ಅಹಮದಾಬಾದ್: 13ನೇ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಧಿಕೃತ ಚಾಲನೆ ಲಭಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್((England vs New Zealand, 1st Match) ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದಿದೆ. ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಗಾಯದಿಂದ ಚೇತರಿಕೆ ಕಾಣದ ವಿಲಿಯಮ್ಸನ್ ಈ ಪಂದ್ಯದಿಂದ ಹೊರಗುಳಿದರು. ಹೀಗಾಗಿ ಟಾಮ್ ಲ್ಯಾಥಮ್ ನಾಯಕತ್ವ ವಹಿಸಿಕೊಂಡರು. ನಿವೃತ್ತಿ ವಾಪಸ್ ಪಡೆದು ಬಂದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಕೂಡ ಗಾಯದಿಂದಾಗಿ ಮೊದಲ ಪಂದ್ಯದಿಂದ ಹೊರಗುಳಿದರು.
ಇನ್ನು ದೇಶದ ಉದ್ದಗಲಕ್ಕೂ ಒಂದುವರೆ ತಿಂಗಳು ಕ್ರಿಕೆಟ್ ತನ್ನ ಪ್ರಭೆಯನ್ನು ಬೀರಲಿದೆ. ವಿಶ್ವ ಕ್ರಿಕೆಟ್‌ನ ಸಾಮ್ರಾಟನಾಗಲು 10 ತಂಡಗಳು ಬ್ಯಾಟ್-ಬಾಲ್ ಹಿಡಿದು ಹೋರಾಡಲಿವೆ. ಇದು ಮೊದಲ ಬಾರಿಗೆ ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಾಗಿದೆ. 44 ವರ್ಷಗಳ ಬಳಿಕ ವಿಶ್ವಕಪ್ ಎತ್ತಿರುವ ಹಾಲಿ ಚಾಂಪಿಯನ್ ಈ ಬಾರಿಯೂ ಕಪ್ ಉಳಿಸಿಕೊಂಡಿತೇ ಎನ್ನುವುದು ಕೌತುಕ.
ಪಿಚ್ ರಿಪೋರ್ಟ್
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಸಂಪೂರ್ಣ ಬ್ಯಾಟಿಂಗ್ ಸ್ನೇಹಿಯಾಗಿದೆ. ಹೀಗಾಗಿ ದೊಡ್ಡ ಮತ್ತವನ್ನು ಇಲ್ಲಿ ನಿರೀಕ್ಷೆ ಮಾಡಬಹುದು. ಉಭಯ ತಂಡಗಳಲ್ಲಿಯೂ ಸಮರ್ಥ ಆಟಗಾರರು ನೆಚ್ಚಿಕೊಂಡಿದ್ದಾರೆ. ಸ್ಲೋ ವೇಗಿಗಳಿಗೆ ಈ ಪಿಚ್ ಹೆಚ್ಚಿನ ನೆರವು ನೀಡುತ್ತದೆ. ಸ್ಪಿನ್ ಬೌಲಿಂಗ್ ಅಷ್ಟರ ಮಟ್ಟಿಗೆ ಇಲ್ಲಿ ಯಶಸ್ಸು ಕಾಣುವುದು ಕಷ್ಟ.
ವಿಶ್ವಕಪ್ ಮುಖಾಮುಖಿ
12 ಆವೃತ್ತಿಯ ವಿಶ್ವಕಪ್ ಇತಿಹಾಸದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ 10 ಬಾರಿ ಮುಖಾಮುಖಿಯಾಗಿವೆ. ಇತ್ತಂಡಗಳು ತಲಾ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಿವೀಸ್ ಮತ್ತು ಇಂಗ್ಲೆಂಡ್ ತಲಾ ಎರಡು ಪಂದ್ಯಗಳನ್ನು ಆಡಿದ್ದರು. ಇಂಗ್ಲೆಂಡ್ 1 ಪಂದ್ಯ ಗೆದ್ದರೆ, ನ್ಯೂಜಿಲ್ಯಾಂಡ್ 2 ಪಂದ್ಯಗಳನ್ನು ಗೆದ್ದಿದೆ. ಒಟ್ಟಾರೆ ಏಕದಿನ ಕ್ರಿಕೆಟ್ನಲ್ಲಿ ಉಭಯ ತಂಡಗಳು 95 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಇಂಗ್ಲೆಂಡ್ 45, ಕಿವೀಸ್ 44 ಗೆಲುವು ಕಂಡಿದೆ. 4 ಪಂದ್ಯಗಳು ಫಲಿತಾಂಶ ಕಂಡಿಲ್ಲ,
ಹವಾಮಾನ ವರದಿ
ವಿಶ್ವಕಪ್ ಅಭ್ಯಾಸ ಪಂದ್ಯಕ್ಕೆ ಮಳೆಯ ಭೀತಿ ಕಾಡಿತ್ತು. ಭಾರತದ ಎರಡೂ ಪಂದ್ಯಗಳು ಮಳೆಯಿಂದ ರದ್ದುಗೊಂಡಿತ್ತು. ಆದರೆ ಲೀಗ್ನ ಉದ್ಘಾಟನ ಪಂದ್ಯಕ್ಕೆ ಮಳೆಯ ಯಾವುದೇ ಕಾಟ ಇರದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಪಂದ್ಯವನ್ನು ಅಭಿಮಾನಿಗಳು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು. ಮಧ್ಯಾಹ್ನ ಪಂದ್ಯ ಆರಂಭವಾಗುವ ಕಾರಣ ಇಲ್ಲಿ ಬಿಸಿಲ ಧಗೆ ಹೆಚ್ಚಾಗಿ ಇರಲಿದೆ.
ಇದನ್ನೂ ಓದಿ ICC World Cup 2023: ಭಾರತವೇ ವಿಶ್ವಕಪ್ ಗೆಲ್ಲುವ ಹಾಟ್ ಫೇವರಿಟ್; ಪಾಕ್ ಮಾಜಿ ವೇಗಿ ವಿಶ್ವಾಸ
ಇಂಗ್ಲೆಂಡ್ ತಂಡದ ಪ್ಲಸ್ ಪಾಯಿಂಟ್: ಯಾವಾಗಲೂ ಸ್ಥಿರವಾಗಿ ಬ್ಯಾಟ್ ಬೀಸುವ ಡೇವಿಡ್ ಮಲಾನ್ ಏಕದಿನದ ಅತ್ಯುನ್ನತ ಶ್ರೇಯಾಂಕದ ಬ್ಯಾಟರ್ ಆಗಿದ್ದಾರೆ. ನಾಯಕ ಜಾಸ್ ಬಟ್ಲರ್, ಬೇರ್ಸ್ಟೋ, ಸ್ಟೋಕ್ಸ್ ಮತ್ತು ಮೊಯಿನ್ ಅಲಿ ಅವರನ್ನೊಳಗೊಂಡ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ.
ಮೈನಸ್ ಪಾಯಿಂಟ್: ಇಂಗ್ಲೆಂಡ್ಗೆ ಇರುವ ಮೈನಸ್ ಪಾಯಿಂಟ್ ಎಂದರೆ ಅದು ಜೋಫ್ರಾ ಆರ್ಚರ್ ಅವರ ಅಲಭ್ಯತೆ. ಕಳೆದ ಬಾರಿ ವಿಶ್ವಕಪ್ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಫೈನಲ್ ಪಂದ್ಯದ ಸೂಪರ್ ಓವರ್ನಲ್ಲಿ ಅಮೋಘ ಪ್ರದರ್ಶನ ನೀಡಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.
ತಂಡಗಳು
ಇಂಗ್ಲೆಂಡ್: ಜಾಸ್ ಬಟ್ಲರ್ (ನಾಯಕ),ಡೇವಿಡ್ ಮಾಲನ್, ಜಾನಿ ಬೆರ್ಸ್ಟೋ, ಜೋ ರೂಟ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್ ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್.
ನ್ಯೂಜಿಲ್ಯಾಂಡ್: ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್, , ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್, ಜೇಮ್ಸ್ ನೀಶಮ್.