Site icon Vistara News

ICC World Cup 2023 : ಮೊದಲ ಪಂದ್ಯದಲ್ಲಿಯೇ ವಿಶೇಷ ದಾಖಲೆ ಬರೆದ ನ್ಯೂಜಿಲ್ಯಾಂಡ್​ನ ರಚಿನ್​, ಕಾನ್ವೆ

Devon canway rachin ravindra

ಅಹಮದಾಬಾದ್​: ಪುರುಷರ ಏಕದಿನ ವಿಶ್ವಕಪ್​​ನ (ICC World Cup 2023) ಆರಂಭಿಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ನ ಬ್ಯಾಟಿಂಗ್ ಜೋಡಿ ಡೆವೊನ್ ಕಾನ್ವೇ ಮತ್ತು ರಚಿನ್ ರವೀಂದ್ರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕ್ರಮವಾಗಿ 2023ರ ಆವೃತ್ತಿಯ ಮೊದಲ ಮತ್ತು ಎರಡನೇ ಶತಕಗಳನ್ನು ಬಾರಿಸಿದರು. ಕಾನ್ವೇ ಕೇವಲ 83 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಕಿವೀಸ್ ತಂಡಕ್ಕೆ 283 ರನ್​ಗಳ ಗುರಿ ಬೆನ್ನಟ್ಟುವಲ್ಲಿ ಯಶಸ್ವಿಯಾದರು. ಅವರು 121 ಎಸೆತಗಳಲ್ಲಿ 152 ರನ್ ಬಾರಿಸಿ ಅಜೇಯರಾಗಿ ಉಳಿದರು. ಅಂತೆಯೇ ರಚಿನ್​ ರವೀಂದ್ರ 96 ಎಸೆತಗಳ 123 ರನ್​ಗಳ ನ್ನು ಬಾರಿಸಿ ಮಿಂಚಿದರು. ಈ ಮೂಲಕ ಅವರಿಬ್ಬರು ವಿಶ್ವ ಕಪ್​ನ ತಮ್ಮ ಚೊಚ್ಚಲ ಪಂದ್ಯಗಳಲ್ಲಿ ಶತಕ ಬಾರಿಸಿದ ಎಲೈಟ್​ ಆಟಗಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಇದು ಏಕ ದಿನ ಕ್ರಿಕೆಟ್​ ಸ್ವರೂಪದಲ್ಲಿ ಎಡಗೈ ಬ್ಯಾಟರ್ ಕಾನ್ವೆ ಅವರ ಐದನೇ ಶತಕವಾಗಿದ್ದರೆ, ರವೀಂದ್ರ 31 ಪಂದ್ಯಗಳಲ್ಲಿ ನಾಲ್ಕನೇ ಬಾರಿ ಮೂರಂಕಿ ಮೊತ್ತ ದಾಟಿದ್ದಾರೆ. ಈ ಜೋಡಿಯು ಇಂಗ್ಲೆಂಡ್ ತಂಡ ನೀಡಿದ್ದ 283 ರನ್​ಗಳ ಸವಾಲನ್ನು ಮೀರುವಲ್ಲಿ ಎರಡನೇ ವಿಕೆಟ್​ಗೆ 273 ರನ್​ಗಳ ಜತೆಯಾಟವನ್ನು ನೀಡಿದೆ. ಈ ಇಬ್ಬರು ಆಟಗಾರರು ಚೊಚ್ಚಲ ವಿಶ್ವಕಪ್ ಪಂದ್ಯದಲ್ಲಿ ಶತಕದ ಸಾಧನೆ ಮಾಡಿದ ಕ್ರಮವಾಗಿ 15 ಮತ್ತು 16 ನೇ ಬ್ಯಾಟರ್​ಗಳು ಎನಿಸಿಕೊಂಡರು. ಕಾನ್ವೆ ಅವರ 152 ರನ್​ಗಳಲ್ಲಿ 19 ಫೋರ್ ಹಾಗೂ 3 ಸಿಕ್ಸರ್ ಸೇರಿಕೊಂಡಿದ್ದರೆ, ರಚಿನ್ ಅವರ 123 ರನ್​ಗಳಲ್ಲಿ 11 ಫೋರ್​ಗಳು ಹಾಗೂ 5 ಅಮೋಘ ಸಿಕ್ಸರ್​ಗಳು ಸೇರಿಕೊಂಡಿವೆ.

ಇದನ್ನೂ ಓದಿ : ICC World Cup 2023 : ಮೊದಲ ಪಂದ್ಯದಲ್ಲಿಯೇ ಅಬ್ಬರಿಸಿದ ನ್ಯೂಜಿಲ್ಯಾಂಡ್​​; ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ

ಅಮೀಸ್​ ಮೊದಲ ಶತಕದಾರಿ

ಇಂಗ್ಲೆಂಡ್​​ನ ಡೆನ್ನಿಸ್ ಅಮಿಸ್ ಈ ಸಾಧಕರ ಪಟ್ಟಿಯಲ್ಲಿ ಚೊಚ್ಚಲ ವಿಶ್ವಕಪ್​ನಲ್ಲಿ ಶತಕ ಗಳಿಸಿದ ಮೊದಲ ಬ್ಯಾಟರ್​ ಆಗಿದ್ದಾರೆ. 1975ರಲ್ಲಿ ಭಾರತ ವಿರುದ್ಧದ ಉದ್ಘಾಟನಾ ವಿಶ್ವಕಪ್ ಪಂದ್ಯದಲ್ಲಿ ಅಮಿಸ್ ಈ ಮೈಲಿಗಲ್ಲನ್ನು ಸಾಧಿಸಿ ಐತಿಹಾಸಿಕ ಸಾಧನೆ ಮಾಡಿದ್ದರು. ಜಿಂಬಾಬ್ವೆಯ ಆಂಡಿ ಫ್ಲವರ್ ತಮ್ಮ ಚೊಚ್ಚಲ ವಿಶ್ವಕಪ್​​ ಶತಕವನ್ನು ಗಳಿಸುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ದಾಖಲು ಮಾಡಿದ್ದರು. 1992 ರಲ್ಲಿ ಏಕದಿನ ಚೊಚ್ಚಲ ಪಂದ್ಯದಲ್ಲಿ ಈ ಗಮನಾರ್ಹ ಸಾಧನೆಯನ್ನು ಮಾಡಿದ್ದರು.

ಚೊಚ್ಚಲ ವಿಶ್ವ ಕಪ್​ನಲ್ಲಿ ಶತಕ ಬಾರಿಸಿದ ಸಾಧಕರ ಪಟ್ಟಿ ಇಂತಿದೆ

ನ್ಯೂಜಿಲ್ಯಾಂಡ್​ಗೆ ಜಯ

ಡವೋನ್ ಕಾನ್ವೆ (ಅಜೇಯ 152 ರನ್) ಹಾಗೂ ಯುವ ಆಲ್​ರೌಂಡರ್ ರಚಿನ್ ರವೀಂದ್ರ (ಅಜೇಯ 123) ಜೋಡಿಯ ದಾಖಲೆಯ 273 ರನ್​ಗಳ ಜತೆಯಾಟದಿಂದ ಮಿಂಚಿದ ನ್ಯೂಜಿಲ್ಯಾಂಡ್​ ತಂಡ ವಿಶ್ವ ಕಪ್​ 2023ರ ಮೊದಲ (ICC World Cup 2023) ಪಂದ್ಯದಲ್ಲಿ ಕಳೆದ ಆವೃತ್ತಿಯ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 9 ವಿಕೆಟ್​ಗಳ ಸುಲಭ ವಿಜಯ ದಾಖಲಿಸಿದೆ. ಈ ಮೂಲಕ ಕಳೆದ ಆವೃತ್ತಿಯ ಫೈನಲ್ ಪಂದ್ಯದ ವಿವಾದಾತ್ಮಕ ಸೋಲಿಗೆ ಪ್ರತ್ಯುತ್ತ ಕೊಟ್ಟಿದೆ. ಈ ಪಂದ್ಯದೊಂದಿಗೆ ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವ ಕಪ್​ಗೆ ಭರ್ಜರಿ ಆರಂಭ ದೊರಕಿದೆ. ಜತೆಗೆ ದೊಡ್ಡ ಮೊತ್ತದ ಸ್ಕೋರ್​ಗಳ ಪಂದ್ಯಗಳು ನಡೆಯುವ ಎಲ್ಲ ಸೂಚನೆಗಳು ಲಭಿಸಿವೆ.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಆಯೋಜನೆಗೊಂಡಿದ್ದ ಪಂದ್ಯದಲ್ಲಿ ಟಾಸ್​ ಗೆದ್ದ ನ್ಯೂಜಿಲ್ಯಾಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಎದುರಾಳಿ ಇಂಗ್ಲೆಂಡ್ ತಂಡವನ್ನು 9 ವಿಕೆಟ್​ಗೆ 282 ರನ್​ಗಳಿಗೆ ಕಟ್ಟಿ ಹಾಕಿತು. ಸ್ಪರ್ಧಾತ್ಮಕ ಮೊತ್ತಕ್ಕೆ ಪ್ರತಿಯಾಗಿ ಆಡಿದ ನ್ಯೂಜಿಲ್ಯಾಂಡ್​ ಬಳಗ ಇನ್ನೂ 82 ಎಸೆತಗಳು ಬಾಕಿ ಇರುವಂತೆಯೇ ಕೇವಲ ಒಂದು ವಿಕೆಟ್​ ಕಳೆದುಕೊಂಡು 283 ರನ್ ಬಾರಿಸಿ ಜಯ ಶಾಲಿಯಾಯಿತು.

Exit mobile version