೆ. ಹೀಗಾಗಿ ನಾಲ್ಕು ಅಂಕಗಳನ್ನಷ್ಟೇ ಸಂಪಾದಿಸಿದೆ. 1996ರ ವಿಶ್ವ ಕಪ್ ಚಾಂಪಿಯನ್ ತಂಡ ಪ್ರಸ್ತುತ ಅಂಕಪಟ್ಟಿಯಲ್ಲಿ ನೆದರ್ಲ್ಯಾಂಡ್ಸ್ಗಿಂತ ಮೇಲೆ 9ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ICC World Cup 2023 : ಗೆಲುವಿನೊಂದಿಗೆ ಅಭಿಯಾನ ಮುಗಿಸುವುದೇ ಅಫಘಾನಿಸ್ತಾನ?
ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ 46.4 ಓವರ್ಗಳಲ್ಲಿ 171 ರನ್ಗಳಿಗೆ ಆಲ್ಔಟ್ ಆಯಿತು. ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಇನ್ನೂ 160 ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು 172 ರನ್ ಬಾರಿಸಿ ಗೆಲುವು ಸಾಧಿಸಿತು.
ಸಾಧಾರಣ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡ 25 ಓವರ್ಗಳ ಒಳಗೆ ಆಟ ಮುಗಿಸಿ ಗರಿಷ್ಠ ರನ್ರೇಟ್ನೊಂದಿಗೆ ಆಡಿತು. ಪೂರಕವಾಗಿ ಮೊದಲ ವಿಕೆಟ್ಗೆ 86 ರನ್ ಬಾರಿಸಿತು. ಆರಂಭಿಕ ಬ್ಯಾಟರ್ಗಳಾದ ಡೆವೋನ್ ಕಾನ್ವೆ (45) ಹಾಗೂ ರಚಿನ್ ರವೀಂದ್ರ (42) ಉತ್ತಮ ಆರಂಭ ತಂದುಕೊಟ್ಟರು. ಆದರೆ, ಈ ಇಬ್ಬರು ಬ್ಯಾಟಿಂಗ್ನಲ್ಲಿ ಇನ್ನಷ್ಟು ಬಿರುಸು ತರಲು ಹೋಗಿ ಔಟಾದರು. ಬಳಿಕ ಕೇನ್ ವಿಲಿಮ್ಸನ್ 14 ರನ್ ಕೊಡುಗೆ ಕೊಟ್ಟರು. ಡ್ಯಾರಿಲ್ ಮಿಚೆಲ್ ಗುರಿಯನ್ನು ಬೇಗ ಮುಟ್ಟುವ ಉದ್ದೇಶದಿಂದ 31 ಎಸೆತಕ್ಕೆ 43 ರನ್ ಬಾರಿಸಿದರು. ಮಾರ್ಕ್ ಚಾಪ್ಮನ್ ಅನಗತ್ಯ ರನ್ಔಟ್ಗೆ ಬಲಿಯಾದರು. ಕೊನೆಯಲ್ಲಿ ಗ್ಲೆನ್ ಫಿಲಿಪ್ಸ್ 17 ರನ್ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.
ಲಂಕಾದ ಬ್ಯಾಟಿಂಗ್ ವೈಫಲ್ಯ
ಲಂಕಾ ತಂಡ ಹಾಲಿ ವಿಶ್ವ ಕಪ್ನ ಕೊನೇ ಪಂದ್ಯದಲ್ಲೂ ದುರ್ಬಲ ಬ್ಯಾಟಿಂಗ್ ಪ್ರದರ್ಶನ ನೀಡಿತು. 32 ರನ್ಗಳಿಗೆ ಮೊದಲ 3 ವಿಕೆಟ್ ನಷ್ಟಮಾಡಿಕೊಂಡಿತು. ಪಾಥುಮ್ ನಿಸ್ಸಾಂಕ 2 ರನ್ಗೆ ಔಟಾದರೆ, ಕುಸಾಲ್ ಮೆಂಡಿಸ್ 6 ಮತ್ತು ಸದೀರಾ ಸಮರವಿಕ್ರಮ 1 ರನ್ ಬಾರಿಸಿ ಪೆವಿಲಿಯನ್ ಹಾದಿ ಹಿಡಿದರು. ಆದರೆ, ಮತ್ತೊಬ್ಬ ಆರಂಭಿಕ ಬ್ಯಾಟರ್ ಕುಸಾಲ್ ಪೆರೆರಾ 28 ಎಸೆತಗಳಲ್ಲಿ 51 ರನ್ ಬಾರಿಸಿದರು.
ಲಂಕಾ ಮಧ್ಯಮ ಕ್ರಮಾಂಕದ ಬ್ಯಾಟರ್ಗಳೂ ತಂಡಕ್ಕೆ ಹೆಚ್ಚು ನೆರವಾಗಲಿಲ್ಲ. ಮ್ಯಾಥ್ಯೂಸ್ 16 ರನ್ ಬಾರಿಸಿದರೆ, ಧನಂಜಯ ಡಿಸಿಲ್ವಾ 19 ರನ್ಗೆ ಔಟಾದರು. ಚಾಮಿಕಾ ಕರುಣಾರತ್ನೆ 6 ರನ್ಗೆ ಸೀಮಿತಗೊಂಡರು. ಆದರೆ, ಸ್ಪಿನ್ನರ್ ಮಹೀಶ್ ತೀಕ್ಷಣಾ 91 ಎಸೆತಗಳನ್ನು ಎದುರಿಸಿ 38 ರನ್ ಬಾರಿಸಿದರು. ಕೊನೆಯಲ್ಲಿ ಮಧು ಶಂಕಾ 19 ರನ್ ಕೊಡುಗೆ ಕೊಟ್ಟರು. ಈ ಜೋಡಿ 10ನೇ ವಿಕೆಟ್ಗೆ 43 ರನ್ ಬಾರಿಸಿದ ಕಾರಣ ತಂಡಕ್ಕೆ ಸ್ವಲ್ಪ ನೆರವಾಯಿತು.
ಕಿವೀಸ್ ಪರ ಬೌಲ್ಟ್ 3, ಫರ್ಗ್ಯೂಸನ್, ಸ್ಯಾಂಟ್ನರ್ ಹಾಗೂ ರಚಿನ್ ರವೀಂದ್ರ ತಲಾ ಎರಡು ವಿಕೆಟ್ ಉರುಳಿಸಿದರು.