ಅಹಮದಾಬಾದ್: ಡವೋನ್ ಕಾನ್ವೆ (ಅಜೇಯ 152 ರನ್) ಹಾಗೂ ಯುವ ಆಲ್ರೌಂಡರ್ ರಚಿನ್ ರವೀಂದ್ರ (ಅಜೇಯ 123) ಜೋಡಿಯ ದಾಖಲೆಯ 273 ರನ್ಗಳ ಜತೆಯಾಟದಿಂದ ಮಿಂಚಿದ ನ್ಯೂಜಿಲ್ಯಾಂಡ್ ತಂಡ ವಿಶ್ವ ಕಪ್ 2023ರ ಮೊದಲ (ICC World Cup 2023) ಪಂದ್ಯದಲ್ಲಿ ಕಳೆದ ಆವೃತ್ತಿಯ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 9 ವಿಕೆಟ್ಗಳ ಸುಲಭ ವಿಜಯ ದಾಖಲಿಸಿದೆ. ಈ ಮೂಲಕ ಕಳೆದ ಆವೃತ್ತಿಯ ಫೈನಲ್ ಪಂದ್ಯದ ವಿವಾದಾತ್ಮಕ ಸೋಲಿಗೆ ಪ್ರತ್ಯುತ್ತ ಕೊಟ್ಟಿದೆ. ಈ ಪಂದ್ಯದೊಂದಿಗೆ ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವ ಕಪ್ಗೆ ಭರ್ಜರಿ ಆರಂಭ ದೊರಕಿದೆ. ಜತೆಗೆ ದೊಡ್ಡ ಮೊತ್ತದ ಸ್ಕೋರ್ಗಳ ಪಂದ್ಯಗಳು ನಡೆಯುವ ಎಲ್ಲ ಸೂಚನೆಗಳು ಲಭಿಸಿವೆ.
ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಆಯೋಜನೆಗೊಂಡಿದ್ದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಎದುರಾಳಿ ಇಂಗ್ಲೆಂಡ್ ತಂಡವನ್ನು 9 ವಿಕೆಟ್ಗೆ 282 ರನ್ಗಳಿಗೆ ಕಟ್ಟಿ ಹಾಕಿತು. ಸ್ಪರ್ಧಾತ್ಮಕ ಮೊತ್ತಕ್ಕೆ ಪ್ರತಿಯಾಗಿ ಆಡಿದ ನ್ಯೂಜಿಲ್ಯಾಂಡ್ ಬಳಗ ಇನ್ನೂ 82 ಎಸೆತಗಳು ಬಾಕಿ ಇರುವಂತೆಯೇ ಕೇವಲ ಒಂದು ವಿಕೆಟ್ ಕಳೆದುಕೊಂಡು 283 ರನ್ ಬಾರಿಸಿ ಜಯ ಶಾಲಿಯಾಯಿತು.
Two quickfire hundreds from Rachin Ravindra and Devon Conway helped New Zealand to a comfortable win in the #CWC23 opener 👊#ENGvNZ 📝: https://t.co/ROYLnOtSh0 pic.twitter.com/d9iBySMrR5
— ICC (@ICC) October 5, 2023
ದ್ವಿಪಕ್ಷೀಯ ಸರಣಿಯಲ್ಲಿ ಸದಾ ದುರ್ಬಲ ತಂಡದಂತೆ ತೋರುವ ನ್ಯೂಜಿಲ್ಯಾಂಡ್ ತಂಡ ಮತ್ತೊಮ್ಮೆ ವಿಶ್ವ ಕಪ್ಗಳಲ್ಲಿ ತಮ್ಮ ಭರ್ಜರಿ ಪ್ರದರ್ಶನದ ಸುಳಿವನ್ನು ಕೊಟ್ಟಿತು.
ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿ ನ್ಯೂಜಿಲ್ಯಾಂಡ್ ತಂಡ 10 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ವಿಲ್ ಯಂಗ್ ಖಾತೆ ತೆರೆಯುವ ಮೊದಲೇ ಔಟಾಗಿ ಪೆವಿಲಿಯನ್ಗೆ ಮರಳಿದರು. ಈ ವೇಳೆ ಇಂಗ್ಲೆಂಡ್ ತಂಡ ತನ್ನ ಮೊತ್ತವನ್ನು ಕಾಪಾಡಿಕೊಳ್ಳಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಆ ಬಳಿಕ ಬ್ಯಾಟಿಂಗ್ ವೈಭವ ತೋರಿಸಿದ ಕಾನ್ವೆ ಹಾಗೂ ರಚಿನ್ ರವೀಂದ್ರ ತಂಡದ ಗೆಲುವನ್ನು ಸುಲಭವಾಗಿಸಿದರು. ಇಂಗ್ಲೆಂಡ್ ಬೌಲರ್ಗಳನ್ನು ಬೆಂಡೆತ್ತಿದ ಈ ಜೋಡಿ ಬಿರುಸಿನ ಬ್ಯಾಟಿಂಗ್ ನಡೆಸಿತು.
ದಾಖಲೆಯ ಬ್ಯಾಟಿಂಗ್
ಪುರುಷರ ಏಕದಿನ ವಿಶ್ವಕಪ್ನ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ನ ಬ್ಯಾಟಿಂಗ್ ಜೋಡಿ ಡೆವೊನ್ ಕಾನ್ವೇ ಮತ್ತು ರಚಿನ್ ರವೀಂದ್ರ ಅದ್ಭುತ ಪ್ರದರ್ಶನ ನೀಡಿದರು. ಅವರಿಬ್ಬರೂ ಹಾಲಿ ಆವೃತ್ತಿಯ ವಿಶ್ವ ಕಪ್ನ ಮೊದಲ ಮತ್ತು ಎರಡನೇ ಶತಕಗಳನ್ನು ಬಾರಿಸಿದರು. ಕಾನ್ವೇ ಕೇವಲ 83 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಕಿವೀಸ್ ತಂಡಕ್ಕೆ 283 ರನ್ಗಳ ಬೆನ್ನಟ್ಟುವಲ್ಲಿ ನೆರವಾದರು. ಇದು ಏಕದಿನ ಸ್ವರೂಪದಲ್ಲಿ ಎಡಗೈ ಬ್ಯಾಟ್ಸ್ಮನ್ ಬಾರಿಸಿ ಐದನೇ ಶತಕವಾಗಿದ್ದರೆ, ರವೀಂದ್ರ 31 ನೇ ಪಂದ್ಯದಲ್ಲಿ ನಾಲ್ಕನೇ ಬಾರಿ ಮೂರಂಕಿ ಮೊತ್ತವನ್ನು ತಲುಪಿದರು. ಅವರಿಬ್ಬರು ಚೊಚ್ಚಲ ವಿಶ್ವಕಪ್ ಪಂದ್ಯದಲ್ಲಿ ಶತಕ ಬಾರಿಸಿದ ಬ್ಯಾಟರ್ಗಳ ಎಲೈಟ್ ಪಟ್ಟಿಗೆ ಸೇರಿದರು.
ಚೊಚ್ಚಲ ವಿಶ್ವಕಪ್ ಪಂದ್ಯದಲ್ಲಿ ಅವರ ಗಮನಾರ್ಹ ಶತಕವು ಈ ಶ್ರೇಷ್ಠ ಸಾಧನೆಯನ್ನು ಸಾಧಿಸಿದ 15 ಮತ್ತು 16 ನೇ ಬ್ಯಾಟ್ಗಳು ಎಂಬ ಖ್ಯಾತಿಯನ್ನು ಪಡೆದುಕೊಂಡಿತು. ಕಾನ್ವೇ ಇನ್ನಿಂಗ್ಸ್ ನಲ್ಲಿ 13 ಬೌಂಡರಿಗಳು ಮತ್ತು ಎರಡು ಶಕ್ತಿಯುತ ಸಿಕ್ಸರ್ಗಳಿದ್ದವು.
ಇಂಗ್ಲೆಂಡ್ ಬ್ಯಾಟಿಂಗ್ ವೈಫಲ್ಯ
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಮತ್ತೊಂದು ಬಾರಿ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಬಜ್ ಬಾಲ್ ತಂತ್ರವನ್ನು ಮತ್ತೊಂದು ಬಾರಿ ಪ್ರದರ್ಶಿಸಲು ಮುಂದಾದ ತಂಡ ಬ್ಯಾಟಿಂಗ್ ಪಿಚ್ನಲ್ಲಿ ದೊಡ್ಡ ಮೊತ್ತ ಪೇರಿಸಲು ವಿಫಲಗೊಂಡಿತು. ಜೋ ರೂಟ್ 77 ಹಾಗೂ ಜೋಸ್ ಬಟ್ಲರ್ 43 ರನ್ ಬಾರಿಸಿದ್ದು ಹೊರತುಪಡಿಸಿದರೆ ಇತರರಿಂದ ಹೆಚ್ಚಿನ ನೆರವು ದೊರಕಿಲ್ಲ. ತಂಡದ ಎಲ್ಲರೂ ಎರಡಂಕಿ ಮೊತ್ತವನ್ನು ದಾಟಿದಿ ವಿಶೇಷ ದಾಖಲೆ ಮಾಡಿದ ಹೊರತಾಗಿಯೂ 300 ರನ್ಗಳ ಗಡಿ ದಾಟಲು ಶಕ್ತವಾಗಲಿಲ್ಲ.
ಇದನ್ನೂ ಓದಿ : ICC World Cup 2023 : ರೆಕಾರ್ಡ್ ಅಲರ್ಟ್; ವಿಶ್ವ ಕಪ್ನಲ್ಲಿ ಹೊಸ ದಾಖಲೆ ಬರೆದ ಇಂಗ್ಲೆಂಡ್ ತಂಡ
ನ್ಯೂಜಿಲ್ಯಾಂಡ್ ಪರ ಮ್ಯಾಟ್ ಹೆನ್ರಿ 3 ವಿಕೆಟ್ ಪಡೆದರೆ, ಮಿಚೆಲ್ ಸ್ಯಾಂಟ್ನರ್ 2 ವಿಕೆಟ್ ಉರುಳಿಸಿದರು. ಗ್ಲೆನ್ ಪಿಲಿಪ್ಸ್ 2 ಹಾಗೂ ರಚಿನ್ ರವೀಂದ್ರ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್: 50 ಓವರ್ಗಳಲ್ಲಿ 9 ವಿಕೆಟ್ಗೆ 282 (ಜೋ ರೂಟ್ 77, ಜೋಸ್ ಬಟ್ಲರ್ 43, ಜಾನಿ ಬೈರ್ಸ್ಟೋವ್ 33, ಹ್ಯಾರಿ ಬ್ರೂಕ್ 25, ಲಿಯಾಮ್ ಲಿವಿಂಗ್ಸ್ಟನ್ 20, ಸ್ಯಾಮ್ ಕರ್ರನ್ 14, ಡೇವಿಡ್ ಮಲಾನ್ 14, ಕ್ರಿಸ್ ವೋಕ್ಸ್ 11, ಅದಿಲ್ ರಶೀದ್ 15. ಮಾರ್ಕ್ ವುಡ್ 6) ಬೌಲಿಂಗ್ (ಮ್ಯಾಟ್ ಹೆನ್ರಿ 43ಕ್ಕೆ3, ಸ್ಯಾಂಟ್ನರ್ 37ಕ್ಕೆ2, ಗ್ಲೆನ್ ಪಿಲಿಪ್ಸ್ 17ಕ್ಕೆ2, ಟ್ರೆಂಟ್ ಬೌಲ್ಟ್ 48ಕ್ಕೆ1).
ನ್ಯೂಜಿಲ್ಯಾಂಡ್ : 36.2 ಓವರ್ಗಳಲ್ಲಿ 1 ವಿಕೆಟ್ಗೆ 283 (ಡೇವೋನ್ ಕಾನ್ವೆ 152*, ರಚಿನ್ ರವೀಂದ್ರ 123*, ) ಬೌಲಿಂಗ್ (ಸ್ಯಾಮ್ ಕರ್ರನ್ 47ಕ್ಕ1)