ಬೆಂಗಳೂರು: 2023 ರ ವಿಶ್ವಕಪ್ನಲ್ಲಿ ನ್ಯೂಜಿಲ್ಯಾಂಡ್ನ ಉದಯೋನ್ಮುಖ ತಾರೆ ರಚಿನ್ ರವೀಂದ್ರ (Rachin Ravindra) ಬೆಂಗಳೂರಿನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಸ್ಥಳೀಯ ಹುಡುಗ ಎಂದು ಕರೆಸಿಕೊಂಡಿರುವ ಅವರು (ಅವರ ತಂದೆ ಬೆಂಗಳೂರಿನವರು) ಸ್ಥಳೀಯ ಪ್ರೇಕ್ಷಕರ ಬೆಂಬಲವನ್ನು ಪಡೆದರು. ಇದೇ ವೇಳೆ ರವೀಂದ್ರ ವಿಶ್ವಕಪ್ ಚೊಚ್ಚಲ ಆವೃತ್ತಿಯಲ್ಲೇ ಅತಿ ಹೆಚ್ಚು ರನ್ ಗಳಿಸಿದ ಹೊಸ ದಾಖಲೆಯನ್ನು ಸೃಷ್ಟಿಸಿದರು.
2019ರ ವಿಶ್ವಕಪ್ನಲ್ಲಿ ಇಂಗ್ಲೆಂಡ್ ಪರ ಚೊಚ್ಚಲ ಆವೃತ್ತಿಯಲ್ಲೇ 532 ರನ್ ಗಳಿಸಿದ್ದ ಇಂಗ್ಲೆಂಡ್ನ ಜಾನಿ ಬೈರ್ಸ್ಟೋವ್ ಅವರ ದಾಖಲೆಯನ್ನು ರವೀಂದ್ರ ಮುರಿದರು. ತಮ್ಮ ಇನ್ನಿಂಗ್ಸ್ ಉದ್ದಕ್ಕೂ, ರವೀಂದ್ರ ತಮ್ಮ ಹೆಸರನ್ನು ದಾಖಲೆ ಪುಸ್ತಕಗಳಲ್ಲಿ ಕೆತ್ತಿದ್ದಲ್ಲದೆ, ಪ್ರಸ್ತುತ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದರು. ಪ್ರಸ್ತುತ ಕ್ವಿಂಟನ್ ಡಿ ಕಾಕ್ ಮತ್ತು ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ರವೀಂದ್ರ ಅಗ್ರಸ್ಥಾನಕ್ಕೇರಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ಭಾರತ ಎರಡೂ ಪಂದ್ಯಾವಳಿಯಲ್ಲಿ ತಮ್ಮ ಅಂತಿಮ ಗುಂಪು ಪಂದ್ಯವನ್ನು ಇನ್ನೂ ಆಡಿಲ್ಲ. ಹೀಗಾಗಿ ಒಂದೆರಡು ದಿನಗಳಲ್ಲಿ ಈ ದಾಖಲೆ ಹೆಚ್ಚುದಿನ ಉಳಿಯದು.
ಚೊಚ್ಚಲ ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ -5 ಆಟಗಾರರು
- ರಚಿನ್ ರವೀಂದ್ರ (ನ್ಯೂಜಿಲೆಂಡ್, 2023) – 565*
- ಜಾನಿ ಬೈರ್ಸ್ಟೋವ್ (ಇಂಗ್ಲೆಂಡ್, 2019) – 532
- ಬಾಬರ್ ಅಜಮ್ (ಪಾಕಿಸ್ತಾನ) – 474
- ಬೆನ್ ಸ್ಟೋಕ್ಸ್ (ಇಂಗ್ಲೆಂಡ್, 2019) – 465
- ರಾಹುಲ್ ದ್ರಾವಿಡ್ (ಭಾರತ, 1999) – 461
ನ್ಯೂಜಿಲೆಂಡ್ನ ಯುವ ಸೆನ್ಸೇಷನ್ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಶತಕ ಬಾರಿಸುವ ಮೂಲಕ ಪಂದ್ಯಾವಳಿಗೆ ಅದ್ಭುತ ಪ್ರವೇಶ ಪಡೆದಿದ್ದರು. . ರವೀಂದ್ರ ಅವರು ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ವಿರುದ್ಧ ಎರಡು ಅರ್ಧಶತಕಗಳೊಂದಿಗೆ ಇನ್ನೂ ಎರಡು ಶತಕಗಳೊಂದಿಗೆ ತಮ್ಮ ಅತ್ಯುತ್ತಮ ಓಟವನ್ನು ಮುಂದುವರಿಸಿದರು. ಅವರ ಸ್ಥಿರತೆ ಮತ್ತು ಒತ್ತಡದ ಸಂದರ್ಭಗಳಲ್ಲಿ ಪ್ರದರ್ಶನ ನೀಡುವ ಸಾಮರ್ಥ್ಯವು ಅವರನ್ನು ವಿಶ್ವಕಪ್ ನಾಕೌಟ್ ಹಂತಗಳಲ್ಲಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ನ್ಯೂಜಿಲೆಂಡ್ ತಂಡಕ್ಕೆ ನಿರ್ಣಾಯಕ ಆಸ್ತಿಯನ್ನಾಗಿ ಮಾಡಿದೆ.
ಇದನ್ನೂ ಓದಿ : ಭಾರತ -ಪಾಕ್ ಸೆಮಿಫೈನಲ್ ಪಂದ್ಯ ಸಾಧ್ಯವೇ? ಅದಕ್ಕಾಗಿ ಬಾಬರ್ ಅಜಂ ಪಡೆ ಏನು ಮಾಡಬೇಕು?
ಪಂದ್ಯದಲ್ಲಿ ಏನಾಯಿತು?
ಶ್ರೀಲಂಕಾ ತಂಡದ ವಿರುದ್ಧ 5 ವಿಕೆಟ್ಗಳ ಅಧಿಕಾರಯುತ ಗೆಲುವು ಸಾಧಿಸಿದ ನ್ಯೂಜಿಲ್ಯಾಂಡ್ ತಂಡ ಹಾಲಿ ವಿಶ್ವ ಕಪ್ನ (ICC World Cup 2023) ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಡಿದೆ. ಆದರೆ, ಶನಿವಾರ ನಡೆಯಲಿರುವ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಫಲಿತಾಂಶದ ಬಳಿಕ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ. ಪಾಕಿಸ್ತಾನ ತಂಡವೂ ಸೆಮಿಫೈನಲ್ ರೇಸ್ನಲ್ಲಿದೆ. ಆದರೆ, ಮುಂದಿನ ಪಂದ್ಯವನ್ನು 335 ರನ್ಗಳಿಗಿಂತಳು ಹೆಚ್ಚು ಅಂತರದಿಂದ ಗೆದ್ದರೆ ಮಾತ್ರ ಅದು ಸಾಧ್ಯವಿದೆ. ಹೀಗಾಗಿ ನ್ಯೂಜಿಲ್ಯಾಂಡ್ ನಾಲ್ಕನೇ ತಂಡವಾಗಿ ಸೆಮೀಸ್ ಪ್ರವೇಶ ಮಾಡುವುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಇನ್ನೂ ಎರಡು ದಿನ ಕಾಯಬೇಕಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ 46.4 ಓವರ್ಗಳಲ್ಲಿ 171 ರನ್ಗಳಿಗೆ ಆಲ್ಔಟ್ ಆಯಿತು. ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಇನ್ನೂ 160 ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು 172 ರನ್ ಬಾರಿಸಿ ಗೆಲುವು ಸಾಧಿಸಿತು.